ADVERTISEMENT

ಹಬ್ಬಕ್ಕಿಲ್ಲ ವಿಶೇಷ ರೈಲು; ಪ್ರಯಾಣಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 16:52 IST
Last Updated 13 ಅಕ್ಟೋಬರ್ 2020, 16:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಸಾಲು ಸಾಲು ರಜೆಗಳಿದ್ದು, ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಬರುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ಈ ಬಾರಿ ವಿಶೇಷ ರೈಲನ್ನು ಆರಂಭಿಸದಿರುವುದು ಈ ಭಾಗದ ಪ್ರಯಾಣಿಕರ ಬೇಸರಕ್ಕೆ ಕಾರಣವಾಗಿದೆ.

ಭಾರತೀಯ ರೈಲ್ವೆಯು ಮಂಗಳವಾರ 196 ಹೆಚ್ಚುವರಿ ವಿಶೇಷ ರೈಲುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಬೆಂಗಳೂರಿನಿಂದ ಯಾವುದೇ ರೈಲುಗಳಿಲ್ಲ. ಆದರೆ, ಬೆಂಗಳೂರಿನಿಂದ ಮುಂಬೈ, ಹುಬ್ಬಳ್ಳಿ ಹಾಗೂ ಮೈಸೂರಿಗೆ ನೈರುತ್ಯ ರೈಲ್ವೆಯು ವಿಶೇಷ ರೈಲುಗಳನ್ನು ಓಡಿಸಲಿದೆ. ಮೊದಲೇ ಆರ್ಥಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ರೈಲ್ವೆ ಇಲಾಖೆ ಅನ್ಯಾಯ ಮಾಡಿದೆ ಎಂದು ಈ ಭಾಗದ ಸಾಮಾಜಿಕ ಹೋರಾಟಗಾರರು ಬೇಸರ ಹೊರಹಾಕಿದ್ದಾರೆ.

‘ಅಕ್ಟೋಬರ್ 20ರಿಂದ ನವೆಂಬರ್ 30ರವರೆಗೆ ರೈಲುಗಳು ಸಂಚರಿಸಲಿವೆ. ಆದರೆ, ಈ ಭಾಗದ ಜಿಲ್ಲೆಗಳಿಗೆ ಮಾತ್ರ ಮತ್ತೆ ಮಲತಾಯಿ ಧೋರಣೆ ಮುಂದುವರಿದೆ. ಈ ಭಾಗದ ಬಹುತೇಕ ಜನಪ್ರತಿನಿಧಿಗಳು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೇರಿದವರು. ಇಷ್ಟೊಂದು ಅನ್ಯಾಯವಾಗುತ್ತಿದ್ದರೂ ಅವರೇಕೆ ಸುಮ್ಮನೆ ಕುಳಿತಿದ್ದಾರೆ’ ಎಂದು ಕಲಬುರ್ಗಿ ವಿಭಾಗೀಯ ರೈಲ್ವೆ ಹೋರಾಟ ಸಮಿತಿ ಸಂಚಾಲಕ ಸುನೀಲ ಕುಲಕರ್ಣಿ ಟೀಕಿಸಿದರು.

ADVERTISEMENT

‘ಕಳೆದ ವರ್ಷವೂ ಈ ಅನ್ಯಾಯ ಖಂಡಿಸಿ ಟ್ವಿಟ್ಟರ್‌ ಅಭಿಯಾನ ನಡೆಸಿದ್ದೆವು. ಆ ಒತ್ತಡಕ್ಕೆ ಮಣಿದು ರೈಲ್ವೆ ಇಲಾಖೆ ವಿಶೇಷ ರೈಲು ಆರಂಭಿಸಿತ್ತು. ಈ ವರ್ಷವೂ ಮಲತಾಯಿ ಧೋರಣೆ ಮುಂದುವರಿದಿದೆ’ ಎಂದರು.

ವಿಶೇಷ ರೈಲು ಓಡಿಸಬೇಕು ಎಂದು ಒತ್ತಾಯಿಸಿ ಈ ಭಾಗದ ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.