ADVERTISEMENT

ಬಿಸಿ ಊಟಕ್ಕೆ ಕಳಪೆ ಆಹಾರ ಧಾನ್ಯ ಪೂರೈಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 16:13 IST
Last Updated 17 ಜನವರಿ 2024, 16:13 IST
ಸರ್ಕಾರ ಮಧ್ಯಾಹ್ನ ಬಿಸಿ ಊಟಕ್ಕಾಗಿ ಅಫಜಲಪುರ ತಾಲ್ಲೂಕಿನ  ಶಾಲೆಗಳಿಗೆ ನೀಡುತ್ತಿರುವ ಕಳಪೆ ಮಟ್ಟದ ತೊಗರಿ ಬೇಳೆ
ಸರ್ಕಾರ ಮಧ್ಯಾಹ್ನ ಬಿಸಿ ಊಟಕ್ಕಾಗಿ ಅಫಜಲಪುರ ತಾಲ್ಲೂಕಿನ  ಶಾಲೆಗಳಿಗೆ ನೀಡುತ್ತಿರುವ ಕಳಪೆ ಮಟ್ಟದ ತೊಗರಿ ಬೇಳೆ   

ಅಫಜಲಪುರ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಜಿಲ್ಲಾಮಟ್ಟದ ಆಹಾರ ಧಾನ್ಯ ಏಜೆನ್ಸಿಗಳು ಕಳಪೆ ಮಟ್ಟದ ತೊಗರಿ ಬೇಳೆ ಮತ್ತು ಅಕ್ಕಿಯನ್ನು ಪೂರೈಕೆ ಮಾಡುತ್ತಿವೆ. ಅದರಲ್ಲಿ ತೊಗರಿ ಬೇಳೆ ತೀರ ಕಳಪೆಯಾಗಿದ್ದು ಇದರ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಬೇಕು ಎಂದು ಜೈ ಕರವೇ ಸಂಘಟನೆ ಪದಾಧಿಕಾರಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

‘ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರ ಧಾನ್ಯ ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ತೊಗರಿಬೇಳೆ, ಸಂಸ್ಕರಿತ ತಾಳೆಎಣ್ಣೆ ಮತ್ತು ಕಡಲೆ ಬೇಳೆಗಳನ್ನೊಳಗೊಂಡ ಆಹಾರವನ್ನು ನಿರ್ಧರಿಸಿದೆ. ಸಾಮಾನ್ಯ ಅಕ್ಕಿ ಮತ್ತು ಕಡಲೇಬೇಳೆಗಳ ಗುಣಮಟ್ಟವನ್ನು ಅಳೆಯಲು ಎನ್‍ಸಿಎಂಎಲ್, ಹೈದರಾಬಾದ್ ಕಂಪನಿಯವರನ್ನು  ಮೂರನೇ ವ್ಯಕ್ತಿಯನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಏಜೆನ್ಸಿ ಅವರು ಶಾಲೆಗಳಿಗೆ ಕಳಪೆ ಮಟ್ಟದ ತೊಗರಿ ಬೆಳೆ ಪೂರೈಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಮತ್ತು ಶಾಲೆಗಳಿಗೆ ಗುಣಮಟ್ಟದ ಬೇಳೆಯನ್ನು ಪೂರೈಕೆ ಮಾಡಬೇಕು’ ಎಂದು ಜೈ ಕರವೇ ತಾಲ್ಲೂಕು ಅಧ್ಯಕ್ಷ ಸುರೇಶ ಅವಟೆ ಒತ್ತಾಯಿಸಿದ್ದಾರೆ.

ಕಳಪೆ ಮಟ್ಟದ ತೊಗರಿ ಬೇಳೆ ಶಾಲೆಗಳಿಗೆ ಪೂರೈಕೆ ಆಗದಿದ್ದರೂ ಒಂದು ದಿನವೂ ಶಾಲೆಯ ಮುಖ್ಯ ಶಿಕ್ಷಕರು ಅಡುಗೆಯವರು ದೂರು ನೀಡಬೇಕಾಗಿತ್ತು ಆದರೆ ಅವರು ಮೌನವಾಗಿದ್ದಾರೆ ಏಕೆ ಗೊತ್ತಾಗುತ್ತಿಲ್ಲ ಎಂದು ಅವರು ತಿಳಿಸಿದರು.

ADVERTISEMENT

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪೂರೈಕೆ ಆಗುತ್ತಿರುವ ತೊಗರಿ ಬೇಳೆ ಹಾಗೂ ಅಕ್ಕಿ ಕುರಿತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ದೇವೇಂದ್ರ ಸಜ್ಜನ್ ಮಾಹಿತಿ ನೀಡಿ, ‘ಶಾಲೆಗಳಿಗೆ ತೊಗರಿ ಬೇಳೆ ಟೆಂಡರ್ ಪಡೆದಿರುವ ಕಲಬುರಗಿ ಜಿಲ್ಲೆಯ ಬಿಲ್ಬಿಟ್ಟು ದಾಲ್ ಇಂಡಸ್ಟ್ರೀಸ್ ಅವರು ಶಾಲೆಗಳಿಗೆ ತೊಗರಿ ಬೇಳೆ ಪೂರೈಕೆ ಮಾಡುತ್ತಾರೆ. ಆದರೆ ಕಳಪೆಯಾಗಿದೆ ಎಂದು ತಿಳಿದುಬಂದಿದೆ. ಏಜೆನ್ಸಿಗಳಿಗೆ ಟೆಂಡರ್‌ನಲ್ಲಿ ಪ್ರತಿ ಕೆಜಿಗೆ ₹ 10 ನೀಡಲು ಒಪ್ಪಂದವಾಗಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ತೊಗರಿ ಬೇಳೆಗೆ ₹15 ರಿಂದ ₹ 16 ರುಪಾಯಿ ಇದೆ ಹೀಗಾಗಿ ಏಜೆನ್ಸಿಗಳು ಮಟ್ಟದ ಕಳಪೆ ಮಟ್ಟದ ತೊಗರಿ ಬೇಳೆಯನ್ನು ಪೂರೈಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ಗುರುವಾರ ಶಾಲೆಗೆ ಭೇಟಿ ನೀಡಿ ಬೇಳೆಯನ್ನು ಪರಿಶೀಲನೆ ಮಾಡಿ ಏಜೆನ್ಸಿ ಅವರೊಂದಿಗೆ ಮಾತನಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.