ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ರಾಶಿ ಮಾಡುವ ಕೆಲಸ ಭರದಿಂದ ನಡೆದಿದೆ. ಆದರೆ ಮೋಡ ಕವಿದ ವಾತಾವರಣವು ರೈತರನ್ನು ಚಿಂತೆಗೀಡು ಮಾಡಿದೆ.
ಮುಂಗಾರು ಹಂಗಾಮಿನಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹಾಗೂ ಕಾಲುವೆಗೆ ಜುಲೈ ಮೂರನೇ ವಾರದಲ್ಲಿ ನೀರು ಹರಿಸಿದ್ದರಿಂದ ನಿಗದಿತ ಸಮಯಕ್ಕೆ ಭತ್ತ ನಾಟಿ ಮಾಡಲಾಗಿತ್ತು. ಈ ಬಾರಿ ಭತ್ತದ ಇಳುವರಿ ಚೆನ್ನಾಗಿ ಬರುತ್ತಿದೆ. ಎಕರೆಗೆ 45 ರಿಂದ 50 ಚೀಲದವರೆಗೂ ಇಳುವರಿ ಬರುತ್ತಿದೆ. ಆದರೆ ಪದೇ ಪದೇ ಮೋಡ ಕವಿದ ವಾತಾವರಣ ಉಂಟಾಗುತ್ತಿದೆ. ಭತ್ತ ನೆಲಕ್ಕೆ ಉರುಳಿ ಬೀಳುತ್ತಿದೆ. ಕಟಾವಿನ ಖರ್ಚು ಹೆಚ್ಚಾಗುತ್ತಿದೆ ಎನ್ನುತ್ತಾರೆ ರಾಜನಕೋಳೂರ ಗ್ರಾಮದ ರೈತ ತಿರುಪತಿ.
‘ಬೆಲೆ ಕುಸಿತ ಭೀತಿ ಉಂಟಾಗಿದೆ ಎನ್ನುತ್ತಾರೆ’ ಕಾಮನಟಗಿ ಗ್ರಾಮದ ರೈತರಾದ ನರಸಿಂಹರಾವ ಜಾಹಗೀರದಾರ ಹಾಗೂ ರಂಗಪ್ಪ ಡಂಗಿ. ‘ಒಂದು ವಾರದಿಂದ ಭತ್ತದ ಧಾರಣೆ ಕುಸಿಯುತ್ತಿದೆ. 75 ಕೆ.ಜಿ ಭತ್ತದ ಚೀಲಕ್ಕೆ ₹1390 ಇದ್ದದ್ದುಈಗ ₹1250 ಕ್ಕೆ ಕುಸಿದಿದೆ. ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ’ ಎನ್ನುತ್ತಾರೆ ರೈತರಾದ ಮಲ್ಲನಗೌಡ ಅಮಲಿಹಾಳ ಹಾಗೂ ಚಂದಪ್ಪ ಗಿಂಡಿ.
‘ಕಳೆದೆರಡು ದಿನಗಳಿಂದ ಮಂಜು ಕವಿದ ವಾತಾವರಣ ಇದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಭತ್ತದ ಕಟಾವು ಯಂತ್ರಗಳ ದಲ್ಲಾಳಿಗಳು ದಿನದಿಂದ ದಿನಕ್ಕೆ ಹೆಚ್ಚಿನ ದರ ಹೇಳುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ರೈತರ ನೆರವಿಗೆ ಬರಬೇಕು’ ಎಂದು ಭಾರತೀಯ ಕಿಸಾನ ಸಂಘದ ತಾಲ್ಲೂಕು ಅಧ್ಯಕ್ಷ ರುದ್ರಗೌಡ ಗುಳಬಾಳ ಒತ್ತಾಯಿಸಿದರು.
‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದೆ. ಬೆಲೆ ಕುಸಿತದಿಂದ ಕಂಗೆಡುತ್ತಿರುವ ರೈತರ ನೆರವಿಗೆ ಸರ್ಕಾರ ಬರಬೇಕು. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಈಗಾಗಲೇ ಮನವಿ ಸಲ್ಲಿಸಿದ್ದರೂ ಇನ್ನೂ ಕಾರ್ಯಗತವಾಗಿಲ್ಲ’ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಮುಖಂಡ ಮಹಾದೇವಿ ಬೇನಾಳಮಠ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೃಷ್ಣಾ, ತುಂಗಭದ್ರಾ, ಕಾವೇರಿ ಮತ್ತಿತರ ಭಾಗಗಳಲ್ಲಿಯೂ ಭತ್ತ ಏಕ ಕಾಲಕ್ಕೆ ಕಟಾವಿಗೆ ಬಂದಿದೆ. ಹೀಗಾಗಿ ಖರೀದಿದಾರರಿಗೆ ಸ್ಥಳೀಯವಾಗಿ ಭತ್ತ ಸಿಗುತ್ತಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ದೊಡ್ಡ ಮಿಲ್ ಮಾಲೀಕರು, ಖರೀದಿದಾರರು ಇನ್ನೂ ಬರತೊಡಗಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.