ADVERTISEMENT

ಕಲಬುರಗಿ: ಸುಗಮ ಪ್ರಯಾಣ ಯಾವಾಗಿನಿಂದ?

ಮಲ್ಲಿಕಾರ್ಜುನ ನಾಲವಾರ
Published 31 ಜನವರಿ 2023, 5:15 IST
Last Updated 31 ಜನವರಿ 2023, 5:15 IST
ಹಾಸನ–ಸೋಲಾಪರ ಎಕ್ಸ್‌ಪ್ರೆಸ್‌ ರೈಲಿನ ಕಾಯ್ದಿರಿಸಿದ ಬೋಗಿಯಲ್ಲಿನ ಪ್ರಯಾಣಿಕ ದಟ್ಟಣೆ(ಟ್ವೀಟರ್‌ ಚಿತ್ರ; ಬಂಡೆಪ್ಪ)
ಹಾಸನ–ಸೋಲಾಪರ ಎಕ್ಸ್‌ಪ್ರೆಸ್‌ ರೈಲಿನ ಕಾಯ್ದಿರಿಸಿದ ಬೋಗಿಯಲ್ಲಿನ ಪ್ರಯಾಣಿಕ ದಟ್ಟಣೆ(ಟ್ವೀಟರ್‌ ಚಿತ್ರ; ಬಂಡೆಪ್ಪ)   

ಕಲಬುರಗಿ: 'ಹಾಸನ–ಸೋಲಾಪುರ ಎಕ್ಸ್‌ಪ್ರೆಸ್‌ ರೈಲಿನ ಕಾಯ್ದಿರಿಸಿದ ಬೋಗಿಯಲ್ಲಿನ ಜನಸಂದಣಿ ನೋಡಿ ಸಂಸದ ಉಮೇಶ ಜಾಧವ ಅವರೆ. ನಮ್ಮ ಬಡವರು, ಅಮಾಯಕರು, ಉತ್ತರ ಕರ್ನಾಟಕದ ಜನರು ಸೀಟು ಪಡೆಯಲು ಹೇಗೆ ಹೆಣಗಾಡುತ್ತಿದ್ದಾರೆ’ ಎಂದು ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ.

ಹಾಸನ-ಸೋಲಾಪುರ ರೈಲಿನ ಕಾಯ್ದಿರಿಸಿದ ಬೋಗಿಗಳು ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಂದ ಭರ್ತಿಯಾಗಿವೆ. ಆಸನಗಳ ಅಡಿ ಮಲಗಿ, ಓಡಾಡುವ ಮಾರ್ಗದಲ್ಲಿ ಕೂತು, ಕೆಲವರು ಮಲಗಿ ಪ್ರಯಾಣಿಸುತ್ತಿದ್ದಾರೆ. ಮತ್ತೆ ಕೆಲವರು ಮಲಗಿರುವ ಪ್ರಯಾಣಿಕರ ಪಾದದ ಬಳಿ ಕುಳಿತಿದ್ದರೇ ಜಾಗದ ಸಿಗದ ಹಲವರು ನಿಂತು ಪ್ರಯಾಣಿಸುತ್ತಾರೆ.

ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಸಾವಿರು ಜನರು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಸ್ವಂತ ಜಿಲ್ಲೆಗಳಲ್ಲಿ ಅವರಿಗೆ ಕೆಲಸ ಸೃಷ್ಟಿಸಿಕೊಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್‌ನಂತಹ ಮಹಾನಗರಗಳಿಗೆ ವಲಸೆ ಹೋಗಲು ಕನಿಷ್ಠ ರೈಲ್ವೆಗಳು ಆದರೂ ಓಡಿಸಿ ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.

ADVERTISEMENT

‘ಸೋಲಾಪುರ-ಹಾಸನ ಎಕ್ಸ್‌ಪ್ರೆಸ್‌(11311) ರೈಲಿನಲ್ಲಿ ಜನರು ದನಗಳಂತೆ ಪ್ರಯಾಣಿಸುತ್ತಿದ್ದಾರೆ. ಕಲಬುರಗಿ ಮತ್ತು ಬೆಂಗಳೂರು ನಡುವೆ ಸಂಚರಿಸುವ ಎಲ್ಲ ರೈಲುಗಳಲ್ಲಿ ಇದೇ ರೀತಿ ಇರುತ್ತದೆ. ಹೊಸ ರೈಲುಗಳು ಇದುವರೆಗೂ ಆರಂಭವಾಗಿಲ್ಲ. ಸ್ಥಳೀಯ ಮುಖಂಡರು ಈ ಬಗ್ಗೆ ಮಾತನಾಡುವರೆ’ ಎಂದು ಕಲ್ಯಾಣ ಕರ್ನಾಟಕ ಗ್ರಾಹಕರ ವೇದಿಕೆ ಟ್ವೀಟ್‌ನಲ್ಲಿ ಪ್ರಶ್ನಿಸಿದೆ.

ಸ್ಥಳೀಯ ಶಾಸಕ ಪ್ರಿಯಾಂಕ್ ಖರ್ಗೆ, ಸಂಸದ ಜಾಧವ, ಕೇಂದ್ರ ಸಚಿವ ಅಮಿತ್ ಶಾ, ಸೋಲಾಪುರ ರೈಲ್ವೆ ವಿಭಾಗ ಕಚೇರಿ, ಕೇಂದ್ರ ರೈಲ್ವೆ ವಲಯದ ಖಾತೆಗಳಿಗೆ ಟ್ವೀಟ್ ಅನ್ನು ಟ್ಯಾಗ್ ಮಾಡಿದೆ.

‘ಕಾಯ್ದಿರಿಸಿದ ಕೋಚ್‌ಗಳಲ್ಲಿ(ಹಾಸನ-ಸೋಲಾಪುರ ಎಕ್ಸ್‌ಪ್ರೆಸ್) ಜನಸಂದಣಿ ನೋಡಿ. ಬಡವರು, ಅಮಾಯಕರು, ಉತ್ತರ ಕರ್ನಾಟಕದವರು ಸೀಟು ಪಡೆಯಲು ಹೇಗೆ ಪರದಾಡುತ್ತಿದ್ದಾರೆ. ದಶಕದಿಂದ ಹೊಸ ರೈಲು ಬಂದಿಲ್ಲ’ ಎಂದು ಬಂಡೆಪ್ಪ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಕಲಬುರಗಿ, ಯಾದಗಿರಿ, ಬೀದರ್‌ ಜಿಲ್ಲೆಗಳಲ್ಲಿ ತೊಗರಿ ಬೆಳೆಯ ರಾಶಿ ಕೆಲಸ ಮುಗಿದಿದೆ. ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದ ಕಾರಣ ಸಾಲದ ಹೊರೆ ತಗ್ಗಿಸಲು ಬೆಂಗಳೂರಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದೇವೆ’ ಎನ್ನುತ್ತಾರೆ ವಲಸಿಗ ಪ್ರಯಾಣಿಕ ಶಿವಕುಮಾರ.

‘ಆರು ಜನರಲ್‌ ಬೋಗಿಯ ಹೊಸ ರೈಲು ಓಡಿಸಿ’

‘ಬೆಂಗಳೂರು– ಸೋಲಾಪುರ ನಡುವೆ ಸಂಚರಿಸುವ ಬಹುತೇಕ ರೈಲುಗಳಲ್ಲಿ ದುಡಿಯುವ ವರ್ಗದ ಪ್ರಯಾಣಿಕರು ಕಲಬುರಗಿಗೆ ಇಳಿದು–ಹತ್ತಿ ಪ್ರಯಾಣಿಸುತ್ತಾರೆ. ರೋಗಿಗಳು, ಕೆಲವರು ಮಾತ್ರ ಸೋಲಾಪುರವರೆಗೆ ಹೋಗುತ್ತಾರೆ. ಹೀಗಾಗಿ, ಶ್ರಮಿಕರನ್ನು ಗುರಿಯಾಗಿಸಿಕೊಂಡು ಆರು ಜನರಲ್‌ ಬೋಗಿಯ ಹೊಸ ರೈಲನ್ನು ಕಲಬುರಗಿಯಿಂದಲೇ ಓಡಿಸಬೇಕು’ ಎನ್ನುತ್ತಾರೆ ನಿವೃತ್ತ ಎಂಜಿನಿಯರ್ ವೆಂಕಟೇಶ ಮುದಗಲ್.

‘ಆದಾಯ, ಸಂಚಾರ ದಟ್ಟಣೆ, ಭೌಗೋಳಿಕವಾಗಿ ರೈಲ್ವೆ ವಿಭಾಗೀಯ ಕಚೇರಿ ಪಡೆಯುವ ಅರ್ಹತೆಯನ್ನು ಕಲಬುರಗಿ ಹೊಂದಿಗೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ವಿಭಾಗೀಯ ಕಚೇರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಕೊನೆಯ ಪಕ್ಷ ನೈಋತ್ಯ ವಲಯಕ್ಕೆ ಸೇರ್ಪಡೆ ಮಾಡಬೇಕು’ ಎಂದರು.

‘ಬೀದರ್ ಮಾರ್ಗವಾಗಿ ಹೊಸ ರೈಲು ಘೋಷಣೆ ಸಾಧ್ಯತೆ’

‘ಕೇಂದ್ರ ಸಚಿವ ಭಗವಂತ ಖೂಬಾ, ಸೋಲಾಪುರ ಸಂಸದ ಮತ್ತು ನಾನು ರೈಲ್ವೆ ಸಚಿವರ ಜತೆಗೆ ಮಾತನಾಡಿದ್ದೇವೆ. ಬಜೆಟ್‌ನಲ್ಲಿ ಬೀದರ್–ಕಲಬುರಗಿ–ಬೆಂಗಳೂರು ಮಾರ್ಗವಾಗಿ ಹೊಸ ರೈಲು ಘೋಷಣೆ ಆಗುವ ಸಾಧ್ಯತೆ ಇದೆ’ ಎಂದ ಸಂಸದ ಡಾ.ಉಮೇಶ ಜಾಧವ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರ ಸಚಿವರು ಸಾಕಷ್ಟು ಸಮಯ ನೀಡಿ ನಮ್ಮ ಬೇಡಿಕೆ ಈಗಾಗಲೇ ಆಲಿಸಿದ್ದಾರೆ. ವಂದೇ ಭಾರತ್ ರೈಲು ಓಡುವಂತಹ ಪಿಟ್ ಮಾರ್ಗವೂ ಆಗಿದೆ. ಒಂದೆರಡು ರೈಲು ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.