ಚಿಂಚೋಳಿ: ಇಲ್ಲಿಗೆ ಸಮೀಪದ ಪೋಲಕಪಳ್ಳಿಯಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಿಸಿದ್ದ ತಾಲ್ಲೂಕು ಕ್ರೀಡಾಂಗಣ ಅಪೂರ್ಣವಾಗಿದೆ.
ಭೌತಿಕವಾಗಿ ಪೂರ್ಣಗೊಂಡಿದ್ದ ಕ್ರೀಡಾಂಗಣವನ್ನು 6 ತಿಂಗಳ ಹಿಂದೆ ಉದ್ಘಾಟಿಸಲಾಗಿದೆ. ಆದರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕ್ರೀಡಾಂಗಣದ ಆವರಣದಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಈ ಗುಂಡಿಗಳು ಹೊಂಡಗಳಂತೆ ಕಾಣುತ್ತಿದ್ದು, ಮಳೆ ನೀರು ನಿಂತು ಅದ್ವಾನ ಸೃಷ್ಟಿಯಾಗಿದೆ.
ಶನಿವಾರ ಹಾಗೂ ಭಾನುವಾರ ತಾಲ್ಲೂಕುಮಟ್ಟದ ಕ್ರೀಡಾಕೂಟಗಳನ್ನು ಇಲ್ಲಿಯೇ ನಡೆಸಲಾಗಿದ್ದು ನೂತನ ಕ್ರೀಡಾಂಗಣ ಅವ್ಯವಸ್ಥೆಯಿಂದ ಕೂಡಿದೆ ಎಂದು ಮಕ್ಕಳು ದೂರಿದ್ದಾರೆ.
ಡ್ರೆಸ್ಸಿಂಗ್ ರೂಮ್‌ನಲ್ಲಿ ವಿದ್ಯುದ್ದೀಕರಣ ಕಾಮಗಾರಿ ಇನ್ನೂ ನಡೆಯುತ್ತಿದೆ. ಕ್ರೀಡಾಂಗಣದ ಈಶಾನ್ಯ ದಿಕ್ಕಿನ ಮೂಲೆಯಲ್ಲಿ ತಗ್ಗು ಇದ್ದು ಮುರುಮ್ ಹರಡಲಾಗಿದೆ. ಆದರೆ ಇದರ ಮೇಲೆ ರೋಲರ್ ಓಡಿಸಿಲ್ಲ.
ತಾಲ್ಲೂಕಿನಲ್ಲಿ ಕ್ರೀಡಾಂಗಣ ಇರಲಿಲ್ಲ. ಹೊಸದಾಗಿ ಕ್ರೀಡಾಂಗಣ ನಿರ್ಮಾಣ ಮಾಡಿದ್ದು ಸಂತೋಷ. ಆದರೆ ಕ್ರೀಡಾಂಗಣ ಅಸಮರ್ಪಕವಾಗಿದೆ ಅಲ್ಲಲ್ಲಿ ನೀರು ನಿಂತು ತೊಂದರೆಯಾಗಿದೆಮೌಲಾನಾ ಪಟೇಲ್ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ
ಅಂದಾಜು ₹2 ಕೋಟಿ ಮೊತ್ತದಲ್ಲಿ ಕ್ರೀಡಾಂಗಣ ನಿರ್ಮಿಸಿದ್ದು, ಆವರಣ ಗೋಡೆ, ಎರಡು ಕಡೆ ಗೇಟ್, ಶೌಚಾಲಯ, ವಿದ್ಯುದ್ದೀಪ ಕೈಗೊಳ್ಳಲಾಗಿದೆ. ಮೈದಾನ, ಚರಂಡಿ ನಿರ್ಮಿಸಲಾಗಿದೆ. ಧ್ವಜಕಟ್ಟೆಯೂ ಪ್ರೇಕ್ಷಕರ ಗ್ಯಾಲರಿಗೆ ಹೊಂದಿಕೊಂಡೇ ನಿರ್ಮಿಸಲಾಗಿದ್ದು ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
‘ತಾಲ್ಲೂಕು ಕ್ರೀಡಾಂಗಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆಯವರು ತಿಳಿಸಿದ್ದಾರೆ. ನಾನು ಖುದ್ದು ಪರಿಶೀಲಿಸಿ ಹಸ್ತಾಂತರ ಮಾಡಿಕೊಳ್ಳುತ್ತೇನೆ’ ಎಂದು ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ತಿಳಿಸಿದ್ದಾರೆ. ಗುತ್ತಿಗೆದಾರರಿಗೆ ₹1.40 ಕೋಟಿ ಅನುದಾನ ಪಾವತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಲ್ಲೂಕು ಕ್ರೀಡಾಂಗಣದಲ್ಲಿ ಹೊಂಡಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಕೆಂಪು ಮುರುಮ್ ತಂದು ಹಾಕಲಾಗಿದೆ. ಇದನ್ನು ಹರಡಿ ರೋಲರ್ ಓಡಿಸಿ ಸಮತಟ್ಟು ಮಾಡುತ್ತೇವೆಬಸವರಾಜ ಬೈನೋರ್ ಎಇಇ ಲೋಕೋಪಯೋಗಿ ಇಲಾಖೆ ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.