ಕಲಬುರಗಿ: ದೂರದ ಅಮೆರಿಕದಲ್ಲಿ ಪ್ರಸಿದ್ಧಿಯಾಗಿರುವ ‘ಪಿಕಲ್‌ಬಾಲ್’ ಕ್ರೀಡೆ ತೊಗರಿನಾಡು ಕಲಬುರಗಿಗೂ ಕಾಲಿಟ್ಟಿದೆ.
ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಸಿಮೆಂಟ್ ಹಾಸಿನಲ್ಲಿ ಕೋರ್ಟ್ ನಿರ್ಮಿಸಿ ತರಬೇತಿಯನ್ನು ಆರಂಭಿಸಲಾಗಿದೆ.
‘1968ರಲ್ಲಿ ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ಆರಂಭಗೊಂಡ ಈ ಕ್ರೀಡೆಯನ್ನು ಭಾರತದಲ್ಲಿ 2008ರಲ್ಲಿ ಮೊದಲ ಬಾರಿಗೆ ಮುಂಬೈನಲ್ಲಿ ಪರಿಚಯಿಸಲಾಯಿತು. ಈಗ ಮಹಾರಾಷ್ಟ್ರ ಮತ್ತು ಗುಜರಾತ್ ಹೊರತುಪಡಿಸಿ ಹೆಚ್ಚಿಗೆ ಎಲ್ಲಿಯೂ ಆಡುವುದಿಲ್ಲ. ಬೆಂಗಳೂರಿನಲ್ಲಿ ಖಾಸಗಿಯಾಗಿ ಆಡಿಸಲಾಗುತ್ತದೆ’ ಎಂದು ಕಲಬುರಗಿಗೆ ಈ ಕ್ರೀಡೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಿ.ಎಸ್. ದೇಸಾಯಿ ಹೇಳುತ್ತಾರೆ.
‘ಜಿಲ್ಲಾಡಳಿತ, ಕ್ರೀಡಾ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲ ಕ್ರೀಡೆಗೆ ಸಿಕ್ಕಿದೆ. ನಾವು ಇದರಿಂದ ವೈಯಕ್ತಿಕ ಲಾಭ ಮಾಡಿಕೊಳ್ಳುವ ಉದ್ದೇಶವಿಲ್ಲ. ಪ್ರತಿಭೆಗಳಿಗೆ ನೆರವಾಗುವ ಉದ್ದೇಶ ಅಷ್ಟೇ ನಮ್ಮದು. ₹ 1.50 ಲಕ್ಷ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಕೋರ್ಟ್ ನಿರ್ಮಿಸಿದ್ದೇವೆ. ತಾಲ್ಲೂಕು, ಜಿಲ್ಲಾಮಟ್ಟಕ್ಕೂ ಸ್ಪರ್ಧೆಗಳನ್ನು ಆಯೋಜಿಸಿ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲತಃ ವಿಜಯಪುರ ಜಿಲ್ಲೆಯ ಕೊಣ್ಣೂರಿನವರಾದ ದೇಸಾಯಿ ಅವರು 40 ವರ್ಷಗಳಿಂದ ಕಲಬುರಗಿಯಲ್ಲೇ ನೆಲೆಸಿದ್ದಾರೆ.
ಜಿಮ್ಸ್‌ನಲ್ಲಿ ಸೀನಿಯರ್ ಫಾರ್ಮಸಿ ಆಫೀಸರ್ ಆಗಿದ್ದ ಅವರು 2017ರಲ್ಲಿ ಅಖಿಲ ಭಾರತ ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. 2010ರಿಂದ ಕಲಬುರಗಿಯ ಸರ್ಕಾರಿ, ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಅವರ ಪತ್ನಿ ವಿಜಯಲಕ್ಷ್ಮಿ ಗೃಹಿಣಿ. ಅವರ ಮಕ್ಕಳಾದ ದೀಪಕ್ ಮತ್ತು ಚೇತನ್ ಇಬ್ಬರೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಟೆನಿಸ್ ಆಡಿದ್ದಾರೆ.
ಸದ್ಯ ಅಮೆರಿಕದಲ್ಲಿ ವಾಲ್‌ಮಾರ್ಟ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ದೇಸಾಯಿ ಅವರ ಪುತ್ರ ಚೇತನ್ ಒಂದು ತಿಂಗಳು ರಜೆ ತೆಗೆದುಕೊಂಡು ‘ಡಿಂಕ್ ಏಸ್’ ಸ್ಟಾರ್ಟ್‌ಅಪ್ ಕಂಪನಿ ಮೂಲಕ ಇಲ್ಲಿಯ ಆಸಕ್ತರಿಗೆ ತರಬೇತಿ ನೀಡುತ್ತಿದ್ದಾರೆ. ಅಮೆರಿಕದಿಂದಲೇ ಪಿಕಲ್‌ಬಾಲ್ ಆಡುವ ಬ್ಯಾಟ್ ಮತ್ತು ಬಾಲ್ ತೆಗೆದುಕೊಂಡು ಬಂದಿದ್ದಾರೆ.
‘ಪಿಕಲ್‌ಬಾಲ್ ಕ್ರೀಡೆಯಿಂದ ದೈಹಿಕ, ಮಾನಸಿಕ ಸಾಮರ್ಥ್ಯ ಅಲ್ಲದೇ ಏಕಾಗ್ರತೆ ಕೂಡ ವೃದ್ಧಿಯಾಗುತ್ತದೆ. ಕುಟುಂಬದ ಎಲ್ಲರೂ ಆಡಬಹುದಾದ ಕ್ರೀಡೆ ಇದು’ ಎಂದು ಕೋಚ್ ಚೇತನ್ ದೇಸಾಯಿ ಹೇಳುತ್ತಾರೆ.
‘ಇಲ್ಲಿಯವರೆಗೆ 20 ಜನ ಸದಸ್ಯರಿದ್ದಾರೆ. ಒಬ್ಬರಿಗೆ ₹ 400 ಸದಸ್ಯತ್ವ ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವನ್ನು ಕ್ರೀಡಾ ಇಲಾಖೆಗೆ ನೀಡಲಾಗುತ್ತದೆ. ಬ್ಯಾಟ್ ಮತ್ತು ಬಾಲ್‌ಗಳನ್ನು ಸದಸ್ಯರು ‘ಡಿಂಕ್ ಏಸ್’ ಕಂಪನಿಯಿಂದ ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು. ಆದರೆ, ಆ ವೆಚ್ಚ ಭರಿಸಲು ಸಾಧ್ಯವಾಗದಿದ್ದವರಿಗೆ ಸದ್ಯ ನಾವು ಉಚಿತವಾಗಿ ಕೊಟ್ಟು ಆಡಿಸುತ್ತಿದ್ದೇವೆ’ ಎಂದು ಬಿ.ಎಸ್. ದೇಸಾಯಿ ಹೇಳಿದರು.
ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಈಚೆಗೆ ಪಿಕಲ್‌ಬಾಲ್ ಕ್ರೀಡಾ ತರಬೇತಿಯನ್ನು ಉದ್ಘಾಟಿಸಿದರು.
ನಾವು ಈ ನೆಲದಲ್ಲಿಯೇ ಆಟವಾಡಿ ಬೆಳೆದಿದ್ದೇವೆ. ನಮ್ಮ ಜನರಿಗೆ ಏನಾದರೂ ಒಳ್ಳೆಯದು ಮಾಡುವ ಉದ್ದೇಶ ನಮ್ಮದು. ಇಲ್ಲಿಂದಲೇ ಈ ಕ್ರೀಡೆ ಎಲ್ಲ ಕಡೆಗೂ ಹಬ್ಬಲಿಚೇತನ್ ದೇಸಾಯಿ ಪಿಕಲ್ ಬಾಲ್ ಕೋಚ್
ಯಾವ ರೀತಿಯ ಆಟ?
ಟೆನಿಸ್ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ ಲಕ್ಷಣಗಳು ಮಿಳಿತವಾಗಿರುವ ಈ ಕ್ರೀಡೆಯಲ್ಲಿ ಗಟ್ಟಿಯಾದ ಪ್ಲಾಸ್ಟಿಕ್ ಚೆಂಡು ಬಳಸಲಾಗುತ್ತದೆ. ಇದು ಟೆನಿಸ್ ಬಾಲ್‌ಗಿಂತ ಕಡಿಮೆ ಪುಟಿತವನ್ನು ಒಳಗೊಂಡಿರುತ್ತದೆ. ಟೇಬಲ್ ಟನಿಸ್ ಮಾದರಿಯಲ್ಲಿರುವ ಆದರೆ ಅದಕ್ಕಿಂತ ಸ್ವಲ್ಪ ಉದ್ದದ ಪ್ಯಾಡಲ್ ಬಳಸಿ ಆಡಲಾಗುತ್ತದೆ. ಯಾವುದೇ ವಯೋಮಾನದವರು ಆಡಬಹುದಾದ ಈ ಕ್ರೀಡೆಗೆ 34 ಇಂಚು ಎತ್ತರದ ನೆಟ್ ಬಳಸಲಾಗುತ್ತದೆ. ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಿವೆ. 13.4 ಮೀಟರ್ ಉದ್ದ ಮತ್ತು 6.1 ಮೀ. ಅಗಲದ ಕೋರ್ಟ್ ಇರುತ್ತದೆ. ಸರ್ವ್ ಮಾಡಿದವರು ಮಾತ್ರ ಪಾಯಿಂಟ್ ಗಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.