ಅಫಜಲಪುರ: ತಾಲ್ಲೂಕಿನ ಮದರಾ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಗೌಡಪ್ಪಗೌಡ ಬಿರಾದಾರ (50) ಕೊಲೆ ಪ್ರಕರಣ ಮಾಸುವ ಮುನ್ನವೇ ಸಾಗನೂರು ಗ್ರಾಮದ ಬಿಜೆಪಿ ಮುಖಂಡ, ಸಂಸದ ಡಾ.ಉಮೇಶ್ ಜಾಧವ್ ಅವರ ಆಪ್ತ ಗಿರೀಶಬಾಬು ಚಕ್ರ (31) ಎಂಬುವವರನ್ನು ಸಹಚರರೇ ಗುರುವಾರ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಇದರಿಂದಾಗಿ ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ. ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಗಿರೀಶ ಚಕ್ರ ಅವರನ್ನು ಕಳೆದ ವಾರವಷ್ಟೇ ಸಂಸದ ಡಾ.ಉಮೇಶ್ ಜಾಧವ್ ಅವರ ಶಿಫಾರಸಿನ ಮೇರೆಗೆ ದೂರ ಸಂಪರ್ಕ ಸಲಹಾ ಸದಸ್ಯರಾಗಿ ನೇಮಕ ಮಾಡಲಾಗಿತ್ತು.
ಅದೇ ಖುಷಿಯಲ್ಲಿದ್ದ ಗಿರೀಶ ಅವರನ್ನು ಸಚಿನ್ ಶರಣಪ್ಪ ಕಿರಸಾವಳಗಿ ಹಾಗೂ ಮೂರು ಜನ ಸಹಚರರು ಸಾಗನೂರ ಗ್ರಾಮದಲ್ಲಿ ಗುರುವಾರ ರಾತ್ರಿ ಕಿರಾಣಿ ಅಂಗಡಿಯ ಎದುರು ಹೂವಿನ ಹಾರ, ಶಾಲು ಹಾಕಿ ಸನ್ಮಾನಿಸಿ ಅಭಿನಂದಿಸಿದ್ದರು. ಸನ್ಮಾನದ ಬಳಿಕ ಪಾರ್ಟಿ ಮಾಡೋಣ ನಡಿ ಎಂದು ಸಂತೋಷ ಗಡಗಿ ಎನ್ನುವವರ ಹೊಲಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಇನ್ನಷ್ಟು ಬಿಯರ್ ಕುಡಿಯಬೇಕಿದ್ದು, ಸ್ನ್ಯಾಕ್ಸ್ ತರಿಸುವಂತೆ ಗಿರೀಶಬಾಬುಗೆ ಹೇಳಿದಾಗ ತನ್ನ ಜತೆಗಿದ್ದ ಅಳಿಯನಿಗೆ ಕಾರು ಕೊಟ್ಟು ಸಾಗನೂರಿಗೆ ಕಳಿಸಿದ್ದಾರೆ.
ಇದೇ ಸಮಯ ಕಾಯುತ್ತಿದ್ದ ಸಚಿನ್ ಹಾಗೂ ಸಹಚರರು ಗಿರೀಶ ಕಣ್ಣಿಗೆ ಖಾರ ಎರಚಿ ಕಲ್ಲು ಹಾಗೂ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಗಿರೀಶ ಅವರ ಅಣ್ಣ ಮಲ್ಲಣ್ಣ ಚಕ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
‘ಕೊಲೆ ಮಾಡಿರುವ ದೃಶ್ಯವನ್ನು ಕಾರಿನ ಬೆಳಕಿನಲ್ಲಿ ನೋಡಿದ್ದೇನೆ’ ಎಂದು ಮೃತ ಗಿರೀಶಬಾಬು ಅಳಿಯ ಮಾಹಿತಿ ನೀಡಿದ್ದಾನೆ.
ಗೆಳೆಯ ಎನ್ನುತ್ತಲೇ ಕೊಲೆ: ಗಿರೀಶಬಾಬು ಜತೆ ಗೆಳೆತನ ಇಟ್ಟುಕೊಡಿದ್ದ ಸಚಿನ್ ಕಿರಸಾವಳಗಿ ಎರಡು ವರ್ಷಗಳ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಬಿಡುಗಡೆಯಾಗಿ ಬಂದವನೇ ಗೆಳೆಯ ಎನ್ನುತ್ತ ಗಿರೀಶನನ್ನು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಪಾರ್ಟಿಗೆ ಕರೆದುಕೊಂಡು ಹೋಗಿ ಕೊಲೆಗೈದಿದ್ದಾನೆ.
ಗಿರೀಶಬಾಬು ಅಣ್ಣ ಮಲ್ಲಣ್ಣ ದೇವಲಗಾಣಗಾಪೂರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್‌ಐ ಪರಶುರಾಮ ಜಿ.ಸಿ. ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಸೇರಿದಂತೆ ಉನ್ನತ ಅಧಿಕಾರಿಗಳ ತಂಡ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಿದೆ.
ಗಿರೀಶಬಾಬು ಕೊಲೆಯಿಂದ ಸಾಗನೂರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಗಿರೀಶಬಾಬು ಚಕ್ರ ಅವರನ್ನು ಪಾರ್ಟಿಗೆ ಕರೆದಿದ್ದ ಕಿರಣ್ ಶರಣಪ್ಪ ಕಿರಸಾವಳಗಿ ಮೂಲತಃ ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದವನು. ಎರಡು ವರ್ಷಗಳ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ತನ್ನ ಸಂಬಂಧಿಕರ ಮನೆಯಿರುವ ಸಾಗನೂರು ಗ್ರಾಮದಲ್ಲಿ ನೆಲೆಸಿದ್ದ. ಕಿರಣ್‌ನೊಂದಿಗೆ ಓಡಾಡದಂತೆ ಗಿರೀಶ ಚಕ್ರಗೆ ಅಣ್ಣ ಮಲ್ಲಣ್ಣ ತಾಕೀತು ಮಾಡಿದ್ದರು. ಆದರೂ ಪಾರ್ಟಿ ನೆಪದಲ್ಲಿ ಕರೆದಾಗ ಗಿರೀಶ ವಿಧಿಯಿಲ್ಲದೇ ಹೋಗಿದ್ದ. ಕೊಲೆ ಮಾಡುವ ಉದ್ದೇಶದಿಂದಲೇ ಹೊಲಕ್ಕೆ ಕರೆದು ಮಚ್ಚು ಹಾಗೂ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಮಲ್ಲಣ್ಣ ಚಕ್ರ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.