ADVERTISEMENT

ಕಲಬುರಗಿ | ಬಿಸಿಲೂರಿನಲ್ಲಿ ಮೇಳೈಸಿದ ದೃಶ್ಯಕಲಾ ವೈಭವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 6:38 IST
Last Updated 15 ಜನವರಿ 2024, 6:38 IST
<div class="paragraphs"><p>ಕಲಬುರಗಿಯ ಮಹಾನಗರ ಪಾಲಿಕೆ ಟೌನ್‌ಹಾಲ್‌ ಬಳಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರ ಸಂತೆಯಲ್ಲಿ ಸಾಧಕ ಕಲಾವಿದರಾದ ಮಾನಯ್ಯ ಬಡಿಗೇರ, ಎ.ಎಸ್.ಪಾಟೀಲ, ಮಹಾದೇವಪ್ಪ ಶಿಲ್ಪಿ, ಜೆ.ಎಸ್‌.ಖಂಡೇರಾವ್, ಬಸವರಾಜ ಜಾನೆ ಅವರನ್ನು ಸನ್ಮಾನಿಸಲಾಯಿತು.</p></div>

ಕಲಬುರಗಿಯ ಮಹಾನಗರ ಪಾಲಿಕೆ ಟೌನ್‌ಹಾಲ್‌ ಬಳಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರ ಸಂತೆಯಲ್ಲಿ ಸಾಧಕ ಕಲಾವಿದರಾದ ಮಾನಯ್ಯ ಬಡಿಗೇರ, ಎ.ಎಸ್.ಪಾಟೀಲ, ಮಹಾದೇವಪ್ಪ ಶಿಲ್ಪಿ, ಜೆ.ಎಸ್‌.ಖಂಡೇರಾವ್, ಬಸವರಾಜ ಜಾನೆ ಅವರನ್ನು ಸನ್ಮಾನಿಸಲಾಯಿತು.

   

ಕಲಬುರಗಿ:‌ ನಿಸರ್ಗ ಸೊಬಗು ಅಲ್ಲಿ ಕಾಗದದಲ್ಲಿ ಬಂದಿಯಾಗಿತ್ತು. ಶರಣರ ಕಾಲದ ಸನ್ನಿವೇಶವೊಂದು ಬಣ್ಣದಲ್ಲಿ ಮೂಡಿ ಚೌಕಟ್ಟಿನಲ್ಲಿ ಸೆರೆಯಾಗಿತ್ತು. ಒಂದೆಡೆ ಮಗುವಿಗೂ ಮತ್ತೊಂದೆಡೆ ಮರಿಜಿಂಕೆಗೂ ಎದೆಹಾಲುಣಿಸಿದ ಮಾತೃತ್ವದ ಮೂರ್ತ ರೂಪವೂ ನೋಡುಗರನ್ನು ಸೆಳೆಯುತ್ತಿತ್ತು. ಬೆನಕ, ಬುದ್ಧ, ಬಸವಣ್ಣ ಕ್ಯಾನ್ವಾಸ್‌ ಮೇಲೆ ಕಂಗೊಳಿಸುತ್ತಿದ್ದರು...

ನಗರದ ಮಹಾನಗರ ಪಾಲಿಕೆಯ ಟೌನ್‌ಹಾಲ್‌ ಆವರಣ ಹಾಗೂ ಸಾರ್ವಜನಿಕ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 11ನೇ ಚಿತ್ರಸಂತೆಯಲ್ಲಿ ಕಂಡು ಬಂದ ದೃಶ್ಯಗಳಿವು. ಚಿತ್ರ ಸಂತೆಯಲ್ಲಿ ಒಟ್ಟು 64 ಕಲಾ ಮಳಿಗೆಗಳಲ್ಲಿ ಅಂದಾಜು ಒಂದು ಸಾವಿರದಷ್ಟು ಕಲಾಕೃತಿಗಳು ಪ್ರದರ್ಶನದಲ್ಲಿದ್ದವು.

ADVERTISEMENT

ಭಾರತ ಸಂವಿಧಾನ ಪೀಠಿಕೆಯೊಂದಿಗೆ ರಚಿಸಿದ ಡಾ. ಅಂಬೇಡ್ಕರ್‌ ಚಿತ್ರ, ರಾಷ್ಟ್ರಪಿತ ಗಾಂಧಿ, ಸರ್‌ ಎಂ.ವಿಶ್ವೇಶ್ವರಯ‌್ಯ, ವಿವೇಕಾನಂದ, ಎಪಿಜೆ ಅಬ್ದುಲ್‌ ಕಲಾಂ ಚಿತ್ರಗಳೂ ಮನಸೂರೆಗೊಂಡವು. ಚಿತ್ರಸಂತೆಯಲ್ಲಿ ಬರೀ ಚಿತ್ರಕಲೆಯಷ್ಟೇ ಇರಲಿಲ್ಲ. ಪುಷ್ಪಹಸ್ತ ನೃತ್ಯಕಲಾ ಕೇಂದ್ರದ ಕಲಾವಿದರ ಭರತನಾಟ್ಯದ ಸೊಬಗು, ದೊರೆ ಆರ್ಕೆಸ್ಟ್ರಾದ ಕನ್ನಡ–ಹಿಂದಿ ಚಿತ್ರಗೀತೆಗಳ ಗಾಯನ ಚಿತ್ರಸಂತೆಗೆ ಮತ್ತಷ್ಟು ‘ರಂಗು’ ತುಂಬಿದ್ದವು.

ದಾನಯ್ಯ ಚೌಕಿಮಠ ಅವರ ಕುಂಭಕಲೆಯ ಪ್ರಾತ್ಯಕ್ಷಿಕೆ ಕಾರ್ಯಾಗಾರ ಚಿತ್ರಸಂತೆ ಆರ್ಕಷಣೆ ಹೆಚ್ಚಿಸಿತು. ತಿರುಗುಣಿ ಮೇಲಿದ್ದ ಕೆಂಪು ಮುದ್ದೆ ಮಣ್ಣಿಗೆ ವಿದ್ಯಾರ್ಥಿಗಳು, ಸಾರ್ವಜನಿಕರು ನವಿರು–ನಾಜೂಕಿನಿಂದ ಕರಗಳಾನಿಸಿ ಸ್ವತಃ ಕಲಾಕೃತಿ ರಚಿಸಿ ಪುಳಕಗೊಂಡರು.

ಚಿತ್ರಸಂತೆಯಲ್ಲಿ ಲೈವ್‌ ಪೇಂಟಿಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಲವು ಪಾಲಕರು ಮಕ್ಕಳ ಚಿತ್ರಗಳನ್ನು ಕಲಾವಿದರಿಂದ ಕಾಗದದ ಮೇಲೆ ಬರೆಸಲು ಉತ್ಸಾಹ ತೋರಿದರು. ವ್ಯಂಗ್ಯಚಿತ್ರಕಾರ ಎಂ.ಸಂಜೀವ ಅವರು ಸ್ಥಳದಲ್ಲೇ ಸಾರ್ವಜನಿಕರ ವ್ಯಂಗ್ಯ ಚಿತ್ರ ಬಿಡಿಸಿ ಕೈಗಿಟ್ಟ ದೃಶ್ಯವೂ ಕಂಡುಬಂತು. ಮಕ್ಕಳ ವ್ಯಂಗ್ಯ ಚಿತ್ರ ಬರೆಸಲು ಕೂಡ ಜನ ಸಾಲುಗಟ್ಟಿದ್ದರು.

ಬೆಳಿಗ್ಗೆ 8ರಿಂದ ಸಂಜೆ ತನಕ ನಡೆದ ಚಿತ್ರಸಂತೆಯಲ್ಲಿ ಹಿರಿಯ ಕಲಾವಿದರಾದ ಎಸ್‌.ಎಂ.ನೀಲಾ, ಬಿ.ವಿ.ಬಿರಾದಾರ, ಬಾಬುರಾವ್‌ ಎಚ್., ನಿಂಗಣ್ಣ ಕೆರಿ ಸೇರಿದಂತೆ ಹಲವು ಹಿರಿಯ–ಯುವ ಕಲಾವಿದರ ಚಿತ್ರಕಲೆಗಳು ಚಿತ್ರಸಂತೆಯಲ್ಲಿ ಪ್ರದರ್ಶನವಾದವು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸಸಿಗೆ ನೀರೆರೆದು ಚಿತ್ರಸಂತೆಗೆ ಚಾಲನೆ ನೀಡಿದರು. ವಿಕಾಸ ಅಕಾಡೆಮಿ, ಚೈತನ್ಯಮಯಿ ಟ್ರಸ್ಟ್‌, ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ದಿ ಆರ್ಟ್‌ ಇಂಟಗ್ರೇಷನ್‌ ಸೊಸೈಟಿ, ಎಚ್‌ಕೆಸಿಸಿಐ, ಬಿಸಿಲು ಆರ್ಟ್‌ ಗ್ಯಾಲರಿ, ಶರಣಬಸವ ವಿಶ್ವವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಚಿತ್ರ ಸಂತೆಯು ಸಾರ್ವಜನಿಕರಲ್ಲಿ ದೃಶ್ಯಕಲೆಯತ್ತ ಆಕರ್ಷಣೆ, ಚಿತ್ರಕಲೆಯ ಪ್ರಜ್ಞೆ ಬೆಳೆಸುವ ಪ್ರಯತ್ನ ಮಾಡಿತು.

ಚಿತ್ರಸಂತೆಯಲ್ಲಿದ್ದ ನಿಖಿಲ ವಾಗಮೋರೆ(ಮಳಿಗೆ ಸಂಖ್ಯೆ 15), ಪಲ್ಲವಿ ಕೇದಾರ(ಮ.ಸಂ.22), ಅಂಬಾರಾಯ ಚಿನ್ನಮಳ್ಳಿ(ಮ.ಸಂ.36), ದೃಶ್ಯಕಲಾ ವಿಭಾಗ ಗುಲಬರ್ಗಾ ವಿಶ್ವವಿದ್ಯಾಲಯ(ಮ.ಸಂ.41) ಹಾಗೂ ಜಲಜಾ ಕುಲಕರ್ಣಿ(ಮ.ಸಂ.51) ಅವರ ಮಳಿಗೆಗಳಿಗೆ ಅತ್ಯುತ್ತಮ ಸ್ಟಾಲ್‌ ಪ್ರಶಸ್ತಿ ನೀಡಿ ನಗದು ಬಹುಮಾನ ವಿತರಿಸಲಾಯಿತು.

ಮಕ್ಕಳ ಕೈಯಲ್ಲಿ ಬಣ್ಣ–ಕುಂಚ...

ಚಿತ್ರಸಂತೆಯ ಭಾಗವಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಶಿಸ್ತಿನಿಂದ ಸಾಲಾಗಿ ಕುಳಿತ ಮಕ್ಕಳು ತನ್ಮಯರಾಗಿ ಕುಂಚ–ಬಣ್ಣ ಬಳಸಿ ಕಲಾಕೃತಿಗಳನ್ನು ರಚಿಸಿದರು. 1–7ನೇ ತರಗತಿ ಮಕ್ಕಳು ಮಹಾತ್ಮ ಗಾಂಧಿ ಪುತ್ಥಳಿಯ ಪರಿಸರದಲ್ಲಿ ಚಿತ್ರ ಬಿಡಿಸಿದರು. 1ರಿಂದ4ನೇ ತರಗತಿ ಮಕ್ಕಳು ‘ಭಾರತೀಯ ಹಬ್ಬಗಳು’ ವಿಷಯಾಧಾರಿತ ಚಿತ್ರಗಳನ್ನು ರಚಿಸಿದರು. 5ರಿಂದ7ನೇ ತರಗತಿ ಮಕ್ಕಳು ‘ಕರ್ನಾಟಕ ಸಂಭ್ರಮ’ ವಿಷಯಾಧಾರಿತ ಕಲಾಕೃತಿಗಳನ್ನು ರಚಿಸಿದರು. 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಬಾಬು ಜಗಜೀವನರಾಂ ಪ್ರತಿಮೆ ಪರಿಸರದಲ್ಲಿ ‘ಚಂದ್ರಯಾನ’ ವಿಷಯಾಧಾರಿತ ಚಿತ್ರಗಳನ್ನು ಬರೆದರು. ಕೆಲ ಮಕ್ಕಳು ಉಡ್ಡಯನ ರಾಕೆಟ್‌ ಚಿತ್ರಿಸಿದರೆ ಮತ್ತೆ ಕೆಲವರು ರೋವರ್‌ ಜೊತೆಗೆ ತ್ರಿವರ್ಣ ಧ್ವಜ ಬಿಡಿಸಿದರು.

ಯಾರು ಏನೆಂದರು...?

ಚಿತ್ರಕಲೆಗೆ ದೊಡ್ಡ ಇತಿಹಾಸ ಪರಂಪರೆಯೇ ಇದೆ. ಮಠ–ಮಾನ್ಯಗಳು ಚರ್ಚ್‌–ಮಸೀದಿಗಳಲ್ಲೂ ಚಿತ್ರಕಲೆ ಕಾಣಬಹುದು. ಕಲಬುರಗಿಯ ಕೆಬಿಎನ್‌ ದರ್ಗಾದಲ್ಲಿರುವ ಚಿತ್ರಕಲೆ ನೋಡುಗರನ್ನು ವಿಸ್ಮಯಗೊಳಿಸದೇ ಇರದು - ಅಲ್ಲಮಪ್ರಭು ಪಾಟೀಲ ಶಾಸಕ

ಚಿತ್ರಸಂತೆಯು ಎಸ್.ಎಂ.ಪಂಡಿತರಂಥ ಕಲಾವಿದರ ಹುಡುಕಾಟದ ಹಾದಿ. ಚಿತ್ರಸಂತೆ ದೊಡ್ಡ ಜಾತ್ರೆಯಾಗಿ ಪರಿವರ್ತನೆ ಆಗಬೇಕು. ಕನಿಷ್ಠ ಒಂದು ಲಕ್ಷ ಜನ ಪಾಲ್ಗೊಳ್ಳುವಂತಾಗಬೇಕು. ಎಲ್ಲಿಯ ತನಕ ನಾವು ಕೋಟಿ –ಕೋಟಿ ಜನರನ್ನು ತಲುಪುವುದಿಲ್ಲವೋ ಅಲ್ಲಿಯ ತನಕ ನಮಗೆ ಎಸ್.ಎಂ.ಪಂಡಿತರನ್ನು ಮೀರಿಸುವಂತೆ ಕಲಾವಿದರು ಸಿಗೋದಿಲ್ಲ. ಬಸವರಾಜ ಪಾಟೀಲ ಸೇಡಂ ಇಡೀ ಸನ್ನಿವೇಶವೊಂದನ್ನು ಕಟ್ಟಿಕೊಡುವ ಶಕ್ತಿ ಚಿತ್ರಕಲೆಗಿದೆ. ಚಿತ್ರಕಲೆಯ ಮಹತ್ವ ಅರಿತು ಕಲಬುರಗಿಯಲ್ಲಿ ಚಿತ್ರ ಸಂತೆ ಆರಂಭಕ್ಕೂ ಹಲವು ವರ್ಷ ಮೊದಲೇ ಚಿತ್ರಕಲೆಯ ಕೋರ್ಸ್‌ ಆರಂಭಿಸಿದ ಕೀರ್ತಿ ಶರಣಬಸವಪ್ಪ ಅಪ್ಪ ಅವರಿಗೆ ಸಲ್ಲುತ್ತದೆ - ಬಸವರಾಜ ದೇಶಮುಖ ಕಾರ್ಯದರ್ಶಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ

ಕಲಬುರಗಿಯಲ್ಲಿ ಕಲಾವಿದರಿಗೆ ಕೊರತೆಯಿಲ್ಲ. ಆದರೆ ಖ್ಯಾತ ಕಲಾವಿದರ ಚಿತ್ರಗಳನ್ನು ನೋಡಬೇಕಾದರೆ ಅವರದೇ ಮನೆಗಳ ಗ್ಯಾಲರಿಗೇ ಹೋಗುವ ಸ್ಥಿತಿಯಿದೆ. ಹೀಗಾಗಿ ಕಲಬುರಗಿಯಲ್ಲೊಂದು ಆರ್ಟ್‌ ಗ್ಯಾಲರಿ ನಿರ್ಮಿಸುವ ಅಗತ್ಯವಿದೆ- ವಿಕ್ರಂ ವಿಸಾಜಿ ಸಿಯುಕೆ ಪ್ರಾಧ್ಯಾಪಕ

ನಮ್ಮಲ್ಲಿ ಅನೇಕ ಹಿರಿಯ ಕಲಾವಿದರ ಚಿತ್ರಗಳು ಆರ್ಟ್‌ ಗ್ಯಾಲರಿಗೆ ಸೀಮಿತವಾಗಿವೆ. ಅವರೆಲ್ಲ ಬೆಂಗಳೂರಿನ ಚಿತ್ರಸಂತೆಯಲ್ಲೂ ತಮ್ಮ ಕಲಾಕೃತಿ ಪ್ರದರ್ಶಿಸುತ್ತಾರೆ. ಇಲ್ಲಿಗೆ ಮಾತ್ರ ಬರಲ್ಲ. ಇದೊಂದು ಯಕ್ಷ ಪ್ರಶ್ನೆಯಾಗಿದೆ -ಎ.ಎಸ್‌.ಪಾಟೀಲ ಚಿತ್ರಸಂತೆಯ ಪ್ರಧಾನ ಸಂಯೋಜಕ

ಚಿತ್ರಸಂತೆಯಲ್ಲಿ ದೃಶ್ಯಕಲಾ ವೈಭವವನ್ನು ಕುತೂಹಲದಿಂದ ಕಣ್ತುಂಬಿಕೊಂಡ ರೈತ ಮಹಿಳೆ
ಚಿತ್ರಸಂತೆಯಲ್ಲಿ ಮುದ್ದುನಾಯಿಗಳ ಚಿತ್ರಕಲಾ ವೈಭವವನ್ನು ಕಣ್ತುಂಬಿಕೊಂಡ ಯುವತಿಯರು
ಚಿತ್ರಸಂತೆಯಲ್ಲಿ ಪ್ರದರ್ಶಿಸಿದ್ದ ಕಲಾಕೃತಿಗಳನ್ನು ಬಾಲ ಕಲಾವಿದೆಯರು ಕಣ್ತುಂಬಿಕೊಂಡರು –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್‌ ಆಜಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.