ಚಿಂಚೋಳಿ: ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಪ್ರತಿಕೂಲ ವಾತಾವರಣ ಉಂಟಾಗಿ ಬಹುಪಾಲು ರೈತರು ಹಾನಿ ಅನುಭವಿಸುತ್ತಿದ್ದಾರೆ. ಆದರೆ, ತಾಲ್ಲೂಕಿನ ದೇಗಲಮಡಿಯ ರೈತ ಶಾಮರಾವ್ ಪಾಟೀಲ ಗೌಡನೂರು ಅವರು ಮಾತ್ರ ಪಪ್ಪಾಯ ಬೆಳೆದು ಬಂಪರ್ ಆದಾಯ ಪಡೆದಿದ್ದಾರೆ.
ಶಾಮರಾವ್ ಅವರುಟ್ರ್ಯಾಕ್ಟರ್ ನೇಗಿಲು ಹೊಡೆದು ಹೊಲ ಹದಗೊಳಿಸಿದ್ದಾರೆ. ಬದು ಮಾಡಿ ತೈವಾನ್–786 ತಳಿಯ ಸಸಿಗಳನ್ನು ತಂದು ನೆಟ್ಟಿದ್ದಾರೆ. ಅವುಗಳಿಗೆ ಕಾಲಕ್ಕೆ ತಕ್ಕಂತೆ ಗೊಬ್ಬರ ನೀಡಿದ್ದಾರೆ. ಸಾವಯವ ಉತ್ಪನ್ನಗಳ ಸಿಂಪರಣೆ ಮೂಲಕವೂ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದ್ದರಿಂದ ಪಪ್ಪಾಯ ಗಿಡಗಳು ಕೇವಲ ಏಳು ತಿಂಗಳಿನಿಂದಲೇ ಕಾಯಿ ಬಿಟ್ಟು ಹಣ್ಣು ಕೊಡಲು ಆರಂಭಿಸಿವೆ.
ಫೆಬ್ರುವರಿ ಎರಡನೇ ವಾರದಲ್ಲಿ ಸಸಿ ನೆಟ್ಟಿದ್ದು, ಸೆಪ್ಟೆಂಬರ್‌ನಿಂದಲೇ ಇಳುವರಿ ಪಡೆಯತೊಡಗಿದ್ದಾರೆ. ಅವರೇ ಸ್ವಂತ ಪಪ್ಪಾಯ ಕಾಯಿಗಳನ್ನು ಕಾರ್ಮಿಕರಿಂದ ಕಡಿದು ಪ್ರತಿಯೊಂದು ಹಣ್ಣಿಗೆ ರದ್ದಿ ಕಾಗದದಿಂದ ಮುಚ್ಚಿ ಸರಕು ಸಾಗಣೆ ವಾಹನಗಳಲ್ಲಿ ತುಂಬಿ ಹೈದರಾಬಾದ್ ಮಾರುಕಟ್ಟೆಗೆ ಸಾಗಿಸಿದ್ದಾರೆ.
ಮಾರುಕಟ್ಟೆ ಎದುರು ನಿಂತು ತಮ್ಮ ಉತ್ಪನ್ನ ಮಾರಾಟ ಮಾಡಿದ್ದರಿಂದ ದಲ್ಲಾಳಿಗಳು ಪಡೆಯುತ್ತಿದ್ದ ಆದಾಯವೂ ರೈತನಿಗೆ ಬಂದಿದೆ. ಒಟ್ಟು 4 ಎಕರೆ ತೋಟದಲ್ಲಿ ಇವರು ಬರೋಬರಿ ₹ 12 ಲಕ್ಷ ಆದಾಯ ಗಳಿಸಿದ್ದಾರೆ. ಈಗ ಹೊಲದಲ್ಲಿ ಕೊನೆಯ ಫಸಲು ಮಾತ್ರ ಕಾಣಸಿಗುತ್ತದೆ. ಇದರಿಂದಲೂ ಇನ್ನೂ ₹ 2 ಲಕ್ಷಕ್ಕೂ ಅಧಿಕ ಆದಾಯ ನಿರೀಕ್ಷಿಸುತ್ತಿದ್ದಾರೆ.
ಮಳೆಗಾಲ ಮತ್ತು ಚಳಿಗಾಲದಲ್ಲಿ ಪಪ್ಪಾಯ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಪೋಷಕಾಂಶಗಳ ಆಹಾರವಾಗಿರುವ ಈ ಹಣ್ಣು ಆರೋಗ್ಯಕ್ಕೆ ಉತ್ತಮವಾಗಿದೆ. ದೇಹಕ್ಕೆ ಶಾಖ ಒದಗಿಸುವುದರ ಜತೆಗೆ ಡೆಂಗಿ ರೋಗದ ಮಾರಕ ಪರಿಣಾಮ ನಿಯಂತ್ರಿಸುವ ಗುಣ ಹೊಂದಿದ್ದರಿಂದ ಈಗ ಬೇಡಿಕೆ ಹೆಚ್ಚಾಗಿದೆ.
ಇವರು ಮಾರಾಟ ಮಾಡಿದ ಪಪ್ಪಾಯ ಹಣ್ಣಿಗೆ ಕನಿಷ್ಠ ₹ 32ರಿಂದ ಗರಿಷ್ಠ ₹ 56 ಪ್ರತಿ ಕೆಜಿಗೆ ಲಭಿಸಿದೆ. ಈರುಳ್ಳಿ ಬೀಜ ಬೆಳೆಯುವುದರಲ್ಲಿ ಶಾಮರಾವ್ ಅವರದ್ದು ರಾಜ್ಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದ್ದಾರೆ. ಅವರು ಮಾರುಕಟ್ಟೆ ಮತ್ತು ಹವಾಗುಣ ಆಧರಿಸಿ ಬೆಳೆ ಆಯ್ದುಕೊಂಡು ತೋಟಗಾರಿಕೆ ನಡೆಸುತ್ತಾರೆ. ಅವರೇ ಮಾರುಕಟ್ಟೆಗೂ ಹೋಗಿ ಮಾರಾಟ ಮಾಡಿ ಉತ್ತಮ ಲಾಭ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.