ADVERTISEMENT

ಕೈಮಗ್ಗ ಉತ್ಪನ್ನಗಳಿಗೆ ಶೀಘ್ರ ಆನ್‌ಲೈನ್‌ ಮಾರುಕಟ್ಟೆ: ಶ್ರೀಮಂತ ಬಾಳಾಸಾಹೇಬ ಪಾಟೀಲ

ಪ್ರಿಯದರ್ಶಿನಿ ಹ್ಯಾಂಡಲೂಮ್‌ ಮಳಿಗೆಗೆ ಹೈಟೆಕ್ ಸ್ಪರ್ಶ; ಜವಳಿ ಸಚಿವ ಶ್ರೀಮಂತ ಪಾಟೀಲ ಘೋಷಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 15:34 IST
Last Updated 15 ಆಗಸ್ಟ್ 2020, 15:34 IST
ಶ್ರೀಮಂತ ಪಾಟೀಲ
ಶ್ರೀಮಂತ ಪಾಟೀಲ   

ಕಲಬುರ್ಗಿ: 'ಕೈಮಗ್ಗ ಉತ್ಪನ್ನಗಳಿಗೂ ದೊಡ್ಡ ಪ್ರಮಾಣದಲ್ಲಿ ಆನ್‌ಲೈನ್‌ ಮಾರುಕಟ್ಟೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಈಗಾಗಲೇ ಅಮೇಜಾನ್‌, ಪ್ಲಿಪ್‌‌ಕಾರ್ಟ್‌ ಮುಂತಾದ ಆನ್‌ಲೈನ್ ಮಾರುಕಟ್ಟೆ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ'ಎಂದುಜವಳಿ, ಕೈಮಗ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ತಿಳಿಸಿದರು.

'ಕೈಮಗ್ಗ ಉತ್ಪನ್ನಗಳು, ಸಿದ್ಧಹಸ್ತ ಕಲಾವಿದರು ತಯಾರಿಸುವ ಕುಸುರಿ ಕಲೆಯ ಸೀರೆ– ಬಟ್ಟೆಗಳು, ರೇಷ್ಮೆ ಸೀರೆ, ಇಳಕಲ್ ಸೀರೆ, ಗುಳೇದಗುಡ್ಡ ಖಣ (ಕುಪ್ಪಸ) ಸೇರಿದಂತೆ ವೈವಿಧ್ಯಮಯ‌ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುವುದು.ಶೀಘ್ರವೇ ಇದಕ್ಕೆ ಅಂತಿಮ ರೂಪ ನೀಡಲಾಗುವುದು. ಕುಸುರಿ ಕಲಾವಿದರು ತಯಾರಿಸುವ ವಿನೂತನ ಬಟ್ಟೆಗಳಿಗೆ ಬೇಡಿಕೆ ಹೆಚ್ಚಲು ಸಹಕಾರಿ ಆಗಲಿದೆ. ಮಾರುಕಟ್ಟೆ ಕೂಡ ವಿಸ್ತಾರವಾಗಲಿದೆ'ಎಂದು ಅವರು ನಗರದಲ್ಲಿ ಶನಿವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

'ಕೈಮಗ್ಗ, ರೇಷ್ಮೆ ಉತ್ಪನ್ನಗಳನ್ನು ಮಾರಾಟ ಮಾಡುವ ’ಪ್ರಿಯದರ್ಶಿನಿ ಹ್ಯಾಂಡ್‍ಲೂಮ್‌‘ನ ಐದು ಹೈಟೆಕ್ ಮಳಿಗೆಗಳನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುವುದು. ನಂತರ ಹಂತ ಹಂತವಾಗಿ ರಾಜ್ಯದಾದ್ಯಂತ ಹೈಟೆಕ್‌ ಮಳಿಗೆ ತೆರೆಯಲಾಗುವುದು'ಎಂದರು.

ADVERTISEMENT

'ನಿರ್ಲಕ್ಷ್ಯದಿಂದಾಗಿ ಪ್ರಿಯದರ್ಶಿನಿ ಮಳಿಗೆಗಳು ಸೊರಗಿವೆ. ಅವುಗಳಿಗೆ ಕಾರ್ಪೊರೇಟ್ ಮಾದರಿಯಲ್ಲಿ ಆಧುನಿಕ ಸ್ಪರ್ಶ ನೀಡಲಾಗುವುದು. ಇದಕ್ಕಾಗಿ ಸ್ಥಳ ಗುರುತಿಸಲು ಮತ್ತು ಮಳಿಗೆ ಸಿದ್ಧಪಡಿಸುವ ಕೆಲಸವನ್ನು ಖಾಸಗಿ ಏಜೆನ್ಸಿಯೊಂದಕ್ಕೆ ವಹಿಸಿದ್ದೇವೆ' ಎಂದು ತಿಳಿಸಿದರು.

ಶಾದಿಭಾಗ್ಯ ಯೋಜನೆಯಡಿ ರಾಜ್ಯದಲ್ಲಿ 44 ಸಾವಿರ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ತಲಾ ₹ 25 ಮಂಜೂರು ಮಾಡಲಾಗಿದೆ. ಬಿದಾಯಿ, ಶಾದಿಭಾಗ್ಯ ಮೊದಲಾದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳು ಮುಂದುವರಿಯಲಿವೆ. ಅಲ್ಪಸಂಖ್ಯಾತರಿಗೆ ಇರುವ ಯಾವುದೇ ಯೋಜನೆ ನಿಲ್ಲಿಸುವುದಿಲ್ಲ‘ ಎಂದೂ ಭರವಸೆ ನೀಡಿದರು.

ನೇಕಾರರಿಗೆ ವಾರ್ಷಿಕ ಪ್ರಶಸ್ತಿ

'ಜವಳಿ ಉತ್ಪನ್ನಗಳ ಮೇಲೆ ಕುಸುರಿ ಕೆಲಸ ಮಾಡುವ ಸಿದ್ಧಹಸ್ತ ನೇಕಾರರಿಗೆ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ' ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.

'ಪ್ರತಿ ವರ್ಷ ಐದು ಜನ ಸಿದ್ಧಹಸ್ತ ಜವಳಿ ನೇಕಾರರಿಗೆ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗುವುದು. ನಗದು ಬಹುಮಾನ ಜತೆಗೆ ಪ್ರಶಸ್ತಿ ಫಲಕ ಇರುತ್ತದೆ. ಇದಕ್ಕೆ ಮುಖ್ಯಮಂತ್ರಿಗಳೂ ಒಪ್ಪಿಗೆ ನೀಡಿದ್ದಾರೆ. ಜತೆಗೆ, ರಾಜ್ಯದ 1.25 ಲಕ್ಷನೇಕಾರರಿಗೆ ಗುರುತಿನ ಚೀಟಿಗಳನ್ನು ಶೀಘ್ರ ವಿತರಿಸಲಾಗುವುದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.