ADVERTISEMENT

ಕಲಬುರಗಿ | ಮರುಳು ಅಕ್ರಮ ದಂಧೆ: ಕಾನ್‌ಸ್ಟೆಬಲ್ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಮೇ 2024, 5:51 IST
Last Updated 21 ಮೇ 2024, 5:51 IST

ಕಲಬುರಗಿ: ಮರಳು ಅಕ್ರಮ ದಂಧೆಯಲ್ಲಿ ತೊಡಗಿರುವವರ ಜೊತೆಗೆ ವ್ಯವಹಾರ ಇರಿಸಿಕೊಂಡ ಆರೋಪದಡಿ ದೇವಲ ಗಾಣಗಾಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಪ್ರದೀಪ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಆದೇಶ ಹೊರಡಿಸಿದ್ದಾರೆ.

ಪ್ರದೀಪ್ ಅವರ ವಿರುದ್ಧ ನರಹರಿ ಪವೇದ, ಎಂ.ವಿಜಯ, ಎಂ.ಯಲ್ಲಪ್ಪ, ಸುರೇಶ್, ದಿಗಂಬರ ಕಾಡಪ್ಪಗೋಳ ಮತ್ತು ದಿಗಂಬರ ಡಾಂಗೆ ಸಲ್ಲಿಸಿದ ದೂರಿನ ಅರ್ಜಿಯ ವಿಚಾರಣೆ ನಡೆಸಲಾಗಿದೆ. ರವಿ ಆಲೂರ ಅವರ ಫೋನ್‌ ಪೇ ಮೂಲಕ ಪ್ರದೀಪ್‌ ಖಾತೆಗೆ ಹಣ ವರ್ಗಾವಣೆಯಾಗಿದೆ. ಪ್ರದೀಪ್ ಅವರು ರವಿ ಆಲೂರ ಜತೆಗೆ ಮರಳು ಅಕ್ರಮ ಸಾಗಾಣಿಕೆ ಸಂಬಂಧ ಮಾತನಾಡಿರುವುದು ಆಡಿಯೊ ತುಣುಕಿನಲ್ಲಿ ಕಂಡು ಬಂದಿದೆ ಎಂದು ಅಮಾನತು ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಠಾಣಾ ವ್ಯಾಪ್ತಿಯನ್ನು ಹೊರತುಪಡಿಸಿ ಇತರೆ ವಿಷಯಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಪ್ರದೀಪ್ ತೊಡಗಿಸಿಕೊಂಡಿದ್ದರು. ಗ್ರಾಮದ ಕೆಲವು ಜನರಿಗೆ ಅನವಶ್ಯಕವಾಗಿ ತೊಂದರೆ ಉಂಟು ಮಾಡಿ, ಮರಳು ಅಕ್ರಮ ಸಾಗಾಣಿಕೆ ವ್ಯವಹಾರದಲ್ಲಿ ತೊಡಗಿರುವವರ ಜೊತೆಗೆ ಸಂಪರ್ಕ ಇರಿಸಿಕೊಂಡಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ, ಪ್ರದೀಪ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಮದ್ಯ ಅಕ್ರಮ ಮಾರಾಟ: ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿದ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬ್ರಹ್ಮಪುರ ಠಾಣೆಯ ಪೊಲೀಸರು ಭರತ್ ನಗರ ತಾಂಡಾದ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ ಮಾಡಿದರು. ಕಳ್ಳಬಟ್ಟಿ ಮಾರಾಟ ಸಂಬಂಧ ಬಲ್ಲಿ ಚವ್ಹಾಣ್, ಗೊರಿಬಾಯಿ ಚವ್ಹಾಣ್ ಮತ್ತು ಶಾಂತಾಬಾಯಿ ಚವ್ಹಾಣ್ ಅವರನ್ನು ಬಂಧಿಸಿದ್ದಾರೆ.

ರಾಘವೇಂದ್ರನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ವಿಶಾಲ್ ವಿಜಯಕುಮಾರ್, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪ್ರದೇಶದಲ್ಲಿ ಶಿವಲು ಷಣ್ಮುಖ ಹಾಗೂ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದಾಸ್ ಶಂಕರ್ ಮತ್ತು ಸತಾರಾಂ ಚವ್ಹಾಣ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.