ADVERTISEMENT

ಚಿತ್ತಾಪುರ: ಹದಗೆಟ್ಟ ರಸ್ತೆಗಳಿಗೆ ಹಿಡಿ ಮಣ್ಣು ಹಾಕುವವರಿಲ್ಲ!

ಸಾರಿಗೆ, ಜನ ಸಂಚಾರ ಸಮಸ್ಯೆ; ಪರಿಹಾರ ಮರೆತ ಅಧಿಕಾರಿಗಳು

ಮಲ್ಲಿಕಾರ್ಜುನ ಎಚ್.ಎಂ
Published 25 ಅಕ್ಟೋಬರ್ 2024, 6:51 IST
Last Updated 25 ಅಕ್ಟೋಬರ್ 2024, 6:51 IST
ಚಿತ್ತಾಪುರದಿಂದ ತೆಂಗಳಿ ಕ್ರಾಸ್ ಮಾರ್ಗದ ರಾಜ್ಯ ಹೆದ್ದಾರಿ–126 ರಸ್ತೆಯು ಚಿತ್ತಾಪುರ–ಕಾಳಗಿ ತಾಲ್ಲೂಕು ಗಡಿ ಸಮೀಪ ಕೆಸರು ಗದ್ದೆಯಂತೆ ಆಗಿರುವುದು
ಚಿತ್ತಾಪುರದಿಂದ ತೆಂಗಳಿ ಕ್ರಾಸ್ ಮಾರ್ಗದ ರಾಜ್ಯ ಹೆದ್ದಾರಿ–126 ರಸ್ತೆಯು ಚಿತ್ತಾಪುರ–ಕಾಳಗಿ ತಾಲ್ಲೂಕು ಗಡಿ ಸಮೀಪ ಕೆಸರು ಗದ್ದೆಯಂತೆ ಆಗಿರುವುದು   

ಚಿತ್ತಾಪುರ: ತಾಲ್ಲೂಕು ವ್ಯಾಪ್ತಿಯ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ, ಪಿಎಂಜಿಎಸ್‌ವೈ ಮತ್ತು ಗ್ರಾಮೀಣ ರಸ್ತೆಗಳ ನಿರ್ವಹಣೆ ಸಕಾಲಕ್ಕೆ ಆಗುತ್ತಿಲ್ಲ. ಇದರಿಂದ ಬಹಳಷ್ಟು ರಸ್ತೆಗಳು ಹದಗೆಟ್ಟಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದು, ಸಂಚಾರಕ್ಕೆ ವಿಪರೀತ ತೊಂದರೆಯಾಗುತ್ತಿದೆ. ಗುಂಡಿಗಳಿಗೆ ಹಿಡಿ ಮಣ್ಣು ಹಾಕುವವರು ಇಲ್ಲವೇ ಎನ್ನುವ ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ತಾಲ್ಲೂಕಿನ ನಾಲವಾರ ರೈಲ್ವೆ ಸ್ಟೇಷನ್‌ನಿಂದ ಧಾರ್ಮಿಕ ಕ್ಷೇತ್ರ ಕೋರಿಸಿದ್ಧೇಶ್ವರ ಸಂಸ್ಥಾನ ಮಠವಿರುವ ನಾಲವಾರ, ಐತಿಹಾಸಿಕ ತಾಣಗಳಾದ ಕನಗನಹಳ್ಳಿಯ ಪುರಾತನ ಬೌದ್ಧನೆಲೆ, ಸನ್ನತಿಯ ಚಂದ್ರಲಾಪರಮೇಶ್ವರಿ ದೇವಸ್ಥಾನ ಹಾಗೂ ಶಹಾಪುರ, ಜೇವರ್ಗಿ ತಾಲ್ಲೂಕಿಗೆ ಸಂಪರ್ಕಿಸುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದು, ಪ್ರಯಾಣಿಕರು, ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಚೆಗೆ ಮಣ್ಣು ಹಾಕಿ ಮುಚ್ಚಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗುತ್ತಿಲ್ಲ.

ತಾಲ್ಲೂಕಿನ ಭೀಮನಹಳ್ಳಿಯ ಬಾರಿಗಿಡ ಕ್ರಾಸ್‌ನಿಂದ ತಾಲ್ಲೂಕಿಗೆ ಪ್ರವೇಶಿಸುವ ಪುಟಪಾಕ್–ಭೋಸಗಾ ರಾಜ್ಯ ಹೆದ್ದಾರಿ–126 ಸಮರ್ಪಕ ನಿರ್ವಹಣೆ ಕಾಣದೆ ಹದಗೆಟ್ಟಿದೆ. ಸೇಡಂ ತಾಲ್ಲೂಕಿನ ಶ್ರೀ ಸಿಮೆಂಟ್ ಕಂಪನಿಗೆ ಸೂಲಹಳ್ಳಿಯಿಂದ ಕಲ್ಲಿದ್ದಿಲು ಹಾಗೂ ಕಂಪನಿಯಿಂದ ಸೂಲಹಳ್ಳಿಗೆ ಸಿಮೆಂಟ್ ಉತ್ಪಾದಿಸುವ ಕ್ಲಿಂಕರ್ ತುಂಬಿದ ಭಾರಿ ಗಾತ್ರದ, ಅಧಿಕ ಭಾರದ ಟ್ರಕ್‌ಗಳ ಸಂಚರಿಸುವುದರಿಂದ ರಸ್ತೆ ಹಾಳಾಗಿದೆ. ದುರಸ್ತಿ ಕೆಲಸ ಮಾಡುತ್ತಿಲ್ಲ ಎಂಬುದು ಸ್ಥಳೀಯರ ಬೇಸರ.

ADVERTISEMENT

ನೆರೆಯ ಕಾಳಗಿ, ಕಮಲಾಪುರ, ಚಿಂಚೋಳಿ ತಾಲ್ಲೂಕು ಕೇಂದ್ರಗಳಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳಾದ ಕೋರವಾರದ ಅಣಿವೀರಭದ್ರೇಶ್ವರ ದೇವಸ್ಥಾನ, ರೇವಗ್ಗಿಯ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿ–126 ರಸ್ತೆಯು ತಾಲ್ಲೂಕಿನ ಗಡಿ ಭಾಗದಲ್ಲಿನ ತೊನಸನಹಳ್ಳಿ ಸಮೀಪ ಕೆಸರು ಗದ್ದೆಯಂತೆ ಆಗಿದೆ. ಇದು ರಾಜ್ಯ ಹೆದ್ದಾರಿಯೇ ಎಂದು ವಾಹನ ಚಾಲಕರು, ಪ್ರಯಾಣಿಕರು ಕೇಳುತ್ತಾರೆ. ಬೈಕ್ ಸವಾರರು ನಿತ್ಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತಾ ಕೆಸರಿನಲ್ಲಿಯೇ ಸಂಚರಿಸುತ್ತಿದ್ದಾರೆ.

ಶಹಾಬಾದ್‌ದಿಂದ ತಾಲ್ಲೂಕಿನ ಕದ್ದರಗಿ ಮಾರ್ಗವಾಗಿ ತಾಲ್ಲೂಕಿಗೆ ಪ್ರವೇಶಿಸುವ ರಾಜ್ಯ ಹೆದ್ದಾರಿ–125 ರಸ್ತೆಯು ಒಂದೂವರೆ ದಶಕ ಕಳೆದರೂ ಇಂದಿಗೂ ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿ ಕಾಣದೆ ಗ್ರಾಮೀಣ ರಸ್ತೆಯಾಗಿಯೇ ಉಳಿದಿದೆ. ಕದ್ದರಗಿ ಗ್ರಾಮದಿಂದ ಭಾಗೋಡಿ, ಇವಣಿ–ಬೆಳಗುಂಪಾ ಕ್ರಾಸ್, ಗುಂಡಗುರ್ತಿ ಗ್ರಾಮದವರೆಗೆ ಇಡೀ ರಸ್ತೆ ಹದಗೆಟ್ಟಿದೆ. ಕೆಲವು ಕಡೆಗೆ ಡಾಂಬರ್ ರಸ್ತೆ ಕಿತ್ತುಹೋಗಿದ್ದು ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ. ಹೆದ್ದಾರಿಗೆ ಸಂಪರ್ಕಿಸುವ ಚಿತ್ತಾಪುರ–ಭಾಗೋಡಿ ರಸ್ತೆ, ಮುಡಬೂಳ–ಭಾಗೋಡಿ ರಸ್ತೆ, ದಂಡೋತಿ–ನಂದೂರ ರಸ್ತೆಗಳು ಸಂಪೂರ್ಣ ಹದಗೆಟ್ಟು ಹಾಳಾಗಿವೆ. ಸಾಲುಸಾಲು ಗುಂಡಿಗಳು ಕಂಡುಬರುತ್ತವೆ.

ಸಕಾಲಕ್ಕೆ ದುರಸ್ತಿ ಭಾಗ್ಯ ಕಾಣದೆ ತಾಲ್ಲೂಕಿನ ಬಹುತೇಕ ಗ್ರಾಮೀಣ ರಸ್ತೆಗಳು ಹದಗೆಟ್ಟು ಹಾಳಾಗುತ್ತಿವೆ. ಸಂಬಂಧಿತ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ, ಪಂಚಾಯತ್‌ ರಾಜ್, ಪಿಎಂಜಿಎಸ್‌ವೈ ಇಲಾಖೆಯ ಅಧಿಕಾರಿಗಳು ಹದಗೆಟ್ಟ ರಸ್ತೆಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಕೈಕಟ್ಟಿ ಕುಳಿತಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದು.

ನಾಲವಾರ ಕುಂಬಾರಹಳ್ಳಿ ಸೇರಿದಂತೆ ಬಹುತೇಕ ರಸ್ತೆಗಳು ದುರಸ್ತಿಗೆ ಬಂದಿವೆ. ಸುಬ್ಬುನಾಯಕ ತಾಂಡಾದಲ್ಲಿ ಸಿಸಿ ರೋಡ್ ಮಂಜೂರಾಗಿದ್ದು ಜಲ್ಲಿ ಕಲ್ಲು ಹಾಕಿ ಹಾಗೆಯೇ ಬಿಡಲಾಗಿದೆ. ಹದಗೆಟ್ಟ ರಸ್ತೆಗಳನ್ನು ತ್ವರಿತವಾಗಿ ದುರಸ್ತಿ ಮಾಡಬೇಕು.
–ಮೌನೇಶ ಕಂಬಾರ, ಕುಂಬಾರಹಳ್ಳಿ ಗ್ರಾಮಸ್ಥ
ಲೋಕೋಪಯೋಗಿ ಇಲಾಖೆ ಅಧೀನದ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿ ಸೇರಿದಂತೆ ಹದಗೆಟ್ಟಿರುವ ಎಲ್ಲ ರಸ್ತೆಗಳ ದುರಸ್ತಿ ಕೆಲಸವನ್ನು ಒಂದು ವಾರದಲ್ಲಿ ಪ್ರಾರಂಭಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
–ಮಹಮದ್ ಸಲೀಂ, ಲೋಕೋಪಯೋಗಿ ಇಲಾಖೆಯ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.