ADVERTISEMENT

ದ್ವೇಷದ ರಾಜಕಾರಣಕ್ಕೆ ಜಾತಿ, ಧರ್ಮಗಳೇ ಅಸ್ತ್ರಗಳು: ನಾಗೇಂದ್ರ ವಿಷಾದ

17 ಜನ ಕವಿಗಳಿಂದ ಪ್ರಗತಿಪರ ಕವನ ವಾಚನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 16:16 IST
Last Updated 8 ಜುಲೈ 2024, 16:16 IST
ಕವಿಗೋಷ್ಠಿಯಲ್ಲಿ ಹಲವು ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು
ಕವಿಗೋಷ್ಠಿಯಲ್ಲಿ ಹಲವು ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು   

ವಾಡಿ: ‘ಪ್ರಸ್ತುತ ಸಮಯದಲ್ಲಿ ನಮ್ಮ ಕೆಲ ರಾಜಕಾರಣಿಗಳು ತಮ್ಮ ರಾಜಕೀಯ ಭವಿಷ್ಯಕ್ಕೆ ಜಾತಿ, ಧರ್ಮಗಳನ್ನೇ ಪ್ರಮುಖ ಅಸ್ತ್ರಗಳಾಗಿ ಮಾಡಿಕೊಂಡಿದ್ದಾರೆ. ಆ ಮೂಲಕ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡುತ್ತಿದ್ದಾರೆ’ ಎಂದು ಹೋರಾಟಗಾರ ನಾಗೇಂದ್ರ ಕೆ. ಜವಳಿ ವಿಷಾದ ವ್ಯಕ್ತಪಡಿಸಿದರು.

ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ‘ದ್ವೇಷದ ಮನಸುಗಳ ನಡುವೆ ಪ್ರೀತಿಯ ರಾಜಕಾರಣ’ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಅಸಹ್ಯ ರಾಜಕಾರಣ ಸಾಮಾಜಿಕ ಸುಂದರ ಬದುಕಿಗೆ ಕೊಳ್ಳಿ ಇಟ್ಟಿದೆ. ಪಾರ್ಲಿಮೆಂಟ್ ವಿಧಾನಸಭೆಗಳಲ್ಲಿ ಜನರ ಸಮಸ್ಯೆಗಳಿಗಿಂತ ವೈಯುಕ್ತಿಕ ವಿಷಯಗಳೇ ಮುನ್ನೆಲೆಗೆ ತಂದು ಚರ್ಚೆ ಮಾಡುತ್ತಿರುವುದು ನಾಡಿನ ದುರಂತ. ದ್ವೇಷದ ರಾಜಕಾರಣ ಮಧ್ಯೆ ಪ್ರೀತಿಯ ರಾಜಕಾರಣ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಅವಶ್ಯಕವಾಗಿದೆ’ ಎಂದರು.

ADVERTISEMENT

‘ನೂತನ ಕಾನೂನುಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಂಟಕವಾಗಿದ್ದು, ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿ ಜನಸಾಮಾನ್ಯರ ಹೋರಾಟಗಳ ಮೇಲೆ ಸವಾರಿ ಮಾಡಲಿವೆ’ ಎಂದರು.

ಉಪನ್ಯಾಸಕ ಕೈಲಾಶ್ ಡೋಣಿ ಮಾತನಾಡಿ, ‘ಅಂಧವಾಗಿ ಯಾರನ್ನೂ ನಂಬದೇ ಯೋಚಿಸಿ, ಪ್ರಶ್ನಿಸಿ ನಂಬುವ ಮನಸ್ಥಿತಿ ನಮ್ಮದಾಗಬೇಕು’ ಎಂದು ಸಲಹೆ ನೀಡಿದರು.

‘ದೇಶ ರಾಜಕಾರಣದ ಮೇಲೆ ಆರ್‌ಎಸ್‌ಎಸ್‌ ತನ್ನ ಬಿಗಿಹಿಡಿತ ಸಾಧಿಸಿದ್ದು ಅದರಿಂದ ಹೊರಬರಬೇಕಾಗಿದೆ’ ಎಂದರು.

ಸಂಚಲನ ವೇದಿಕೆ ಸದಸ್ಯ ಹರಿಶ್ಚಂದ್ರ ಕರಣಿಕ ಅಧ್ಯಕ್ಷತೆ ವಹಿಸಿದ್ದರು. ರಮಾಬಾಯಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ನಾಗಮ್ಮ ಧನ್ನೇಕರ, ಸಂಚಲನ ವೇದಿಕೆ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ, ಕಾರ್ಯದರ್ಶಿ ದಯಾನಂದ ಖಜೂರಿ, ವಿಕ್ರಮ ನಿಂಬರ್ಗಾ, ಶ್ರೀಶರಣ ಹೊಸಮನಿ, ಖೇಮಲಿಂಗ ಬೆಳಮಗಿ, ಗುರುಪ್ರಸಾದ ಯಾದಗಿರಿ, ಪ್ರಿಯಾಂಕಾ ಮಾವಿನಕರ, ದೇವಿಂದ್ರ ಕರದಳ್ಳಿ, ಮಲ್ಲೇಶಿ ನಾಟೇಕರ, ವೀರಣ್ಣ ಯಾರಿ, ಕೃಷ್ಣ ರಾವೂರ, ಜಗನ್ನಾಥ ಹಂದರಕಿ, ಧರಣಪ್ಪ ಮಂಗಳೂರು, ರವಿಕುಮಾರ ಮುತ್ತಿಗಿ, ರವಿ ಕೋಳಕೂರ ಕವನ ವಾಚಿಸಿದರು.

ಈ ವೇಳೆ ರಘುವೀರ ಪವಾರ, ಭೀಮರಾಯ ಗಂಗನೋರ, ಸುಶೀಲಾಬಾಯಿ ಮೊಸಲಗಿ, ಸುಜಾತಾ, ಮಧು ಹಿಂದಿನಕೇರಿ, ಆನಂದ ನಿಂಬರ್ಗಾ, ಛಾಯಾ ಕೊಂಚೂರು ಇದ್ದರು.

ಶೋಭಾ ನಿಂಬರ್ಗಾ ನೇತೃತ್ವದ ಜನಕಲಾ ಸಮಿತಿ ವತಿಯಿಂದ ಸಾಂಸ್ಕೃತಿಕ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

ವಾಡಿ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಜರುಗಿದ ಕವಿಗೋಷ್ಠಿ ಕಾರ್ಯಕ್ರಮವನ್ನು ಹೋರಾಟಗಾರ ನಾಗೇಂದ್ರ ಕೆ.ಜವಳಿ ಉದ್ಘಾಟಿಸಿದರು. ಉಪನ್ಯಾಸಕ ಕೈಲಾಶ್ ಡೋಣಿ ಹಾಗೂ ಇನ್ನಿತರರು ಇದ್ದರು

‘ಪ್ರತಿಕಾರದ ಗೆದ್ದಲು’

ದಯಾನಂದ ಖಜೂರಿ ವಾಚಿಸಿದ ‘ಸಹಬಾಳ್ವೆಯ ಪ್ರತೀಕದ ಮನಸ್ಸುಗಳು ಕಟ್ಟಿದ ಸಮಾನತೆ ಸೌಧದಲ್ಲಿ ಪ್ರತಿಕಾರದ ಗೆದ್ದಲುಗಳ ಸದ್ದೇ ಜೋರಾಗಿದೆ’ ಎಂಬ ಕವನ ಬುದ್ಧನ ನಾಡಿನಲ್ಲಿ ಅಸಮಾನತೆ ಸಲ್ಲದು ಎಂಬ ಸಂದೇಶ ಸಾರಿತು. ಕಾಶಿನಾಥ ಹಿಂದಿನಕೇರಿ ವಾಚಿಸಿದ ‘ಅವರು ರಕ್ತಯಾತ್ರೆ ಆರಂಭಿಸಿದಾಗಲೇ ನನಗೆ ಆತಂಕವಾಗಿತ್ತು. ಎಂಟರಲ್ಲೇ ಇದ್ದ ರಕ್ತದ ಗುಂಪುಗಳೀಗ ನೂರೆಂಟು ಆದವು’ ಕವನ ರಥಯಾತ್ರೆ ಆರಂಭ ಮತ್ತು ನಂತರದ ಘಟನಾವಳಿಗಳ ವಿಶ್ಲೇಷಣೆ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.