ಕಲಬುರಗಿ: ಇಲ್ಲಿನ ಅಪ್ಪ ಕೆರೆ ರಸ್ತೆಯಲ್ಲಿರುವ ಜಿಲ್ಲಾ ವಿಜ್ಞಾನ ಕೇಂದ್ರವು ವರ್ಷದಿಂದ ವರ್ಷಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತಿದೆಯೇ? ಕಳೆದ ಕೆಲವು ವರ್ಷಗಳ ಅಂಕಿ–ಅಂಶಗಳು ಇಂಥ ಅನುಮಾನಕ್ಕೆ ಪುಷ್ಟಿ ನೀಡುತ್ತಿವೆ.
ಸಾಕಷ್ಟು ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ‘ವಿಜ್ಞಾನ ದೇಗುಲ’ ಎನಿಸಿರುವ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುವ ವಿಜ್ಞಾನಾಸಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ಉದ್ದೇಶದಿಂದ ನಗರದಲ್ಲಿ 1984ರಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರದ ವಿಜ್ಞಾನ ಮ್ಯೂಸಿಯಂಗಳ ರಾಷ್ಟ್ರೀಯ ಪರಿಷತ್ತಿನಡಿ (ಎನ್‌ಸಿಎಸ್‌ಎಂ) ಕಾರ್ಯನಿರ್ವಹಿಸುವ ರಾಜ್ಯದ ಏಕೈಕ ಜಿಲ್ಲಾ ವಿಜ್ಞಾನ ಕೇಂದ್ರ ಎಂಬ ಹೆಗ್ಗಳಿಕೆ ಇದಕ್ಕಿದೆ.
ಇಂಥ ವಿಜ್ಞಾನ ಕೇಂದ್ರಕ್ಕೆ ಕೋವಿಡ್ ಹಾವಳಿ ಜೋರಾಗಿದ್ದ 2021–2022ನೇ ಆರ್ಥಿಕ ವರ್ಷದಲ್ಲಿ 76,973 ಮಂದಿ ಸಂದರ್ಶಕರು ಭೇಟಿ ನೀಡಿದ್ದರು. ₹13 ಲಕ್ಷ ಆದಾಯ ಹರಿದು ಬಂದಿತ್ತು. 2022–23ನೇ ಆರ್ಥಿಕ ವರ್ಷದಲ್ಲಿ ಸಂದರ್ಶಕರ ಸಂಖ್ಯೆಯಲ್ಲಿ ಚೇತರಿಕೆ ಕಂಡು ಬಂದಿತ್ತು. ಆಗ 1,76,026 ಮಂದಿ ಭೇಟಿ ನೀಡಿ, ಒಟ್ಟು ₹32.44 ಲಕ್ಷ ಆದಾಯ ಸಂಗ್ರಹವಾಗಿತ್ತು.
2023–24ನೇ ಆರ್ಥಿಕ ವರ್ಷದಲ್ಲಿ 1,72,684 ವಿಜ್ಞಾನಾಸಕ್ತರು ಭೇಟಿ ನೀಡಿದ್ದು, ₹34 ಲಕ್ಷ ಆದಾಯ ಸಂಗ್ರಹವಾಗಿದೆ. ಸಂದರ್ಶಕರ ಪೈಕಿ 81,117 ಜನ ಸಾಮಾನ್ಯರಾದರೆ, 75,120 ವಿದ್ಯಾರ್ಥಿಗಳಾಗಿದ್ದಾರೆ.
2024-25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜೂನ್ ಅಂತ್ಯದ ವರೆಗಿನ ಮೊದಲ ತ್ರೈಮಾಸಿಕದಲ್ಲಿ 23,044 ಮಂದಿ ವಿಜ್ಞಾನಾಸಕ್ತರು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ್ದು, ಒಟ್ಟು ₹6,32,272 ಆದಾಯ ಸಂಗ್ರಹವಾಗಿದೆ. 2023–24ರ ಮೊದಲ ತ್ರೈಮಾಸಿಕದಲ್ಲಿ 27,757 ವಿಜ್ಞಾನಾಸಕ್ತರು ಭೇಟಿ ನೀಡಿದ್ದರು. ಒಟ್ಟು ₹6,91,754 ಆದಾಯ ಸಂಗ್ರಹವಾಗಿತ್ತು.
ವಿನೂತನ ಚಟುವಟಿಕೆ: ‘ಸಾರ್ವಜನಿಕರನ್ನು ಆಕರ್ಷಿಸಿ ವಿಜ್ಞಾನ ಕುರಿತು ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಶೀಘ್ರವೇ ಸರಣಿ ಜಾಗೃತಿ ಕಾರ್ಯಕ್ರಮ, ರೈತರಿಗೆ ಚಟುವಟಿಕೆಗೆ ವಿಜ್ಞಾನದ ಸ್ಪರ್ಶ ನೀಡುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಚಿಂತಿಸಲಾಗಿದೆ’ ಎನ್ನುತ್ತಾರೆ ಜಿಲ್ಲಾ ವಿಜ್ಞಾನ ಕೇಂದ್ರದ ವಿಜ್ಞಾನ ಅಧಿಕಾರಿ ಕೆ.ಎಂ.ಸುನೀಲ.
2023–24ರ ಏಪ್ರಿಲ್‌ನಲ್ಲಿ 7,863, ಮೇನಲ್ಲಿ 10,891, ಜೂನ್‌ನಲ್ಲಿ 9,003 ಮಂದಿ ಭೇಟಿ 2024–25ರ ಏಪ್ರಿಲ್‌ನಲ್ಲಿ 6,886, ಮೇನಲ್ಲಿ 9,966, ಜೂನ್‌ನಲ್ಲಿ 6,192 ವಿಜ್ಞಾನಾಸಕ್ತರಿಂದ ವೀಕ್ಷಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.