ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳ ರೈತರ ಜಾನುವಾರುಗಳಿಗೆ ಸ್ಥಳದಲ್ಲೇ ಶಸ್ತ್ರಚಿಕಿತ್ಸೆ ಮಾಡಲು ಮತ್ತು ಔಷಧಿ ನೀಡಲು 58 ಪಶು ಸಂಜೀವಿನಿ ವಾಹನಗಳು ಸಜ್ಜಾಗಿವೆ. ಈ ವಾಹನಗಳ ಸೇವೆ ಜುಲೈ 14ರಂದು ಕಲಬುರಗಿಯಲ್ಲಿ ಆರಂಭವಾಗಲಿದೆ.
ತುರ್ತು ಸಂದರ್ಭದಲ್ಲಿ ಮನುಷ್ಯರ ನೆರವಿಗೆ ಧಾವಿಸುವ ‘108’ ಅಂಬುಲನ್ಸ್ ಮಾದರಿಯಲ್ಲಿ ಜಾನುವಾರುಗಳ ಜೀವ ಹಾನಿ ತಪ್ಪಿಸಲು ಮತ್ತು ಅವು ಇರುವ ಕಡೆಯಲ್ಲೇ ಹೋಗಿ ಚಿಕಿತ್ಸೆ ಒದಗಿಸಲು ‘1962’ ಪಶು ಅಂಬುಲೆನ್ಸ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಚರಿಸಲಿದೆ. ಹಸು, ಎಮ್ಮೆ, ಎತ್ತು, ಕುರಿ, ಮೇಕೆ, ನಾಯಿ, ಹಂದಿ, ಕತ್ತೆ, ಕುದುರೆ ಸೇರಿ ಇತರೆ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಲಭಿಸಲಿದೆ.
ದಕ್ಷಿಣ ಕರ್ನಾಟಕದ 17 ಜಿಲ್ಲೆಗಳಲ್ಲಿ ಈಗಾಗಲೇ ಸಂಜೀವಿನಿ ವಾಹನಗಳು ಪಶುಗಳಿಗೆ ಚಿಕಿತ್ಸೆ ನೀಡುತ್ತಿವೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ 58 ವಾಹನಗಳು ಆರೋಗ್ಯ ಸೇವೆ ಸಲ್ಲಿಸಲಿವೆ.
‘ತಾಲ್ಲೂಕಿಗೆ ಒಂದರಂತೆ ಇಲ್ಲವೇ 1 ಲಕ್ಷ ಜಾನುವಾರು ಇರುವ ಪ್ರದೇಶ ವ್ಯಾಪ್ತಿಯಲ್ಲಿ ಪಶು ಸಂಜೀವಿನಿ ವಾಹನ ಲಭ್ಯವಿರುತ್ತದೆ. ಗಡಿ ಗ್ರಾಮಗಳಲ್ಲಿನ ಜಾನುವಾರುಗಳಿಗೆ ತೊಂದರೆಯಾದರೆ ಅಗತ್ಯ ಔಷಧಿ, ಪರಿಣಿತ ವೈದ್ಯರೊಂದಿಗೆ ತಕ್ಷಣವೇ ಚಿಕಿತ್ಸೆಗೆ ಲಭ್ಯ ಆಗಲಿದೆ’ ಎಂದುಪಶುಪಾಲನಾ ಮತ್ತು ಪಶು
ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಬಸೆಟ್ಟೆಪ್ಪ ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ರೋಗಕ್ಕೀಡಾದ ಜಾನುವಾರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದರೇ ಜಾನು
ವಾರು ವಾರಸುದಾರರು ಸ್ಥಳೀಯ ಸರ್ಕಾರಿ ಪಶು ವೈದ್ಯರಿಂದ ನೈಜ ಆರೋಗ್ಯ ಸ್ಥಿತಿ ಪ್ರಮಾಣೀಕರಿಸಬೇಕು. ಜಾನುವಾರಿಗೆ ಬೇಕಾದ ಚಿಕಿತ್ಸೆಯ ಬಗ್ಗೆ ವೈದ್ಯರ ಮೂಲಕ ಕರೆ ಮಾಡಿ ತಿಳಿಸಬೇಕು. ಹತ್ತಿರದ ಪಶು ಸಂಜೀವಿನಿ ವಾಹನವು ಅಗತ್ಯ ಔಷಧಿ, ಲಸಿಕೆ, ಉಪಕರಣಗಳೊಂದಿಗೆ ತೆರಳಿ ಚಿಕಿತ್ಸೆ ನೀಡಲಿದೆ. ಹುಸಿ ಕರೆಗಳನ್ನು ಮಾಡಿ, ವಾಹನಗಳ ಅನಾಗತ್ಯ ಸಂಚಾರ ತಪ್ಪಿಸಲು ಈ ನಿಯಮ ಅಳವಡಿಸಿಕೊಳ್ಳಲಾಗಿದೆ’ ಎಂಬ ಹೇಳಿಕೆ ಅವರದು.
‘ಆರ್ಥಿಕ ನಷ್ಟ ತಪ್ಪಿಸಲು ಸಹಾಯ’
‘ರೋಗಪೀಡಿತ ಜಾನುವಾರುಗಳನ್ನು ಖಾಸಗಿ ವಾಹನದಲ್ಲಿ ಪಶು ಆಸ್ಪತ್ರೆಗಳಿಗೆ ಕರೆದೊಯ್ಯಲು ಬಡ ರೈತರಿಗೆ ಸಾಧ್ಯ ಆಗುವುದಿಲ್ಲ. ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತವೆ’ ಎಂದು ಸೇಡಂ ತಾಲ್ಲೂಕಿನ ಹೊಸಳ್ಳಿ ರೈತ ಸಾಬಣ್ಣ.
‘ವೈದ್ಯರಿಗೂ ಜಾನುವಾರ ಇದ್ದಲ್ಲಿಗೆ ಚಿಕಿತ್ಸಾ ಸಲಕರಣೆ, ಔಷಧಿಗಳನ್ನು ಹೊತ್ತು ತಂದು ಚಿಕಿತ್ಸೆ ನೀಡಲು ಸಾಧ್ಯ ಆಗುತ್ತಿಲ್ಲ. ಪಶು ಸಂಜೀವಿನಿ ವಾಹನದೊಂದಿಗೆ ಚಿಕಿತ್ಸಾ ಸಲಕರಣೆ, ಔಷಧಿ ಹಾಗೂ ನುರಿತ ವೈದ್ಯರು ಬರುವುದರಿಂದ ಜಾನುವಾರುಗಳ ಪ್ರಾಣಹಾನಿ ತಡೆಗಟ್ಟಬಹುದು. ರೈತರಿಗೆ ಉಂಟಾಗಬಹುದಾದ ಆರ್ಥಿಕ ನಷ್ಟ ತಪ್ಪಿಸಬಹುದು’ ಎಂದು ತಿಳಿಸಿದರು.
*ಪಶು ಸಂಜೀವಿನಿಗೆ ಕೇಂದ್ರ ಶೇ 60, ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ನೀಡಿದೆ. ರೈತರು ಸರ್ಕಾರದ ಸೌಲಭ್ಯದ ಪ್ರಯೋಜನ ಪಡೆಯಬೇಕು
–ಡಾ. ಬಸೆಟ್ಟೆಪ್ಪ ಎಸ್.ಪಾಟೀಲ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ, ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.