ADVERTISEMENT

ಕಲಬುರಗಿ | ಜುಲೈ 27ರಿಂದ ಸಾವಯವ ಕೃಷಿ ಜಾತ್ರೆ

170ಕ್ಕೂ ಹೆಚ್ಚು ಪ್ರದರ್ಶನ ಮತ್ತು ಮಾರಾಟ ಮಳಿಗೆ ಸ್ಥಾಪನೆ: ಶಶಿಕಾಂತ ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 5:15 IST
Last Updated 25 ಜುಲೈ 2024, 5:15 IST
ಶಶಿಕಾಂತ ಬಿ.ಪಾಟೀಲ
ಶಶಿಕಾಂತ ಬಿ.ಪಾಟೀಲ   

ಕಲಬುರಗಿ: ‘ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜುಲೈ 27ರಿಂದ 29ರ ವರೆಗೆ ಸಾವಯವ ಕೃಷಿ ಜಾತ್ರೆ ನಡೆಯಲಿದೆ’ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ ತಿಳಿಸಿದರು.

‘ಕಲ್ಯಾಣ ಕರ್ನಾಟಕ ಭಾಗದ ಕೃಷಿಕರಿಗೆ ಸುಸ್ಥಿರ ಮತ್ತು ಸಾವಯವ ಬೇಸಾಯದ ಕುರಿತು ಅರಿವು ಮೂಡಿಸಲು, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಹಾಗೂ ಸಾಧಕ ರೈತರನ್ನು ಪ್ರೋತ್ಸಾಹಿಸಲು ರೈತರ ನಡೆ, ಸಾವಯವ ಕೃಷಿ ಕಡೆ ಘೋಷವಾಕ್ಯದಡಿ ಮೂರು ದಿನ ಕೃಷಿ ಜಾತ್ರೆ ಆಯೋಜಿಸಲಾಗುತ್ತಿದೆ. ಜಾತ್ರೆಗೆ ಅಗತ್ಯವಾದ ಸಿದ್ಧತೆಗಳು ಭರದಿಂದ ನಡೆಯುತ್ತಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜು. 27ರ ಬೆಳಿಗ್ಗೆ 10ಕ್ಕೆ ಕನ್ಹೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಿಣಿ ಎಸ್.ಅಪ್ಪಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಶಿವಯೋಗಿ, ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಬೆಳಗುಂಪಾದ ಅಭಿನವ ಪರುತೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು’ ಎಂದು ಹೇಳಿದರು.

ADVERTISEMENT

‘ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪ್ರಿಯಾಂಕ್ ಖರ್ಗೆ, ಎನ್‌.ಚಲುವರಾಯಸ್ವಾಮಿ, ಡಾ. ಶರಣಪ್ರಕಾಶ ಪಾಟೀಲ, ಶರಣಬಸ‍ಪ್ಪ ದರ್ಶನಾಪುರ, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ ಸೇರಿದಂತೆ ಶಾಸಕರು ಪಾಲ್ಗೊಳ್ಳುವರು. ಮಧ್ಯಾಹ್ನ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡುವರು. ಸಂಜೆ 5ಕ್ಕೆ ಕಲಾವಿದರಿಂದ ಹಾಸ್ಯ ಚಟಾಕೆ, ವಿದ್ಯಾರ್ಥಿಗಳಿಂದ ‘ಸಾಲದ ಹೆಣ’ ನಾಟಕ ಪ್ರದರ್ಶನ ಸೇರಿ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ಮಾಹಿತಿ ನೀಡಿದರು.

‘28ರಂದು ನಡೆಯುವ ಔಷಧಿ ಮತ್ತು ಸುಗಂಧ ಸಸ್ಯಗಳು ಕುರಿತ ಚರ್ಚಾಗೋಷ್ಠಿಯ ಸಾನ್ನಿಧ್ಯವನ್ನು ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ ವಹಿಸುವರು. ಚಿನಮಗೇರಿಯ ಸಿದ್ದರಾಮ ಶಿವಾಚಾರ್ಯರ ಉಪಸ್ಥಿತಿ ಇರಲಿದೆ. ಸಂಜೆ 5ಕ್ಕೆ ಸಾವಯವ ಕೃಷಿಯಲ್ಲಿ ಸಾಧನೆಗೈದ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶ್ವಾನ, ಬೆಕ್ಕು, ಕುದುರೆ ಹಾಗೂ ಜಾನುವಾರು ಪ್ರದರ್ಶನ ಏರ್ಪಡಿಸಲಾಗುವುದು. 170ಕ್ಕೂ ಹೆಚ್ಚು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. 100ಕ್ಕೂ ಅಧಿಕ ಮಳಿಗೆಗಳು ನೋಂದಣಿಯಾಗಿವೆ’ ಎಂದು ತಿಳಿಸಿದರು.

ಕೆಕೆಸಿಸಿಐ ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಗಂಜ್‌ ಅಸೋಸಿಯೇಷನ್‌ ಅಧ್ಯಕ್ಷ ಶ್ರೀಮಂತ ಉದನೂರ, ಆಹಾರಧಾನ್ಯ ಮತ್ತು ಕಾಳು ಕಡಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಸಂತೋಷ ಲಂಗರ್ ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.