ADVERTISEMENT

ಎಳೆಯರ ದುಡಿಮೆ: ಸಿಗದ ಮುಕ್ತಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 5:51 IST
Last Updated 12 ಜೂನ್ 2022, 5:51 IST
ಬಾಲಕಾರ್ಮಿಕರ ಪ್ರಕರಣಗಳು
ಬಾಲಕಾರ್ಮಿಕರ ಪ್ರಕರಣಗಳು   

ಕಲಬುರಗಿ: ಬಾಲ ಕಾರ್ಮಿಕ ಪದ್ಧತಿ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದ್ದು, ಪೂರ್ಣಪ್ರಮಾಣದಲ್ಲಿ ಇನ್ನೂ ಕಡಿವಾಣ ಬಿದ್ದಿಲ್ಲ. ಈ ಪದ್ಧತಿ ಕೊನೆಗಾಣಿಸಲು ಸರ್ಕಾರ ಹಲವು ಹಂತದ ಪ್ರಯತ್ನ ನಡೆಸಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಸಿಗುತ್ತಿಲ್ಲ.

ಬಡತನ, ವಿವಿಧ ಇಲಾಖೆಗಳ ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆ, ಬಾಲಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ)ಕಾಯ್ದೆಯ ಅಸಮರ್ಪಕ ಅನುಷ್ಠಾನ, ಕಾರ್ಮಿಕ ಇಲಾಖೆ ಸಿಬ್ಬಂದಿಯ ಅಭಾವ, ಪುನರ್ವಸತಿ ಕೇಂದ್ರಗಳ ಸ್ಥಗಿತ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಬಾಲಕಾರ್ಮಿಕ ಪದ್ಧತಿ ಕೊನೆಗೊಂಡಿಲ್ಲ.

‘14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಹೀಗೆ ದುಡಿಯುವ ಮಕ್ಕಳನ್ನು ರಕ್ಷಿಸಲು ಮತ್ತು ಶಿಕ್ಷಣ ಕೊಡಿಸಲು ಕಾರ್ಮಿಕ ಇಲಾಖೆ ಮತ್ತು ಸರ್ಕಾರೇತರ ಸಂಘಸಂಸ್ಥೆಗಳು ಪ್ರಯತ್ನ ನಡೆಸುತ್ತಲೇ ಇವೆ.

ADVERTISEMENT

‘ಬಾಲಕಾರ್ಮಿಕರು ಇರುವ ಬಗ್ಗೆ ಸುಳಿವು ದೊರೆತ ಕೂಡಲೇ ಅಲ್ಲಿ ಕಾರ್ಯಾಚರಣೆ ನಡೆಸುತ್ತೇವೆ. ಆದರೆ, ಅಷ್ಟರಲ್ಲಿ ಅಲ್ಲಿನ ಮಾಲೀಕರು ಬಾಲಕಾರ್ಮಿಕರನ್ನು ಅಲ್ಲಿಂದ ಬೇರೆಡೆ ಕಳುಹಿಸುತ್ತಾರೆ ಅಥವಾ ಕಾಣದಂತೆ ಮಾಡುತ್ತಾರೆ. ಇದರಿಂದಾಗಿ ಅವರನ್ನು ಪತ್ತೆ ಮಾಡಿ, ಕೆಲ ಸಂದರ್ಭಗಳಲ್ಲಿ ಕಷ್ಟವಾಗುತ್ತದೆ’ ಎಂದು ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡತನದಿಂದ ಬೇಸತ್ತು ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ, ದುಡಿಮೆಗೆ ಹಚ್ಚುತ್ತಾರೆ. ಅವರ ಭವಿಷ್ಯದ ಬಗ್ಗೆ ಅರಿವಿಲ್ಲದೆ ಮತ್ತೆ ಕೆಲವರು ತಮ್ಮ ಅಂಗಡಿಗಳಲ್ಲಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಹಣ ಕೈಸೇರಿದ ಬಳಿಕ ಮಕ್ಕಳು ಶಿಕ್ಷಣದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ’ ಎಂದು ಅವರು ತಿಳಿಸಿದರು. ‘ಇಟ್ಟಂಗಿ ಭಟ್ಟಿ, ಗ್ಯಾರೇಜ್, ಹೋಟೆಲ್‌ ಮತ್ತು ಗ್ರಾಮೀಣ ಪ್ರದೇಶದ ಚಿತ್ತಾಪುರ, ಜೇವರ್ಗಿ, ಸೇಡಂ ತಾಲ್ಲೂಕುಗಳಲ್ಲಿ ಅತ್ಯಧಿಕ ಬಾಲಕಾರ್ಮಿಕರು ಕಂಡುಬರುತ್ತಾರೆ. ತಂದೆ–ತಾಯಿ ಜೊತೆಯಲ್ಲಿದ್ದು, ದುಡಿಮೆ ಮಾಡುತ್ತಿದ್ದರೇ ಪ್ರಕರಣ ದಾಖಲಿಸುವುದು ಕಷ್ಟ. ಮೊದಲ ಬಾರಿಗೆ ಎಚ್ಚರಿಕೆ ಕೊಡಬಹುದು’ ಎಂದು ಅವರು ವಿವರಿಸಿದರು.

‘ಪದೇ ಪದೇ ಅದೇ ತಪ್ಪು ಎಸಗಿದರೆ ₹ 10 ಸಾವಿರ ದಂಡ, ಕೋರ್ಟ್‌ ಆದೇಶದಂತೆ ಶಿಕ್ಷೆ ಅನುಭವಿಸಬೇಕು. ಕೆಲಸಕ್ಕೆ ಇರಿಸಿಕೊಂಡ ಮಾಲೀಕರಿಗೆ ₹ 20–₹ 50 ಸಾವಿರ ದಂಡ ಅಥವಾ 2 ವರ್ಷಗಳವರೆಗೆ ಜೈಲು ಶಿಕ್ಷೆ, ಜಿಲ್ಲಾಧಿಕಾರಿ ಪುನರ್ವವಸತಿ ನಿಧಿಗೆ ₹ 20 ಸಾವಿರ ದಂಡ ಕಟ್ಟಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

10 ಪುನರ್ವಸತಿ ಕೇಂದ್ರ ಸ್ಥಗಿತ

ಬಾಲಕಾರ್ಮಿಕರ ರಕ್ಷಣೆಗೆಂದೇ ಜಿಲ್ಲೆಯಲ್ಲಿ 10 ಪುನರ್ವಸತಿ ಕೇಂದ್ರಗಳು ಇದ್ದವು. ಬಾಲಕಾರ್ಮಿಕರು ಸೇರಿ ಅನಾಥರು, ಬೀದಿ ಬದಿ ಮಕ್ಕಳು, ಶಾಲೆ ಬಿಟ್ಟವರಿಗೆ ಸೇತು ಬಂಧು ತರಬೇತಿ ಮೂಲಕ ಅನೌಪಚಾರಿಕ ಶಿಕ್ಷಣ ನೀಡಿ, ಅವರ ಮನಪರಿವರ್ತಿಸಿ ವಸತಿ ಶಾಲೆಗೆ ದಾಖಲಿಸಲಾಗುತಿತ್ತು. ಆದರೆ, 2015ರಲ್ಲಿ ರಾಜ್ಯ ಸರ್ಕಾರ ಎಲ್ಲ ಪುನರ್ವಸತಿ ಕೇಂದ್ರಗಳನ್ನು ಸ್ಥಗಿತಗೊಳಿಸಿತು.

‘ಈಗ ಬಾಲಕಾರ್ಮಿಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಿಪಡಿಸಿದ ಬಳಿಕ ಬಾಲಮಂದಿರ, ಬಿಸಿಎಂ, ವಸತಿ ನಿಲಯಗಳಲ್ಲಿ ಇರಿಸಲಾಗುತ್ತದೆ. ದುಡಿಮೆಯಿಂದ ಆಗಷ್ಟೇ ಹೊರ ಬಂದ ಮಕ್ಕಳು ನಿತ್ಯ ಶಾಲೆಗೆ ತೆರಳುವ ಮಕ್ಕಳೊಂದಿಗೆ ಬೆರೆಯುವುದಿಲ್ಲ. ಅವರಲ್ಲಿ ಕೀಳರಿಮೆಯ ಭಾವ ಮೂಡುತ್ತಿದೆ’ ಎಂಬುದು ಸಹಾಯಕ ಕಾರ್ಮಿಕ ಆಯುಕ್ತ ಕಚೇರಿ ಅಧಿಕಾರಿಯ ಹೇಳಿಕೆ.

11 ಇಲಾಖೆಗಳು, ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ

ಬಾಲಕಾರ್ಮಿಕ ಪದ್ಧತಿ ನಿವಾರಣೆಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯ ಜತೆಗೆ ಕಂದಾಯ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಕಾರ್ಖಾನೆ, ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕೃಷಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗಳು ಒಟ್ಟಾಗಿ ಇಲ್ಲವೇ ತಾವೇ ಖುದ್ದಾಗಿ ದಾಳಿ ನಡೆಸುವ ಅಧಿಕಾರವಿದೆ. ಆದರೆ, ಅವರ ಅಂತಹ ಕ್ರಮಕ್ಕೆ ಮುಂದಾಗುತ್ತಿಲ್ಲ.

ಪಿಡಿಒಗಳು, ತಾಲ್ಲೂಕು ಪಂಚಾಯಿತಿ ಇಒಗಳು, ತಹಶೀಲ್ದಾರರು, ಉಪತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಂದಾಯ ಇನ್‌ಸ್ಪೆಕ್ಟರ್‌ಗಳು, ಕೃಷಿ ಅಧಿಕಾರಿಗಳು, ನಗರ ಸಭೆ ಆಯುಕ್ತರು ಒಳಗೊಂಡಂತೆ 17 ನಿರೀಕ್ಷಕರನ್ನು ನಿಯೋಜಿಸಲಾಗಿದೆ. ‘ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳ ಸುಮಾರು 500 ಜನರನ್ನು ನಿರೀಕ್ಷಕರನ್ನಾಗಿ ನೇಮಿಸಲಾಗಿದೆ. ಎಲ್ಲರೂ ಒಂದೇ ಒಂದು ಪ್ರಕರಣ ದಾಖಲಿಸಿದರೆ ವರ್ಷಕ್ಕೆ 500 ಮಕ್ಕಳನ್ನು ಕಾಪಾಡಬಹುದು. ಕಾರ್ಮಿಕ ಇಲಾಖೆಯಲ್ಲಿ ಕೇವಲ 3 ಸಿಬ್ಬಂದಿ ಇದ್ದಾರೆ. ನಗರದ ಜತೆಗೆ 11 ತಾಲ್ಲೂಕುಗಳಿಗೆ ಎಲ್ಲಿಗೆ ಹೋಗಿ ಮಕ್ಕಳನ್ನು ರಕ್ಷಿಸಬೇಕು‌’ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಎಲ್ಲಿಯಾದರೂ 14 ವರ್ಷದ ಒಳಗಿನ ಮಕ್ಕಳು ದುಡಿಯುತ್ತಿರುವುದು ಕಂಡುಬಂದರೇ ಸಾರ್ವಜನಿಕರು ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬಹುದು. ಇಲ್ಲವೇ ಚೈಲ್ಡ್ ಲೈನ್-1098ಗೆ ಕರೆ ಮಾಡಬಹುದು. ತಕ್ಷಣವೇ ದಾಳಿ ಮಾಡಿ ಬಾಲಕಾರ್ಮಿಕ ಮಕ್ಕಳನ್ನು ರಕ್ಷಿಸುತ್ತೇವೆ.
ಅವಿನಾಶ ನಾಯಕ್‌, ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.