ಕಲಬುರಗಿ: ‘ಪಹಣಿಗಳೊಂದಿಗೆ (ಆರ್‌ಟಿಸಿ) ಆಧಾರ್ ಜೋಡಣೆಯ ನನ್ನ ಆಸ್ತಿ ಅಭಿಯಾನ ಭರದಿಂದ ನಡೆಯುತ್ತಿದ್ದು, ಜಿಲ್ಲೆಯ 8.76 ಲಕ್ಷ ಜಮೀನು ಮಾಲೀಕರ ಪೈಕಿ 4.77 ಲಕ್ಷ ಮಾಲೀಕರು ಪಹಣಿಗಳೊಂದಿಗೆ ಆಧಾರ್ ಜೋಡಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದರು.
‘ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಸೀಡಿಂಗ್ ಮಾಡಲು ಡಿಜಿಟಲ್ ತಂತ್ರಜ್ಞಾನ ಬಳಸಲಾಗುತ್ತಿದೆ. ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆ ಆಧಾರ್‌ನೊಂದಿಗೆ ಲಿಂಕ್ ಮಾಡಿಕೊಳ್ಳಬಹುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಎರಡೂವರೆ ತಿಂಗಳಿನಿಂದ ಗ್ರಾಮ ಆಡಳಿತಾಧಿಕಾರಿಗಳು ಪಹಣಿಗೆ ಆಧಾರ್ ಜೋಡಣೆಯಲ್ಲಿ ನಿರತವಾಗಿದ್ದಾರೆ. 41,489 ಜಮೀನು ಭೂ ಪರಿವರ್ತನೆಯಾಗಿದ್ದು, 67,375 ಪಹಣಿಗಳ ಮಾಲೀಕರು ನಿಧನರಾಗಿದ್ದಾರೆ. ವಾರದೊಳಗೆ ಉಳಿದ ಜೋಡಣೆ ಕಾರ್ಯ ಪುರ್ಣಗೊಳಿಸಲಾಗುವುದು’ ಎಂದರು.
‘ಆರ್‌ಟಿಸಿ ಮಾಲೀಕರ ಮರಣ ಪ್ರಕರಣಗಳಲ್ಲಿ ಆಸ್ತಿಯನ್ನು ಅವರ ಕುಟುಂಬಸ್ಥರ ಅಥವಾ ವಾರಸುದಾರರ ಹೆಸರಿನಲ್ಲಿ ಕಾನೂನಾತ್ಮಕವಾಗಿ ವರ್ಗಾಯಿಸಲು ಆಗಸ್ಟ್ 15ರಿಂದ ಪೌತಿ ಖಾತೆ ಅಭಿಯಾನ ನಡೆಸಲಾಗುವುದು. ವಿವಾದಿತ ಜಮೀನುಗಳನ್ನು ನ್ಯಾಯಾಲಯದ ಅಂತಿಮ ತೀರ್ಪಿನ ಪ್ರಕಾರ ಮುಂದಿನ ಕ್ರಮ ವಹಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.
‘ಪಹಣಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ. ಆಸ್ತಿ ಜೋಡಣೆ ಮಾಡಿಕೊಂಡರೆ ಆಸ್ತಿಗಳ ಗ್ಯಾರಂಟಿ ಭೂಮಾಲೀಕರಿಗೆ ಸಿಗಲಿದೆ. ಆಸ್ತಿಯ ಮೋಸ, ವಂಚನೆ, ಅವ್ಯವಹಾರ ತಡೆಯಲು ಸಾಧ್ಯವಾಗಲಿದೆ. ಸರ್ಕಾರಿ ಸೌಲಭ್ಯ, ಬೆಳೆ ಹಾನಿಯ ಪರಿಹಾರವೂ ನೇರವಾಗಿ ದೊರಕಲಿದೆ’ ಎಂದು ಹೇಳಿದರು.
‘ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಒಟಿಪಿ, ಎಸ್‌ಎಂಎಸ್ ಮೂಲಕ ನಿಜವಾದ ಮಾಲೀಕರನ್ನು ಖಚಿತಪಡಿಸಿಕೊಂಡು, ಅವರ ಭಾವಚಿತ್ರ ಸೆರೆಹಿಡಿದು ಸ್ಥಳದಲಿಯೇ ಆಧಾರ್ ಜೋಡಣೆ ಮಾಡುವರು. ಇದಕ್ಕೆ ಭೂಮಾಲೀಕರು ಸಹಕರಿಸಬೇಕು’ ಎಂದು ಕೋರಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಉಪಸ್ಥಿತರಿದ್ದರು.
ರಾಜ್ಯದ ಸರಾಸರಿ ಪಹಣಿಗೆ ಆಧಾರ್ ಸೀಡಿಂಗ್ ಪ್ರಮಾಣ ಶೇ 63ರಷ್ಟು ಇದ್ದರೇ ಜಿಲ್ಲೆಯ ಪ್ರಮಾಣ ಶೇ 67ರಷ್ಟಿದೆ. ಭೂಮಾಲೀಕರು ಅಗತ್ಯ ಮಾಹಿತಿ ನೀಡಿ ಸಹಕಾರ ನೀಡಬೇಕುಬಿ.ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
ಸರ್ಕಾರಿ ಜಮೀನು ರಕ್ಷಣೆಗೆ ಲ್ಯಾಂಡ್ ಬೀಟ್
‘ಸರ್ಕಾರಿ ಜಮೀನು ಒತ್ತುವರಿ ಅತಿಕ್ರಮಣ ಭೂಗಳ್ಳರಿಂದ ರಕ್ಷಿಸಲು ಕಂದಾಯ ಇಲಾಖೆಯು ಲ್ಯಾಂಡ್ ಬೀಟ್ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಇದರಿಂದ ಗೈರಾಣ ಗೋಮಾಳ ಸೇರಿದಂತೆ 1.4 ದಶಲಕ್ಷ ಸರ್ಕಾರಿ ಆಸ್ತಿಗಳ ಭೌಗೋಳಿಕ ಗಡಿ ಮತ್ತು ಸರ್ವೇ ನಂಬರ್ ಒಳಗೊಂಡ ಡಿಜಿಟಲ್ ದಾಖಲೆಗಳು ಒಂದು ಕಡೆ ಜಮೆಯಾಗಲಿವೆ’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು. ‘ಗ್ರಾಮ ಆಡಳಿತಾಧಿಕಾರಿಗಳು 31972 ಸರ್ಕಾರಿ ಆಸ್ತಿಗಳ ಪೈಕಿ 29954 ಆಸ್ತಿಯನ್ನು ಗುರುತಿಸಿದ್ದಾರೆ. ಶೇ 93.69ರಷ್ಟು ಪ್ರಗತಿ ಸಾಧಿಸಿದ್ದು ಸರ್ಕಾರಿ ಯೋಜನೆಗಳಡಿ ಕಟ್ಟಡಗಳ ನಿರ್ಮಾಣ ಕೈಗಾರಿಕೆ ಸ್ಥಾಪನೆಗೆ ಜಮೀನಿನ ಲಭ್ಯತೆಯ ಮಾಹಿತಿ ದೊರೆಯಲಿದೆ’ ಎಂದರು. ‘ಗ್ರಾಮ ಆಡಳಿತಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ಜಮೀನಿಗೆ ಭೇಟಿ ನೀಡಿ ಜಮೀನಿನ ಗಡಿ ಸುತ್ತ ಟ್ರಾನ್ಸಿಟ್ ವಾಕ್ ಮೂಲಕ ಜಿಪಿಎಸ್ ಆಧಾರಿತ ಜಮೀನಿನ ಚಿತ್ರ ಸೆರೆ ಹಿಡಿದು ತಂತ್ರಾಂಶದಲ್ಲಿ ದಾಖಲಿಸುವರು. ಅತಿಕ್ರಮಣ ಒತ್ತುವರಿಯಾದಾಗ ತಕ್ಷಣವೇ ಕ್ರಮ ತೆಗೆದುಕೊಳ್ಳಲು ಅನುಕೂಲವಾಗಲಿದೆ’ ಎಂದರು. ‘ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಕಂದಾಯ ಇಲಾಖೆಯ ಅಭಿಲೇಖಾಲಯದಲ್ಲಿರುವ ದಾಖಲೆಗಳ ಪೈಕಿ ಶೇ 99ರಷ್ಟು ದಾಖಲೆಗಳು ಸ್ಕ್ಯಾನ್ ಮಾಡಿ ಡಿಜಿಟಲ್ ದಾಖಲೀಕರಣ ಮಾಡಲಾಗಿದೆ. ಇತರೆ ತಾಲ್ಲೂಕುಗಳಲ್ಲಿಯೂ ಡಿಜಿಟಲ್ ದಾಖಲೀಕರಣಕ್ಕೆ ಆಗಸ್ಟ್ 1ರಂದು ಚಾಲನೆ ನೀದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.