ಕಲಬುರಗಿ: ಬಾನಂಗಳದಲ್ಲಿ ಸಂಭವಿಸಿದ ಪಾರ್ಶ್ವ ಸೂರ್ಯ ಗ್ರಹಣದ ಖಗೋಳ ವಿಸ್ಮಯವನ್ನು ಸಾರ್ವಜನಿಕರು ಮಂಗಳವಾರ ಕಣ್ತುಂಬಿಕೊಂಡು ಪುಳಕಿತರಾದರು.
ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರವು ಸಂಜೆ ಆಗಸದಲ್ಲಿ ಈ ಖಗೋಳ ವಿದ್ಯಮಾನ ವೀಕ್ಷಿಸಲು ದೂರದರ್ಶಕದ ಸೌಲಭ್ಯ ಕಲ್ಪಿಸಿತ್ತು. ಬರಿಗಣ್ಣು ಮತ್ತು ದೂರದರ್ಶಕದಲ್ಲಿ ಸೂರ್ಯಗ್ರಹಣ ವೀಕ್ಷಣೆ ನಿಷಿದ್ಧ. ಹೀಗಾಗಿ, ದೂರದರ್ಶಕಕ್ಕೆ ಫಿಲ್ಟರ್ ಅಳವಡಿಸಿ, ಅದರ ಪಕ್ಕದಲ್ಲಿ ನೇತು ಹಾಕಲಾದ ಬಿಳಿ ಹಾಳೆಯ ಮೇಲೆ ಗ್ರಹಣದ ಪ್ರತಿ ಹಂತವನ್ನು ತೋರಿಸಿದರು.
ಸೂರ್ಯಗ್ರಹಣದ ಖಗೋಳ ವಿದ್ಯಮಾನ ವೀಕ್ಷಿಸಿದ ಮಕ್ಕಳು, ಮಹಿಳೆಯರು, ವೃದ್ಧರು ಮತ್ತು ಪುರುಷರು ವಿಜ್ಞಾನದ ಕೌತುಕಕ್ಕೆ ಹರ್ಷ ವ್ಯಕ್ತಪಡಿಸಿದರು.
‘ಸೂರ್ಯ ಮತ್ತು ಭೂಮಿಯ ಮಧ್ಯೆ ಚಂದ್ರ ಬಂದಾಗ, ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಸೂರ್ಯನನ್ನು ಚಂದ್ರ ಮರೆ ಮಾಡುವುದರಿಂದ ಸೂರ್ಯಗ್ರಹಣ ಸಂಭವಿಸುತ್ತದೆ’ ಎಂದು ತಜ್ಞರು ಮಕ್ಕಳಿಗೆ ತಿಳಿಹೇಳುವುದು ಕಂಡುಬಂತು. ಪೋಸಕರು ಸಹ ಅಷ್ಟೇ ಆಸಕ್ತಿಯಿಂದ ಕೇಳಿಸಿಕೊಂಡರು.
ಕ್ಷಿತಿಜದ ವೇಳೆ ಸೂರ್ಯನಿಗೆ ಅಡ್ಡಲಾಗಿ ಬಂದು ಚಂದ್ರನಿಂದ ಮೂಡಿದ ಪಾರ್ಶ್ವ ಗ್ರಹಣ ಜಿಲ್ಲೆಯಲ್ಲಿ ಸಂಜೆ 4.57ಕ್ಕೆ ಆರಂಭವಾಗಿ 5.45ಕ್ಕೆ ಗರಿಷ್ಠ ಪ್ರಮಾಣದಲ್ಲಿ ಗೋಚರಿಸಿ, 5.54ಕ್ಕೆ ಕೊನೆಗೊಂಡಿತು.
ಮಕ್ಕಳೊಂದಿಗೆ ದೌಡು: ಗ್ರಹಣದ ಬಗ್ಗೆ ಇರುವ ಮೂಢ ನಂಬಿಕೆ ಹೋಗಲಾಡಿಸಲು ಪೋಷಕರು ತಮ್ಮ ಮಕ್ಕಳೊಂದಿಗೆ ಗ್ರಹಣ ವೀಕ್ಷಿಸಲು ವಿಜ್ಞಾನ ಕೇಂದ್ರಕ್ಕೆ ದೌಡಾಯಿಸಿದರು.
40 ಎಂ.ಎಂ.ನ ಸುಧಾರಿತ ದೂರದರ್ಶಕ ತನ್ನ ಫಿಲ್ಟರ್ ಮೂಲಕ ಸೂರ್ಯ ಮತ್ತು ಭೂಮಿಯ ನಡುವೆ ಬಂದ ಚಂದ್ರನ ಬಿಂಬದ ಪ್ರತಿ ಹಂತದ ದೃಶ್ಯಗಳನ್ನು ಸೆರೆಹಿಡಿದು, ಅದನ್ನು ಬಿಳಿ ಹಾಳೆಯ ಮೇಲೆ ಬಿತ್ತರಿಸಿತ್ತು. ವಿಜ್ಞಾನ ಕೇಂದ್ರ ತಂಡದ ಸದಸ್ಯರು ಖಗೋಳ ವಿಸ್ಮಯದ ಬಗ್ಗೆ ಮಾಹಿತಿ ಕೊಡುತ್ತಿದ್ದರೇ ಹಿರಿಯರು ಮಕ್ಕಳಂತೆ ಆಲಿಸುತ್ತಿದ್ದರು.
‘ಮನೆಯಲ್ಲಿ ಕುಳಿತು ಮಕ್ಕಳಿಗೆ ವೈಜ್ಞಾನಿಕ ಚಿಂತನೆಗಳ ಬಗ್ಗೆ ಬೋಧನೆ ಮಾಡುವುದಕ್ಕಿಂತ, ಆಗಾಗ ಸಂಭವಿಸುವ ಇಂತಹ ವಿಜ್ಞಾನದ ಕೌತುಕಗಳನ್ನು ತೋರಿಸಿ, ತಿಳಿ ಹೇಳಬೇಕು. ಇದರಿಂದ ಅವರಲ್ಲಿ ಸಹಜವಾಗಿಯೇ ವಿಜ್ಞಾನದ ಕುರಿತು ಆಸಕ್ತಿ ಮೂಡುತ್ತದೆ. ಮೌಢ್ಯಗಳಿಂದ ಮಕ್ಕಳು, ಜನರನ್ನು ಹೊರತರಲು ಗ್ರಹಣ ಒಂದು ವೇದಿಕೆ ಆಗಬೇಕು. ಮಾಧ್ಯಮಗಳು ಸಹ ಈ ಬಗ್ಗೆ ಬೆಳಕು ಚೆಲ್ಲಬೇಕು’ ಎಂದು ಮಕ್ಕಳ ತಜ್ಞ ಡಾ.ವೀರಭದ್ರಪ್ಪ ಹರ್ಷಣಗಿ ಹೇಳಿದರು.
ಗ್ರಹಣಕ್ಕೂ ಮುನ್ನ ಯುವಕರು, ಮಕ್ಕಳು ಮನೆಯಲ್ಲಿಯೇ ಊಟ ಮಾಡಿದರು. ಮಹಿಳೆಯರು ಗ್ರಹಣ ಪೂರ್ಣಗೊಂಡ ಬಳಿಕ ಮನೆಯನ್ನು ತೊಳೆದು ದೇವರನ್ನು ಪೂಜಿಸಿ, ನೈವೇದ್ಯ ಅರ್ಪಿಸಿದರು. ಗ್ರಾಮೀಣ ಭಾಗದ ಜನರು ಜಮೀನಿನಲ್ಲಿ ಬೆಳೆದಿದ್ದ ಕರಿಕೆಯನ್ನು ಮನೆಗೆ ತಂದು ಕುಡಿಯುವ ನೀರು, ತಿನ್ನುವ ಆಹಾರ ಪದಾರ್ಥಗಳಲ್ಲಿ ಹಾಕಿದರು.
ಬಾಳೆಹಣ್ಣು ಸವಿದು ಜಾಗೃತಿ: ನಗರದ ಜಗತ್ ವೃತ್ತದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಬಿಜಿವಿಎಸ್ ನೇತೃತ್ವದಲ್ಲಿ ಹಲವು ಪ್ರಗತಿಪರ ಸಂಘಟನೆ ಮುಖಂಡರು ಗ್ರಹಣ ವೀಕ್ಷಿಸಿ, ಇದೇ ವೇಳೆ ಬಾಳೆಹಣ್ಣು ಸವಿದರು.
ಗ್ರಹಣ ವೇಳೆ ಏನನ್ನೂ ತಿನ್ನ ಬಾರದು, ನೀರು ಕುಡಿಯಬಾರದು ಎಂಬ ಮೂಢನಂಬಿಕೆ ಬದಿಗೊತ್ತಿ, ಇದೊಂದು ಪ್ರಕೃತಿಯ ಸಹಜ ವಿದ್ಯ ಮಾನ. ಇದರಿಂದ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಅರಿವು ಮೂಡಿಸುವ ಪ್ರಯತ್ನವನ್ನು ಪ್ರಗತಿಪರರು ಮಾಡಿದರು.
ಸಮಿತಿಯ ಜಿಲ್ಲಾ ಅಧ್ಯಕ್ಷ ಶ್ರೀಶೈಲ್ ಗೂಳಿ ಮಾತನಾಡಿ, ‘ಗ್ರಹಣವನ್ನು ಪ್ರಕೃತಿಯ ವಿಸ್ಮಯವಾಗಿ ನೋಡಬೇಕು. ಗ್ರಹಣದ ವೇಳೆ ಉಪವಾಸ ಇದ್ದು, ಜೀವ ಹಾನಿಕಾರಕ ಮೌಲ್ಯಗಳ ಆಚರಣೆ ನಿಲ್ಲಿಸಬೇಕು’ ಎಂದರು.
ಮಾಜಿ ಶಾಸಕ ಬಿ.ಆರ್ ಪಾಟೀಲ ಮಾತನಾಡಿ, ‘ಗ್ರಹಣ ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆ. ಈ ಬಗ್ಗೆ ಪುರೋಹಿತ ಶಾಹಿ ವರ್ಗದವರು ಜನರಲ್ಲಿ ಅಂಧಶ್ರದ್ಧೆ ಮೂಡಿಸಿದ್ದಾರೆ. ಸೂರ್ಯ, ಚಂದ್ರ ಗ್ರಹಣ ಅಪಾಯಕಾರಿ ಎಂದು ಜನರ ಮೇಲೆ ಹೇರಿದ್ದಾರೆ. ವಿಜ್ಞಾನದ ಮೂಲಕ ಮೌಢ್ಯಗಳನ್ನು ಧಿಕ್ಕರಿಸಿ ಹೊರಬರಬೇಕು’ ಎಂದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಮಾತನಾಡಿ, ‘ಕೆಲವರು ಜನರಲ್ಲಿ ಮೌಢ್ಯ ಬಿತ್ತುವ ಕೆಲಸಕ್ಕೆ ಯತ್ನಿಸುತ್ತಿದ್ದಾರೆ. ಕೆಲ ಮಾಧ್ಯಮಗಳು ಸಹ ಪುಷ್ಟಿ ನೀಡುತ್ತಿವೆ. ಇದು ನಿಲ್ಲಬೇಕು’ ಎಂದರು.
ಸಿಪಿಎಂ ನಾಯಕಿ ಕೆ.ನೀಲಾ, ಮುಖಂಡರಾದ ದತ್ತಾತ್ರೇಯ ಇಕ್ಕಳಕಿ, ಡಾ.ಪ್ರಭು ಖಾನಾಪುರೆ ಡಾ. ಜಗನ್ನಾಥ ಸುಧಾಮ ಧನಿ, ಕೋದಂಡರಾಮಪ್ಪ ಅರ್ಜುನ್ ಭದ್ರೆ, ರವೀಂದ್ರ ಶಾಬಾದಿ, ಪ್ರಭಾಕರ ಸಲಗರೆ, ಎಂಸಿ ಸಜ್ಜನ, ಶರಣಗೌಡ ಪಾಟೀಲ, ಅಶೋಕ ಶಟಕಾರ ಇದ್ದರು.
ಹಲವೆಡೆ ದೇವರ ದರ್ಶನ ಬಂದ್
ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಮಧ್ಯಾಹ್ನದಿಂದಲೇ ಬಾಗಿಲು ಹಾಕಿ, ಭಕ್ತರಿಗೆ ಮೂರ್ತಿಗಳ ದರ್ಶನ ಬಂದ್ ಮಾಡಲಾಯಿತು.
ಮೂರ್ತಿಗಳ ಮೇಲೆ ಬಿಲ್ವಪತ್ರಿ, ಶಾಲುಗಳನ್ನು ಹೊದಿಸಿ ಮರೆ ಮಾಚಲಾಯಿತು. ಗ್ರಹಣದ ಬಗ್ಗೆ ತಿಳಿಯದೆ ಗ್ರಾಮಗಳಿಂದ ಬಂದಿದ್ದ ಕೆಲವು ಭಕ್ತರು ದೂರದಿಂದ ನಮಸ್ಕರಿಸಿ ತೆರಳಿದ್ದು ಕಂಡುಬಂತು.
ನಗರದ ಶರಣಬಸವೇಶ್ವರ ದೇವಸ್ಥಾನ, ಯಲ್ಲಮ್ಮ ದೇಗುಲ, ರಾಮಮಂದಿರ, ಸಾಯಿ ಮಂದಿರ, ಕೊರಂಟಿ ಹನುಮಾನ ಮಂದಿರ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಭಕ್ತರಿಗೆ ಅವಕಾಶ ಇರಲಿಲ್ಲ. ಗ್ರಹಣ ಮುಗಿದ ಬಳಿಕ ದೇವಾಲಯಗಳಲ್ಲಿ ಶುದ್ಧೀಕರಣ ನಡೆಸಿ ದೇವರಿಗೆ ಪೂಜೆ, ಆರತಿ ನಡೆಸಲಾಯಿತು.
ಗ್ರಹಣದ ವೇಳೆ ಬಾಳೆಹಣ್ಣು ಸವಿದು ಜಾಗೃತಿ
ನಗರದ ಜಗತ್ ವೃತ್ತದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಬಿಜಿವಿಎಸ್ ನೇತೃತ್ವದಲ್ಲಿ ಹಲವು ಪ್ರಗತಿಪರ ಸಂಘಟನೆ ಮುಖಂಡರು ಗ್ರಹಣ ವೀಕ್ಷಿಸಿ, ಇದೇ ವೇಳೆ ಬಾಳೆಹಣ್ಣು ಸವಿದರು.
ಗ್ರಹಣ ವೇಳೆ ಏನನ್ನೂ ತಿನ್ನಬಾರದು, ನೀರು ಕುಡಿಯಬಾರದು ಎಂಬ ಮೂಢನಂಬಿಕೆ ಬದಿಗೊತ್ತಿ, ಇದೊಂದು ಪ್ರಕೃತಿಯ ಸಹಜ ವಿದ್ಯಮಾನ. ಇದರಿಂದ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಅರಿವು ಮೂಡಿಸುವ ಪ್ರಯತ್ನವನ್ನು ಪ್ರಗತಿಪರರು ಮಾಡಿದರು.
ಸಮಿತಿಯ ಜಿಲ್ಲಾ ಅಧ್ಯಕ್ಷ ಶ್ರೀಶೈಲ್ ಗೂಳಿ ಮಾತನಾಡಿ, ‘ಗ್ರಹಣವನ್ನು ಪ್ರಕೃತಿಯ ವಿಸ್ಮಯವಾಗಿ ನೋಡಬೇಕು. ಗ್ರಹಣದ ವೇಳೆ ಉಪವಾಸ ಇದ್ದು, ಜೀವ ಹಾನಿಕಾರಕ ಮೌಲ್ಯಗಳ ಆಚರಣೆ ನಿಲ್ಲಿಸಬೇಕು’ ಎಂದರು.
ಮಾಜಿ ಶಾಸಕ ಬಿ.ಆರ್ ಪಾಟೀಲ ಮಾತನಾಡಿ, ‘ಗ್ರಹಣ ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆ. ಈ ಬಗ್ಗೆ ಪುರೋಹಿತ ಶಾಹಿ ವರ್ಗದವರು ಜನರಲ್ಲಿ ಅಂಧಶ್ರದ್ಧೆ ಮೂಡಿಸಿದ್ದಾರೆ. ಸೂರ್ಯ, ಚಂದ್ರ ಗ್ರಹಣ ಅಪಾಯಕಾರಿ ಎಂದು ಜನರ ಮೇಲೆ ಹೇರಿದ್ದಾರೆ. ವಿಜ್ಞಾನದ ಮೂಲಕ ಮೌಢ್ಯಗಳನ್ನು ಧಿಕ್ಕರಿಸಿ ಹೊರಬರಬೇಕು’ ಎಂದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಮಾತನಾಡಿ, ‘ಕೆಲವರು ಜನರಲ್ಲಿ ಮೌಢ್ಯ ಬಿತ್ತುವ ಕೆಲಸಕ್ಕೆ ಯತ್ನಿಸುತ್ತಿದ್ದಾರೆ. ಕೆಲ ಮಾಧ್ಯಮಗಳು ಸಹ ಪುಷ್ಟಿ ನೀಡುತ್ತಿವೆ. ಇದು ನಿಲ್ಲಬೇಕು’ ಎಂದರು.
ಸಿಪಿಎಂ ನಾಯಕಿ ಕೆ.ನೀಲಾ, ಮುಖಂಡರಾದ ದತ್ತಾತ್ರೇಯ ಇಕ್ಕಳಕಿ, ಡಾ.ಪ್ರಭು ಖಾನಾಪುರೆ ಡಾ. ಜಗನ್ನಾಥ ಸುಧಾಮ ಧನಿ, ಕೋದಂಡರಾಮಪ್ಪ ಅರ್ಜುನ್ ಭದ್ರೆ, ರವೀಂದ್ರ ಶಾಬಾದಿ, ಪ್ರಭಾಕರ ಸಲಗರೆ, ಎಂಸಿ ಸಜ್ಜನ, ಶರಣಗೌಡ ಪಾಟೀಲ, ಅಶೋಕ ಶಟಕಾರ ಇದ್ದರು.
ಸ್ಮಶಾನದಲ್ಲಿ ಊಟ
ಕಲಬುರಗಿ: ಯಡ್ರಾಮಿ ತಾಲ್ಲೂಕಿನ ದಲಿತ ಸೇನೆ ಕಾರ್ಯಕರ್ತರು ಪಟ್ಟಣದ ಸ್ಮಶಾನ ಜಾಗದಲ್ಲಿ ಗ್ರಹಣದ ವೇಳೆ ಊಟ ಮಾಡಿ, ಇದರಿಂದ ಧಕ್ಕೆ ಆಗುವುದಿಲ್ಲ ಎಂಬ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಸೂರ್ಯಗ್ರಹಣ ಆಗಸದಲ್ಲಿ ನಡೆಯುವ ನೈಸರ್ಗಿಕ ವಿದ್ಯಮಾನ. ಇದರಿಂದ ನಮಗೆ ಯಾವುದೇ ತೊಂದರೆ ಆಗುವುದಿಲ್ಲ. ಗ್ರಹಣ ಹಿಡಿದಾಗ ಸಮಸ್ಯೆಗಳಾಗಿವೆ ಎಂಬುದು ಇಲ್ಲಿಯವರೆಗೂ ಸಾಬೀತಾಗಿಲ್ಲ ಎಂದು ಸೇನೆ ಮುಖಂಡು ಹೇಳಿದರು.
ದಲಿತ ಸೇನೆ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಕಲಕೇರಿ, ತಾಲ್ಲೂಕು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪ್ರಭುಲಿಂಗ ಯತ್ನಾಳ್, ಬಸವರಾಜ ಬಾಲೂರ್, ರಮೇಶ ಮಾಗಣಗೇರಾ, ಪರಶುರಾಮ ರಾಮನೊರ, ಪ್ರಶಾಂತ್ ಗೆಜ್ಜಿ, ರಮೇಶ ಗೆಜ್ಜಿ, ಮುದುಕಪ್ಪ ರಾಮನೂರ ಇದ್ದರು.
ವಿರಳ ವಾಹನ ಸಂಚಾರ
ಗ್ರಹಣ ವೇಳೆ ನಗರದ ಬಹುತೇಕ ಎಲ್ಲ ರಸ್ತೆಗಳಲ್ಲಿ ಜನಸಂಚಾರ ಕಡಿಮೆ ಇದ್ದು, ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.
ಗ್ರಹಣದ ಪ್ರಯುಕ್ತ ದೀಪಾವಳಿಯ ಲಕ್ಷ್ಮಿ ಪೂಜೆಯನ್ನು ಸೋಮವಾರ ರಾತ್ರಿಯೇ ಮಾಡಿದ್ದರಿಂದ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ರೆಸ್ಟೊರಂಟ್, ಹೋಟೆಲ್, ಬಟ್ಟೆ ಅಂಗಡಿ ಮುಚ್ಚಿದ್ದು ಕಂಡು ಬಂತು. ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಸರ್ದಾರ್ ವಲ್ಲಭಭಾಯಿ ಪಟೇಯ ವೃತ್ತ, ಜಗತ್ ವೃತ್ತ, ಸೂಪರ್ ಮಾರ್ಕೆಟ್, ಕೇಂದ್ರ ಬಸ್ ನಿಲ್ದಾಣಗಳಲ್ಲಿ ವಾಹನಗಳ ಸಂಚಾರ ಕಂಡುಬರಲಿಲ್ಲ. ಮಾಲ್, ಕಪಡಾ ಬಜಾರ್, ಸರಾಫ್ ಬಜಾರ್‌ಗಳಲ್ಲಿ ಜನ ದಟ್ಟಣೆ ಇರಲಿಲ್ಲ.
27 ವರ್ಷಗಳ ಬಳಿಕ ಗೋಚರ
‘27 ವರ್ಷಗಳ ಬಳಿಕ ಸಂಭವಿಸಿದ ಭಾಗಶಃ ಸೂರ್ಯಗ್ರಹಣದ ಪ್ರಮಾಣ ಶೇ 0.306 ಗೋಚರಿಸಿದೆ’ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಪಿ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಂಪೂರ್ಣ ಸೂರ್ಯಗ್ರಹಣದಲ್ಲಿ ಸೂರ್ಯನ ಡಿಸ್ಕ್ ಪರಿಪೂರ್ಣವಾಗಿ ಅಸ್ಪಷ್ಟವಾಗಿ ಇರುತ್ತದೆ. ಭಾಗಶಃ ಮತ್ತು ವೃತ್ತಾಕಾರದ ಗ್ರಹಣದಲ್ಲಿ ಸೂರ್ಯನ ಒಂದು ಭಾಗ ಮಾತ್ರ ಅಸ್ಪಷ್ಟವಾಗಿ ಇರುತ್ತದೆ. ಸೂರ್ಯಗ್ರಹಣ ಬರಿಗಣ್ಣಿನಿಂದ ವೀಕ್ಷಿಸಬಾರದು. ಹೀಗಾಗಿ, 40 ಎಂ.ಎಂ ದೂರದರ್ಶಕಕ್ಕೆ ಫಿಲ್ಟರ್ ಅಳವಡಿಸಿ, ಅದರ ಪಕ್ಕದಲ್ಲಿ ನೇತು ಹಾಕಿದ್ದ ಬಿಳಿ ಹಾಳೆಯ ಮೇಲೆ ಗ್ರಹಣದ ಪ್ರತಿ ಹಂತ ತೋರಿಸಲಾಯಿತು’ ಎಂದು ವಿವರಿಸಿದರು.
*ದೀಪಾವಳಿ ಹಬ್ಬದ ವೇಳೆ ಮನೆಯಲ್ಲಿ ಕುಳಿತು ಕಾಲಹರಣ ಮಾಡುವುದಕ್ಕಿಂತ ವಿಜ್ಞಾನ ಕೇಂದ್ರಕ್ಕೆ ಬಂದು ವಿಜ್ಞಾನದ ವಿಸ್ಮಯ ಕಣ್ತುಂಬಿಕೊಂಡಿದ್ದು ಸಂತಸ ತಂದಿದೆ
-ಶರವತಿ ಪುಣೆ, ಕಲಬುರಗಿ ನಿವಾಸಿ
*ಮಕ್ಕಳೊಂದಿಗೆ ವಿಜ್ಞಾನ ಕೇಂದ್ರಕ್ಕೆ ಬಂದು ಗ್ರಹಣ ವೀಕ್ಷಿಸಿ, ಈ ಸಂಬಂಧ ಮಾಹಿತಿ ಪಡೆದದ್ದು ಖುಷಿ ಕೊಟ್ಟಿದೆ. ಮಕ್ಕಳು ಸಹ ಆಸಕ್ತಿಯಿಂದ ಗ್ರಹಣದ ವಿದ್ಯಮಾನಗಳನ್ನು ನೋಡಿದರು
-ಋತಾ ಕುಲಕರ್ಣಿ, ಕಲಬುರಗಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.