ADVERTISEMENT

ಅಫಜಲಪುರ: ಆರೋಗ್ಯ ಉಪಕೇಂದ್ರಕ್ಕೇ ಬೇಕು ಚಿಕಿತ್ಸೆ

ಗ್ರಾಮ ಪಂಚಾಯಿತಿಗೆ ಒಂದು ಉಪಕೇಂದ್ರ, ಸಿಬ್ಬಂದಿ ಮಾತ್ರ ಗೈರು

ಶಿವಾನಂದ ಹಸರಗುಂಡಗಿ
Published 27 ಸೆಪ್ಟೆಂಬರ್ 2024, 5:16 IST
Last Updated 27 ಸೆಪ್ಟೆಂಬರ್ 2024, 5:16 IST
ಅಫಜಲಪುರ ತಾಲ್ಲೂಕಿನ ಬೋಸಗಾ ಗ್ರಾಮದ ಕಿರಿಯ ಆರೋಗ್ಯ ಸಹಾಯಕಿಯರ ಉಪಕೇಂದ್ರ
ಅಫಜಲಪುರ ತಾಲ್ಲೂಕಿನ ಬೋಸಗಾ ಗ್ರಾಮದ ಕಿರಿಯ ಆರೋಗ್ಯ ಸಹಾಯಕಿಯರ ಉಪಕೇಂದ್ರ   

ಅಫಜಲಪುರ: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಸರ್ಕಾರ ಕಿರಿಯ ಆರೋಗ್ಯ ಸಹಾಯಕಿಯರ ಉಪಕೇಂದ್ರಗಳನ್ನು ಆರಂಭಿಸಿ ಅಲ್ಲಿ ಒಬ್ಬ ಕಿರಿಯ ಆರೋಗ್ಯ ಸಹಾಯಕಿ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಿದೆ. ಕೆಲವೆಡೆ ಅವರು ವಾಸ ಮಾಡಲು ಕೊಠಡಿಗಳನ್ನು ನಿರ್ಮಾಣ ಮಾಡಿದ್ದರೂ ಉಪಕೇಂದ್ರಗಳಿಗೆ ಆರೋಗ್ಯ ಸಹಾಯಕರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಬಾರದೆ ಇರುವದರಿಂದ ಅವು ಹಾಳಾಗುತ್ತಿವೆ. ಜನರಿಗೆ ಸಕಾಲಕ್ಕೆ ಆರೋಗ್ಯ ಸೇವೆ ದೊರೆಯುತ್ತಿಲ್ಲ.

ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ ಹೇಳುವ ಪ್ರಕಾರ ಪ್ರತಿ ಉಪಕೇಂದ್ರಕ್ಕೆ ಒಬ್ಬರು ಕಿರಿಯ ಆರೋಗ್ಯ ಸಹಾಯಕರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಇರುತ್ತಾರೆ. ಒಬ್ಬೊಬ್ಬರು ಮೂರು ಉಪಕೇಂದ್ರಗಳನ್ನು ನೋಡಿಕೊಳ್ಳಬೇಕು. ಉಪಕೇಂದ್ರದಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ಮಾತ್ರೆಗಳನ್ನು ನೀಡಲಾಗುತ್ತದೆ. ಬೋಸಾಗ ಗ್ರಾಮದ ಕಿರಿಯ ಆರೋಗ್ಯ ಸಹಾಯಕರ ಉಪಕೇಂದ್ರದಲ್ಲಿ ಶ್ರೀದೇವಿ ಕಿಣಗಿ ಎಂಬವರು ಕೆಲಸ ಮಾಡುತ್ತಾರೆ. ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಯಾಗಿ ಮಾಣಿಕ್ಯಮ್ಮ ಕೆಲಸ ಮಾಡುತ್ತಾರೆ. ಆದರೆ ಅವರು ಹೆರಿಗೆ ರಜೆ ಮೇಲಿದ್ದಾರೆ.

ಬೋಸಗಾ ಗ್ರಾಮದ ಮುಖಂಡ ಕಲ್ಲಪ್ಪ ಕೆಂಗನಾಳ, ಅಪ್ಪಶ ಕ್ಷತ್ರಿ ಅವರು ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರದ ಬಗ್ಗೆ ಮಾಹಿತಿ ನೀಡಿ, ‘ಇದು ಕೇವಲ ನೌಕರರಿಗೆ ಸಂಬಳ ಕೊಡುವ ಕೇಂದ್ರವಾಗಿದೆ. ಇಲ್ಲಿ ಯಾರೂ ಬರುವುದಿಲ್ಲ. ಮಳೆಗಾಲದಲ್ಲಿ ಕುರಿಗಳನ್ನು ಕಟ್ಟುತ್ತಾರೆ. ಸದಾಕಾಲ ಮುಚ್ಚಿಕೊಂಡಿರುತ್ತದೆ. ನಾವು ಕಾಯಿಲೆ ಬಂದರೆ ಕರಜಿಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ಸರ್ಕಾರ ಸುಂದರವಾದ ಕಟ್ಟಡ ನಿರ್ಮಾಣ ಮಾಡಿದೆ. ಎಲ್ಲ ಸೌಲಭ್ಯ ನೀಡಿದೆ. ಅಗತ್ಯ ಸಿಬ್ಬಂದಿ ನೇಮಕ ಮಾಡಿದೆ. ಆದರೆ ಅವರು ಬರುತ್ತಿಲ್ಲ’ ಎಂದು ತಿಳಿಸಿದರು.

ADVERTISEMENT

ತಾಲೂಕಿನ ಅಳ್ಳಗಿ (ಕೆ) ಗ್ರಾಮದ ಉಪಕೇಂದ್ರದ್ದೂ ಅದೇ ಕತೆ. ವರ್ಷಕ್ಕೊಮ್ಮೆ, ಎರಡು ವರ್ಷಕ್ಕೊಮ್ಮೆ ಟೆಂಡರ್ ಹಿಡಿದವರು ಬಣ್ಣ ಬಳಿದು ಹೋಗುತ್ತಾರೆ. ಕಾಯಿಲೆಗಳು ಬಂದರೆ ಜನರು ಪಟ್ಟಣಕ್ಕೆ ಬರಬೇಕು. ಸಾಕಷ್ಟು ಬಾರಿ ನಾವು ದೂರು ನೀಡಿದ್ದೇವೆ ಯಾವುದೇ ಪ್ರಯೋಜನವಾಗಿಲ್ಲ. ಬಡ ಜನರಿಗೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಗಳು ದೊರೆಯುತ್ತಿಲ್ಲ’ ಎಂದು ಗ್ರಾ.ಪಂ. ಅಧ್ಯಕ್ಷ ಶಬನಾ ಬೇಗಮ್ ಶೇಕ್ ಹೇಳುತ್ತಾರೆ.

‘ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕಿರಿಯ ಆರೋಗ್ಯ ಸಹಾಯಕಿಯರ ಉಪಕೇಂದ್ರ ಸ್ಥಾಪನೆಯಾಗಿದ್ದು, ಹೆಚ್ಚಿನ ಕೇಂದ್ರಗಳಿಗೆ ಸಿಬ್ಬಂದಿ ಬರುತ್ತಿಲ್ಲ. ಅಧಿಕಾರಿಗಳು ಕೇವಲ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರೆ ಗ್ರಾಮೀಣ ಭಾಗದ ಸಮಸ್ಯೆ ಗೊತ್ತಾಗುವುದಿಲ್ಲ’ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಗುರು ಚಾಂದಕೋಟೆ ತಿಳಿಸಿದರು. 

ಮಳೆಗಾಲ ಇರುವುದರಿಂದ ಜನರಿಗೆ ಸಣ್ಣ ಪುಟ್ಟ ಕಾಯಿಲೆಗಳು ಬರುತ್ತವೆ. ಪ್ರಥಮ ಚಿಕಿತ್ಸೆ ನೀಡಲು ಕಿರಿಯ ಆರೋಗ್ಯ ಸಹಾಯಕಿಯರ ಉಪಕೇಂದ್ರದಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು
ಶಬನಾ ಬೇಗಂ ಶೇಕ್ ಗೌರ(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.