ಕಲಬುರಗಿ: ಆರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಭೀಮಾ ನದಿಯ ನರಿಬೋಳ –ಚಾಮನೂರ ನಡುವಣ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಸೆ.16ರಂದು ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆ ನಿರ್ಧಾರದಿಂದ ನರಿಬೋಳ –ಚಾಮನೂರ ಸುತ್ತಲಿನ ಗ್ರಾಮಸ್ಥರು ಹಿಂದೆ ಸರಿಸಿದ್ದಾರೆ.
ಸ್ಥಗಿತಗೊಂಡಿರುವ ಸೇತುವೆ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿದ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ‘ಸದ್ಯಕ್ಕೆ ಪಾದಯಾತ್ರೆ ಬೇಡ. ಎರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಿ, ನಾಲ್ಕು ತಿಂಗಳಲ್ಲಿ ಕೆಲಸ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜೊತೆಗೂ ಚರ್ಚಿಸಿರುವೆ. ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಯದಿದ್ದರೆ, ಖುದ್ದು ನಾನೇ ನಿಮ್ಮೆಲ್ಲರನ್ನು ಕರೆದುಕೊಂಡು ಮುಖ್ಯಮಂತ್ರಿ ಮತ್ತು ಸಚಿವ ಜಾರಕಿಹೊಳಿ ಅವರ ಹತ್ತಿರ ನಿಯೋಗ ತೆಗೆದುಕೊಂಡು ಹೋಗುವೆ’ ಎಂದು ಭರವಸೆ ನೀಡಿದರು.
‘ನಿಮ್ಮ ಮನವಿಗೆ ಸ್ಪಂದಿಸಿ ಪಾದಯಾತ್ರೆ ನಿರ್ಧಾರದಿಂದ ಹಿಂದೆ ಸರಿಯಲಾಗುವುದು’ ಎಂದು ಪಾದಯಾತ್ರೆಯ ಮುಂದಾಳತ್ವ ವಹಿಸಿದ್ದ ಪ್ರಮುಖರಾದ ಎಂ.ಎಸ್.ಪಾಟೀಲ ನರಿಬೋಳ, ಶರಣಗೌಡ ಪಾಟೀಲ ಚಾಮನೂರ, ಶರಣಗೌಡ ಪೊಲೀಸ್‌ಪಾಟೀಲ ನರಿಬೋಳ, ರಾಘವೆಂದ್ರ ಕುಲಕರ್ಣಿ, ಗುರುರಾಜ ಟಣಕೆದಾರ, ಭೀಮರಾಯ ಕಾಖಂಡಕಿ ಸೇರಿದಂತೆ ಹಲವರು ಪ್ರಮುಖರು ಘೋಷಿಸಿದರು.
ಸಿದ್ಧಲಿಂಗರಡ್ಡಿ ಬೀರಾಳ, ಖಾಸಿಂ ಪಟೇಲ್, ವಿಜಯಕುಮಾರ ಹಿರೇಮಠ, ಗುರುರಾಜ ಸುಬೇದಾರ ಶಾಂತಗೌಡ ಪಾಟೀಲ, ಸಿದ್ಧರಾಮ ಗಡ್ಡದ, ನಿಂಗಣ್ಣ ಗಡ್ಡದ, ಮಗೇಶ ರಾವೂರ, ಮಾಳಪ್ಪ ಪೂಜಾರಿ, ಕರೆಪ್ಪ ಭೀಮಣ್ಣ ಕುಸ್ತಿ, ನಬಿಸಾಬ್ ದರ್ವೆಸಿ, ಬಾಬುಮಿಯಾ ಗೂಡುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.