ADVERTISEMENT

ದೇಶದಲ್ಲಿ ಗಾಂಧೀಜಿ ಆದರ್ಶ ಮಸುಕು: ಸಾಹಿತಿ ಎಸ್‌.ಜಿ.ಸಿದ್ಧರಾಮಯ್ಯ

‘ಬಾಪೂಜಿ’ ತೊಗಲುಬೊಂಬೆ ಆಟ ಪ್ರದರ್ಶನ: ಸಾಹಿತಿ ಎಸ್‌.ಜಿ.ಸಿದ್ಧರಾಮಯ್ಯ ಕಳವಳ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:05 IST
Last Updated 28 ಅಕ್ಟೋಬರ್ 2024, 4:05 IST
ಕಲಬುರಗಿಯ ಎಸ್‌.ಎಂ.ಪಂಡಿತ್‌ ರಂಗಮಂದಿರದಲ್ಲಿ ಭಾನುವಾರ ಪ್ರದರ್ಶನವಾದ ‘ಬಾಪೂಜಿ’ ತೊಗಲುಬೊಂಬೆ ಆಟದ ನೋಟ   –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿಯ ಎಸ್‌.ಎಂ.ಪಂಡಿತ್‌ ರಂಗಮಂದಿರದಲ್ಲಿ ಭಾನುವಾರ ಪ್ರದರ್ಶನವಾದ ‘ಬಾಪೂಜಿ’ ತೊಗಲುಬೊಂಬೆ ಆಟದ ನೋಟ   –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರಗಿ: ‘ದೇಶದಲ್ಲಿ ಗಾಂಧೀಜಿ ಎನ್ನುವ ಆದರ್ಶವೇ ಸಾಕಷ್ಟು ಮಸುಕಾಗುತ್ತಿದೆ‌’ ಎಂದು ಸಾಹಿತಿ ಎಸ್‌.ಜಿ.ಸಿದ್ಧರಾಮಯ್ಯ ಕಳವಳ ವ್ಯಕ್ತಪಡಿಸಿದರು.

ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣದಿಂದ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ‘ಬಾಪೂಜಿ’ ತೊಗಲು ಬೊಂಬೆ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವದಲ್ಲಿ 2ನೇ ಮಹಾಯುದ್ಧದ ಬಳಿಕ ಅಲ್ಲಲ್ಲಿ ಹಿಂಸಾಕೃತ್ಯಗಳು ನಡೆದರೂ ಸೀಮಿತ ನೆಲೆಯಲ್ಲಿದ್ದವು. ಆದರೆ, ಫೆಲಿಸ್ತೇನ್, ಉಕ್ರೇನ್‌ ವಿರುದ್ಧ ವರ್ಷಗಳಿಂದ ಯುದ್ಧಗಳು ನಡೆಯುತ್ತಿವೆ. ಮಣಿಪುರದಲ್ಲೂ ಜನಾಂಗೀಯ ಹಿಂಸಾಕೃತ್ಯಗಳು ಜರುಗುತ್ತಿವೆ. ಇಂಥ ಹೊತ್ತಿನಲ್ಲಿ ಗಾಂಧೀಜಿ ಅವರ ಅಹಿಂಸೆ, ಸತ್ಯಾಗ್ರಹ ಮುಖ್ಯವಾಗುತ್ತವೆ. ಅವು ಜಗತ್ತನ್ನು ಕಾಪಾಡುವಂಥ ತಾತ್ವಿಕ ಶಕ್ತಿಗಳು’ ಎಂದು ಬಣ್ಣಿಸಿದರು.

ADVERTISEMENT

‘ಕಳೆದ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯನ್ನು ಹೃತ್ಪೂರ್ವಕವಾಗಿ ಸ್ಮರಿಸಲಾಯಿತು. ಅದೇ ಹೊತ್ತಿಗೆ ಭಾರತದಲ್ಲಿ ಗಾಂಧೀಜಿ ಚಿತ್ರ ಇಟ್ಟು ಅದಕ್ಕೆ ಗುಂಡು ಹೊಡೆದು ಗಾಂಧಿ ಹತ್ಯೆ ಸಂಭ್ರಮಿಸಲಾಯಿತು. ಇದು ನಾವು ಗಾಂಧಿ ಅವರನ್ನು ನೋಡುತ್ತಿರುವುದಕ್ಕೂ ದಕ್ಷಿಣ ಆಫ್ರಿಕಾದ ಜನ ಗಾಂಧಿ ಅವರನ್ನು ನೋಡುತ್ತಿರುವುದಕ್ಕೂ ಇರುವ ವ್ಯತ್ಯಾಸ’ ಎಂದರು.

ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ‘ರಂಗ ಪ್ರಯೋಗಗಳ ಮೂಲಕ ಗಾಂಧಿ, ಬಸವ, ಅಂಬೇಡ್ಕರ್ ಅವರನ್ನು ಗ್ರಾಮ–ಗ್ರಾಮಕ್ಕೂ ತಲುಪಿಸುವ ಯೋಚನೆಯಿದೆ’ ಎಂದರು.

ರಂಗಾಯಣ ಉಪನಿರ್ದೇಶಕಿ ಜಗದೇಶ್ವರಿ ನಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳ್ಳಾರಿಯ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್‌ನ ಕಲಾವಿದರು ನೀಡಿದ ‘ಬಾಪೂಜಿ’ ತೊಗಲುಗೊಂಬೆ ಪ್ರದರ್ಶನ ಮನೋಜ್ಞವಾಗಿತ್ತು.

ಗಾಂಧೀಜಿ ಎಂಬುದೊಂದು ಜೀವನ ಕ್ರಮ. ಜಗತ್ತಿನಲ್ಲಿ ನಾಗರಿಕತೆ ಎಂಬುದು ಉಳಿಸಲು ಇರುವ ಏಕೈಕ ಆಯ್ಕೆ ಗಾಂಧಿ ವಿಚಾರಧಾರೆ
ಎಂ.ಎಸ್‌.ಆಶಾದೇವಿ ಲೇಖಕಿ

‘ರಾಮನ ಚಾರಿತ್ರ್ಯ ತಿರುಚಲಾಗಿದೆ’

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್‌.ಪಾಟೀಲ ‘ಜಗತ್ತಿನೆಲ್ಲಡೆ ಗಾಂಧೀಜಿಯನ್ನು ಗೌರವಿಸಲಾಗುತ್ತದೆ. 118 ದೇಶಗಳಲ್ಲಿ ಗಾಂಧೀಜಿ ಪುತ್ಥಳಿಗಳಿವೆ. ಆದರೆ ನಮ್ಮ ದೇಶದಲ್ಲಿ ಅವರ ಅವಹೇಳನ ಚಾರಿತ್ರ್ಯಹರಣ ಮಾಡಲಾಗುತ್ತಿದೆ’ ಎಂದು ಬೇಸರಿಸಿದರು. ‘ನಾವೆಲ್ಲ ಗಾಂಧಿ ಆದರ್ಶ ಎಲ್ಲಡೆ ಪ್ರಚಾರ ಮಾಡಿ ಗಾಂಧಿ ಭಾರತ ಕಟ್ಟುವ ಸಂಕಲ್ಪ ಮಾಡಬೇಕಿದೆ’ ಎಂದರು. ‘ವಾಲ್ಮೀಕಿ ಗಾಂಧೀಜಿ ಸೀತೆ ಕಬೀರ್ ಹನುಮಂತ ಅವರೆಲ್ಲ ಕಂಡ ರಾಮನೇ ಬೇರೆ. ಈ ರಾಮನೇ ಬೇರೆ. ಇಂದಿನ ರಾಮ ಕೈಯಲ್ಲಿ ಬಿಲ್ಲು ಹಿಡಿದು ಬಾಣ ಬಿಡುತ್ತಿದ್ದಾನೆ. ರಾಮನ ಚಾರಿತ್ರ್ಯ ತಿರುಚಿ ಅವನನ್ನು ಉಗ್ರವಾದಿಯಾಗಿ ನೋಡುವಂತೆ ಮಾಡಲಾಗುತ್ತಿದೆ. ಇದನ್ನು ಖಂಡಿಸಬೇಕಿದೆ’ ಎಂದರು. ‘ರಾಮ ದಾರ್ಶನಿಕ ಆದರ್ಶ ರಾಜ. ತ್ಯಾಗ ಮಾಡಿ ಕಾಡಿಗೆ ಹೋದಾತ. ಅಂಥ ರಾಮನನ್ನು ಗಾಂಧೀಜಿ ಆರಾಧಿಸುತ್ತಿದ್ದರು. ನಮಗೆ ಬಿಲ್ಲು ಹಿಡಿದ ಕೊಲ್ಲುವ ಜಾತಿ–ಧರ್ಮ ಭೇದ ಮಾಡುವ ರಾಮ ಬೇಕಿಲ್ಲ. ಗಾಂಧೀಜಿ ಆರಾಧಿಸುತ್ತಿದ್ದ ರಾಮ ಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.