ADVERTISEMENT

ಕಲಬುರಗಿ: ವಿಶ್ವ ಛಾಯಾಗ್ರಾಹಕರ ದಿನಾಚರಣೆ

ಪತ್ರಿಕಾ ಭವನದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 5:01 IST
Last Updated 20 ಆಗಸ್ಟ್ 2022, 5:01 IST
ಕಲಬುರಗಿಯ ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು. ಜಿ.ಪಂ. ಸಿಇಒ ಡಾ.ಗಿರೀಶ ಬದೋಲೆ, ಶಾಹಿನ್‌ ಮೊಕಾಶಿ, ಬಾಬುರಾವ ಯಡ್ರಾಮಿ, ಶಿವರಂಜನ್ ಸತ್ಯಂಪೇಟೆ, ಟಿ.ವಿ. ಶಿವಾನಂದನ್, ಸಂಗಮನಾಥ ರೇವತಗಾಂವ, ರಾಜು ಕೋಷ್ಟಿ, ಜಯತೀರ್ಥ ಪಾಟೀಲ ಇತರರು ಇದ್ದರು
ಕಲಬುರಗಿಯ ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು. ಜಿ.ಪಂ. ಸಿಇಒ ಡಾ.ಗಿರೀಶ ಬದೋಲೆ, ಶಾಹಿನ್‌ ಮೊಕಾಶಿ, ಬಾಬುರಾವ ಯಡ್ರಾಮಿ, ಶಿವರಂಜನ್ ಸತ್ಯಂಪೇಟೆ, ಟಿ.ವಿ. ಶಿವಾನಂದನ್, ಸಂಗಮನಾಥ ರೇವತಗಾಂವ, ರಾಜು ಕೋಷ್ಟಿ, ಜಯತೀರ್ಥ ಪಾಟೀಲ ಇತರರು ಇದ್ದರು   

ಕಲಬುರಗಿ: ಆಗಷ್ಟೇ ಕ್ಯಾಮೆರಾಗಳು ಆವಿಷ್ಕಾರವಾದ ಸಂದರ್ಭದಲ್ಲೇ ಛಾಯಾಗ್ರಾಹಕರು ಮೊದಲ ಹಾಗೂ ಎರಡನೇ ವಿಶ್ವಯುದ್ಧ ಸೇರಿದಂತೆ ವಿವಿಧ ಘಟನಾವಳಿಗಳನ್ನು ಹಿಡಿದಿಟ್ಟಿದ್ದಾರೆ. ಅವರ ಕಾರ್ಯ ಶ್ಲಾಘನೀಯವಾದುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಡಿ. ಬದೋಲೆ ಅಭಿಪ್ರಾಯಪಟ್ಟರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಶುಕ್ರವಾರ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಫೋಟೊಗಳನ್ನು ಸಂಸ್ಕರಣೆ ಮಾಡಬೇಕಾದರೆ ಅಂದಿನ ಕಾಲದಲ್ಲಿ ಹಲವು ಅಪಾಯಕಾರಿ ರಾಸಾಯನಿಕಗಳನ್ನು ಬಳಕೆ ಮಾಡಬೇಕಿತ್ತು. ಅಂಥ ಆರೋಗ್ಯಕ್ಕೆ ಮಾರಕವಾಗುವ ರಾಸಾಯನಿಕಗಳನ್ನು ಬಳಸಿದ್ದಕ್ಕೆ ಹಲವರೆಗೆ ಸಮಸ್ಯೆಗಳಾಗಿವೆ. ಆದರೆ, ಅವುಗಳನ್ನು ದಿಟ್ಟತನದಿಂದ ಎದುರಿಸಿ ಜಗತ್ತಿಗೆ ಬೇಕಾದ ಚಿತ್ರಗಳನ್ನು ನೀಡಿದ್ದಾರೆ’ ಎಂದರು.

ಭಾರತದಲ್ಲಿ ಮಹಾತ್ಮ ಗಾಂಧೀಜಿಯವರ ದಂಡಿ ಸತ್ಯಾಗ್ರಹ, ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಅದರ ಪ್ರತಿಯನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಪ್ರಧಾನಿ ನೆಹರೂ ಅವರಿಗೆ ನೀಡುತ್ತಿರುವ ಛಾಯಾಚಿತ್ರಗಳು ಅಪರೂಪದ ದಾಖಲೆಗಳಾಗಿ ಉಳಿದಿವೆ ಎಂದು ಸ್ಮರಿಸಿದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಉಪ ಸಂಪಾದಕಿ, ವರದಿಗಾರ್ತಿ ಶಾಹೀನ್ ಮೊಕಾಶಿ, ‘ಕಳೆದ ಹಲವು ವರ್ಷಗಳಿಂದೀಚೆಗೆ ಛಾಯಾಗ್ರಹಣ ಕ್ಷೇತ್ರ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಅದರಂತೆಯೇ ಛಾಯಾಗ್ರಾಹಕರೂ ವಿನೂತನ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಸಾವಿರ ಶಬ್ದಗಳು ಹೇಳಲಾಗದ್ದನ್ನು ಒಂದು ಫೋಟೊ ಹೇಳುತ್ತದೆ. ಸಾಕಷ್ಟು ಒತ್ತಡಗಳ ಮಧ್ಯೆಯೇ ಪತ್ರಿಕಾ ಛಾಯಾಗ್ರಾಹಕರು ಕೆಲಸ ಮಾಡುತ್ತಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಚಿತ್ರವನ್ನು ನೋಡಿಯೇ ಸುದ್ದಿಗಳನ್ನು ಬರೆಯಲು ಸಾಧ್ಯವಾಗುತ್ತದೆ’ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ‘ಛಾಯಾಚಿತ್ರಗಳು ಹಾಗೂ ಛಾಯಾಗ್ರಾಹಕರು ಇಲ್ಲದ ಸುದ್ದಿಮನೆ ಅಪೂರ್ಣವಾದಂತೆ. ದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳು ಸುದ್ದಿಗಾರರಿಗಿಂತ ಮೊದಲು ಛಾಯಾಗ್ರಾಹಕರಿಗೆ ಗೊತ್ತಾಗಿರುತ್ತವೆ. ಇಡೀ ಜೀವಮಾನದಲ್ಲಿ ನೆನಪಿಡುವಂತಹ ಚಿತ್ರಗಳನ್ನು ಛಾಯಾಗ್ರಾಹಕರು ತೆಗೆದಿರುತ್ತಾರೆ. ಒಂದು ಚಿತ್ರದಿಂದಾಗಿ ಸರ್ಕಾರದ ನೀತಿಯೇ ಬದಲಾದ ಉದಾಹರಣೆಗಳೂ ಇವೆ’ ಎಂದರು.

‘ಪ್ರಜಾವಾಣಿ’ ಹಿರಿಯ ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ರಾಜ್ಯ ಸಮಿತಿ ಸದಸ್ಯ ಪ್ರತಿನಿಧಿ ಡಾ. ಶಿವರಂಜನ್ ಸತ್ಯಂಪೇಟೆ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಅರುಣ ಕುಲಕರ್ಣಿ, ನಾರಾಯಣ ಜೋಶಿ, ಮುಕ್ತಾರೊದ್ದೀನ್, ಅಮ್ಜದ್, ಶಿವಶರಣಪ್ಪ ಬೆಣ್ಣೂರ, ರಾಜಕುಮಾರ ಉದನೂರ, ಸುನೀಲ್ ರೆಡ್ಡಿ ಸೇರಿದಂತೆ ಇತರರು ತೆಗೆದ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.