ADVERTISEMENT

ಸುಪ್ರೀಂಕೋರ್ಟ್, ರಕ್ಷಣಾ ಇಲಾಖೆಯಲ್ಲಿಲ್ಲ ಮೀಸಲಾತಿ: ಸಚಿವ ನಾರಾಯಣಸ್ವಾಮಿ ಬೇಸರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 10:26 IST
Last Updated 17 ಅಕ್ಟೋಬರ್ 2022, 10:26 IST
 ಸಚಿವ ನಾರಾಯಣಸ್ವಾಮಿ
ಸಚಿವ ನಾರಾಯಣಸ್ವಾಮಿ   

ಕಲಬುರಗಿ: ಸುಪ್ರೀಂಕೋರ್ಟ್, ರಕ್ಷಣಾ ಇಲಾಖೆಯಲ್ಲಿ ಪರಿಶಿಷ್ಟರಿಗೆ ಮೀಸಲಾತಿಯೇ ಇಲ್ಲ. ಇದರಿಂದಾಗಿ ಸುಪ್ರೀಂಕೋರ್ಟ್ ನಲ್ಲಿ ಪರಿಶಿಷ್ಟ ಸಮುದಾಯದ ನಾಲ್ವರು ನ್ಯಾಯಮೂರ್ತಿಗಳೂ ಕಾಣಸಿಗುವುದಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲು ಆರಂಭಿಸಲಾದ ಡಾ.ಅಂಬೇಡ್ಕರ್ ಶ್ರೇಷ್ಠತಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ವಿಶ್ವವಿದ್ಯಾಲಯಗಳು ಬರೀ ಅಂಕಪಟ್ಟಿ ನೀಡುವ ಕೇಂದ್ರಗಳಾಗಿವೆ. ವಿ.ವಿ.ಗಳಲ್ಲಿ ಓದಿದ ಎಷ್ಟು ವಿದ್ಯಾರ್ಥಿಗಳಿಗೆ ಐಐಟಿ, ಐಐಎಂಗಳಲ್ಲಿ ಸೀಟು ಸಿಗುತ್ತಿವೆ? ಎರಡು ಪದವಿ ಪಡೆದ ಎಷ್ಟೋ ಅಭ್ಯರ್ಥಿಗಳು ₹ 5 ಸಾವಿರ ಸಂಬಳ ಕೊಟ್ಟರೂ ಸಾಕು ಶಿಕ್ಷಕ ವೃತ್ತಿ ಮಾಡಲು ತಯಾರಿದ್ದೇವೆ ಎನ್ನುತ್ತಿದ್ದಾರೆ. ಇಂತಹ ಶಿಕ್ಷಣ ವ್ಯವಸ್ಥೆ ಏಕೆ ಬೇಕು ಎಂದು ಪ್ರಶ್ನಿಸಿದರು.

ADVERTISEMENT

ಪರಿಶಿಷ್ಟ ವಿದ್ಯಾರ್ಥಿಗಳು ಬರೀ ಪದವಿ ಪಡೆಯಲು ವಿಶ್ವವಿದ್ಯಾಲಯಕ್ಕೆ ಬರಬಾರದು. ಬದಲಾಗಿ ತಮ್ಮ ತಂದೆ, ತಾಯಿ ಅನುಭವಿಸಿದ ಯಾತನೆಗಳಿಗೆ ಸ್ವಾತಂತ್ರ್ಯವನ್ನು ನೀಡುವ ನಿಟ್ಟಿನಲ್ಲಿ ಬಾಹ್ಯ ಜ್ಞಾನ ವಿಸ್ತರಿಸಿಕೊಳ್ಳುವ ಶಿಕ್ಷಣ ಪಡೆಯಬೇಕು ಎಂದರು.

ಇಲಾಖೆಯಿಂದಲೇ ಸ್ಟುಡಿಯೊ: ಎಲ್ಲೆಲ್ಲಿ ಸ್ಮಾರ್ಟ್ ಕ್ಲಾಸ್ ಇವೆಯೋ ಅಲ್ಲಿನ ಆಸಕ್ತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯಲು ದೆಹಲಿಯ ಸಚಿವಾಲಯದಲ್ಲಿ ಒಂದು ಸ್ಟುಡಿಯೊ ಆರಂಭಿಸಲಾಗುವುದು. ಅಲ್ಲಿಗೆ ನುರಿತ ಪ್ರಾಧ್ಯಾಪಕರನ್ನು ಕರೆಸಿ ಯುಪಿಎಸ್ಸಿ, ಎಫ್ ಡಿಎ, ಪಿಎಸ್ಐ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೊಡಿಸುವ ಚಿಂತನೆ ಇದೆ. ಕೆಲವೇ ತಿಂಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದರು.

ಇಲಾಖೆಯ ವತಿಯಿಂದ ಪರಿಶಿಷ್ಟ ವಿದ್ಯಾರ್ಥಿಗಳು ವಿದೇಶದಲ್ಲಿ ಓದಲು ಬಯಸಿದರೆ ಅವರಿಗೆ ₹ 2 ಕೋಟಿವರೆಗೆ ನೆರವು ನೀಡಲು ಅವಕಾಶವಿದೆ. ಆದರೆ ಈ ಯೋಜನೆಯನ್ನು ಬಹುತೇಕ ವಿದ್ಯಾರ್ಥಿಗಳು ಬಳಸಿಕೊಳ್ಳುತ್ತಿಲ್ಲ. ಎಷ್ಟೋ ಬಾರಿ ನನ್ನ ಇಲಾಖೆ ಕೆಲಸವನ್ನೇ ಮಾಡಿಲ್ಲ ಎಂಬ ಬೇಸರವೂ ಕಾಡುತ್ತಿದೆ ಎಂದರು.

ಹಲವು ಜನ ಸ್ಪರ್ಧಾತ್ಮಕ ‌ಪರೀಕ್ಷೆ ಉನ್ನತ ಅಧಿಕಾರಿಗಳಾಗಿದ್ದಾರೆ. ಆದರೆ ಅವರಿಗೆ ಶೋಷಿತರ ಬಗ್ಗೆ ಕಾಳಜಿಯೇ ಇಲ್ಲ. ಅಂಥವರು ಅಧಿಕಾರಿಗಳಾಗಲೂ ನಾಲಾಯಕ್ ಎಂದರು.

ಯಾರಿಗೂ ಸಲಾಂ ಹೊಡೆಯಲ್ಲ: ನಾನು ನಿಷ್ಠುರವಾದಿಯಾಗಿದ್ದು, ಅಧಿಕಾರಕ್ಕಾಗಿ ಯಾರಿಗೂ ಸಲಾಂ ಹೊಡೆದಿಲ್ಲ, ಯಾರ ಕಾಲನ್ನೂ ಒತ್ತಿಲ್ಲ. ಶೋಷಿತ ಜನತೆಯ ಹಕ್ಕುಗಳನ್ನು ದೊರಕಿಸಲು ಕೊನೆಯವರೆಗೂ ಹೋರಾಟ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

'ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಬದ್ದ'

ರಾಜ್ಯ ಸರ್ಕಾರವು ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಲು ಬದ್ಧವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಸಕಾರಾತ್ಮಕವಾಗಿ ‌ಸ್ಪಂದಿಸಿದ್ದಾರೆ ಎಂದು ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಸದನದಲ್ಲಿ ಮಂಡನೆಯಾಗುವುದು ಕೊನೆ ಗಳಿಗೆಯಲ್ಲಿ ತಪ್ಪಿ ಹೋಯಿತು. ಅದಕ್ಕೆ ಯಾರು ಕಾರಣ ಎಂಬುದನ್ನು ಹೇಳುವುದಿಲ್ಲ. ಆದರೆ, ನಮ್ಮ ಸರ್ಕಾರ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ಬದ್ಧವಾಗಿದೆ ಎಂದರು.

ಯಾವಾಗ ಮಂಡನೆಯಾಗಲಿದೆ ಎಂಬ ಬಗ್ಗೆ ಕೇಳಿದಾಗ ಸಚಿವರು ಸ್ಪಷ್ಟ ಉತ್ತರ ನೀಡಲಿಲ್ಲ.

ಕಲ್ಯಾಣ ‌ಕರ್ನಾಟಕ ಪ್ರದೇಶ ಅಭಿವೃದ್ಧಿ ‌ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಶಾಸಕ ಸುಭಾಷ್ ಗುತ್ತೇದಾರ, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ. ಬಸವರಾಜ ಡೋಣೂರ, ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಸದಸ್ಯ ದೇವೇಂದ್ರಕುಮಾರ್ ದಾಮೋದರ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.