ADVERTISEMENT

ಕಾಂಗ್ರೆಸ್‌ ಏಜೆಂಟರಂತೆ ಕೆಲಸ ಮಾಡುತ್ತಿರುವ ಅಧಿಕಾರಿಗಳು: ಅವ್ವಣ್ಣ ಮ್ಯಾಕೇರಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 14:18 IST
Last Updated 9 ಜುಲೈ 2024, 14:18 IST
<div class="paragraphs"><p>ಅವ್ವಣ್ಣ ಮ್ಯಾಕೇರಿ</p></div>

ಅವ್ವಣ್ಣ ಮ್ಯಾಕೇರಿ

   

ಕಲಬುರಗಿ: ‘ಜಿಲ್ಲೆಯ ಅಧಿಕಾರಿಗಳು ಕಾಂಗ್ರೆಸ್‌ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದು, ಆರೋಗ್ಯ, ಶಿಕ್ಷಣ ಸೇರಿದಂತೆ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಕಾನೂನು ಸುವ್ಯವಸ್ಥೆ ಕೂಡ ಹದಗೆಟ್ಟಿದೆ’ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿಥಿಲಗೊಂಡಿರುವ ಶಾಲಾ ತರಗತಿ ಕೊಠಡಿಗಳ ದುರಸ್ತಿಗೂ ಸರ್ಕಾರದ ಬಳಿ ಹಣವಿಲ್ಲ. ಗ್ಯಾರಂಟಿ ನೆಪನಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳನ್ನು ಕೂಡ ಒದಗಿಸಲು ಆಗುತ್ತಿಲ್ಲ’ ಎಂದು ದೂರಿದರು.

ADVERTISEMENT

‘ನಗರದ ಜಿಮ್ಸ್‌ ಆಸ್ಪತ್ರೆ ಎದುರಿನ ಬಾಪುನಗರ ಮಾಂಗಗಾರೂಡಿ ಕಾಲೊನಿಯ ಮರಾಠಿ ಮಾಧ್ಯಮ ಶಾಲೆ ಕಟ್ಟಡಕ್ಕೆ 55 ವರ್ಷಗಳಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದ 157 ಮಕ್ಕಳು ಇಲ್ಲಿ ಕಲಿಯುತ್ತಾರೆ. ಹೊಸ ಕಟ್ಟಡ ನಿರ್ಮಾಣಕ್ಕೆ ₹1 ಕೋಟಿ ಕೊಡಬೇಕು’ ಎಂದು ಆಗ್ರಹಿಸಿದರು.

‘ಜಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ವೈದ್ಯರ ಬಳಿ ರೋಗಿಗಳ ಮಾಹಿತಿಯೇ ಇಲ್ಲ. ಜಿಲ್ಲೆಯಲ್ಲಿ ಡೆಂಗಿ ರೋಗಕ್ಕೆ ಸಂಬಂಧಿಸಿದಂತೆ 926 ಜನರ ಪರೀಕ್ಷೆ ಆಗಿದ್ದು, 195 ಜನರಿಗೆ ಡೆಂಗಿ ದೃಢಪಟ್ಟಿದೆ. ಒಬ್ಬ ರೋಗಿ ಮಾತ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯ ಮೇಲೆ ವಿಶ್ವಾಸ ಇಲ್ಲದ ಕಾರಣ ಜನರು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ’ ಎಂದರು.

ಹೆದ್ದಾರಿ ತಡೆ ಇಂದು: ‘ಅಫಜಲಪುರ ತಾಲ್ಲೂಕಿನ ಕಿರಸಾವಳಗಿ ರಸ್ತೆ ಸರಿಯಿಲ್ಲದ ಕಾರಣ ಗ್ರಾಮಕ್ಕೆ ಬಸ್‌ ಸಂಚರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಜು.10ರಂದು ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕರೊಂದಿಗೆ ಚವಡಾಪುರ ಕ್ರಾಸ್‌ನಲ್ಲಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಲಾಗುವುದು’ ಎಂದು ತಿಳಿಸಿದರು.

ಸುಧೀರ್‌ ಉಪಾಧ್ಯ, ಚಂದ್ರಕಾಂತ ಜಮಾದಾರ, ಗಿರೀಶ ಭಜಂತ್ರಿ, ಜ್ಯೋತಿ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.