ADVERTISEMENT

ಕಲಬುರ್ಗಿ: ರೈತರ ವಿಶ್ವಾಸ ಕಳೆದುಕೊಂಡಿತೇ ಫಸಲ್ ಬಿಮಾ?

ವರ್ಷದಿಂದ ವರ್ಷಕ್ಕೆ ವಿಮೆ ಸೌಲಭ್ಯ ಪಡೆಯುವ ರೈತರ ಸಂಖ್ಯೆಯಲ್ಲಿ ಇಳಿಕೆ

ಮನೋಜ ಕುಮಾರ್ ಗುದ್ದಿ
Published 15 ಸೆಪ್ಟೆಂಬರ್ 2020, 2:05 IST
Last Updated 15 ಸೆಪ್ಟೆಂಬರ್ 2020, 2:05 IST
ಗಂಗಾವತಿಯಲ್ಲಿ ಭತ್ತದ ಬೆಳೆಹಾನಿ (ಸಂಗ್ರಹ ಚಿತ್ರ)
ಗಂಗಾವತಿಯಲ್ಲಿ ಭತ್ತದ ಬೆಳೆಹಾನಿ (ಸಂಗ್ರಹ ಚಿತ್ರ)   

ಕಲಬುರ್ಗಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ ಬೆಳೆ ವಿಮೆ ಯೋಜನೆಯ ಫಲಾನುಭವಿ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆಕಡಿಮೆಯಾಗುತ್ತಿದೆ.

ಬೆಳೆ ವಿಮೆ ಕಂತನ್ನು ಪಾವತಿಸಿದರೂ ಬೆಳೆ ನಷ್ಟದ ಅಂದಾಜನ್ನು ಮಾಡುವಲ್ಲಿ ಇರುವ ತಾಂತ್ರಿಕ ತೊಂದರೆಗಳು, ವಿಮೆ ಪರಿಹಾರ ಪಡೆಯಲು ಸುತ್ತಾಡಬೇಕಾದ ಅನಿವಾರ್ಯತೆ. ಅಲ್ಲದೇ, 2016ರಿಂದ 2018ರವರೆಗೆ ಬೆಳೆ ವಿಮೆ ಕಂತಿಗಿಂತ ಪರಿಹಾರದ ಮೊತ್ತ ಕಡಿಮೆ ಬಂದಿರುವುದು ಸಹ ರೈತರು ಫಸಲ್ ಬಿಮಾ ಯೋಜನೆಯಿಂದ ವಿಮುಖವಾಗುತ್ತಿರಲು ಕಾರಣ ಎನ್ನಲಾಗುತ್ತದೆ.

ಜೊತೆಗೆ, ರೈತರಲ್ಲಿ ಬೆಳೆ ವಿಮೆ ಬಗೆಗಿನ ಜಾಗೃತಿ ಕೊರತೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ವಿಮಾ ಕಂಪನಿಗಳ ಮಧ್ಯದ ಸಮನ್ವಯದ ಕೊರತೆಯೂ ಸೂಕ್ತ ವಿಮಾ ಪರಿಹಾರ ಬಾರದಿರಲು ಮತ್ತೊಂದು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಬೀಜ, ಗೊಬ್ಬರ, ಕಳೆ ನಾಶಕ ಹೊಡೆಯಲೂ ಎಷ್ಟೋ ಬಾರಿ ರೈತರ ಬಳಿ ಹಣ ಇರುವುದಿಲ್ಲ. ಅದರ ಮಧ್ಯೆ, ಬೆಳೆ ನಷ್ಟವಾದರಷ್ಟೇ ಪರಿಹಾರ ಬರುವ ಅದೂ ಎಷ್ಟು ವಾಪಸ್ ಬರುತ್ತದೆ ಎಂಬ ಮಾಹಿತಿಯೇ ಇಲ್ಲದಿರುವುದರಿಂದ ವಿಮೆ ಯೋಜನೆಗೆ ಒಳ‍ಪಡಲು ಹಿಂಜರಿಯುತ್ತಿದ್ದಾರೆ.

ADVERTISEMENT

ರೈತರ ಜೀವನಕ್ಕೆ ಆಸರೆಯಾಗಿದ್ದ ಕಲಬುರ್ಗಿ–ಯಾದಗಿರಿ ಜಿಲ್ಲಾ ಡಿಸಿಸಿ ಬ್ಯಾಂಕ್‌ ನಷ್ಟದ ಸುಳಿಯಲ್ಲಿ ಸಿಲುಕಿರುವುದರಿಂದ ಕೆಲ ವರ್ಷಗಳಿಂದ ರೈತರಿಗೆ ಸಾಲ ನೀಡುತ್ತಿಲ್ಲ. ಸಾಲ ನೀಡುವ ಸಂದರ್ಭದಲ್ಲೆ ಬೆಳೆ ವಿಮೆ ಕಂತನ್ನು ಕಡಿತ ಮಾಡಿ ಉಳಿದ ಸಾಲದ ಮೊತ್ತವನ್ನು ಕೊಡುತ್ತಿದ್ದುದರಿಂದ ಈ ಯೋಜನೆಯಲ್ಲಿ ಭಾಗವಹಿಸುವವರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ, ಬೆಳೆ ವಿಮೆ ಪಡೆಯುವುದನ್ನು ಕಡ್ಡಾಯ ಮಾಡದೇ ಇರುವುದರಿಂದ ಬೆಳೆ ವಿಮೆಯಿಂದ ಹೊರಗುಳಿಯುವವರ ಸಂಖ್ಯೆಯೇ ಜಾಸ್ತಿಯಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಕಳೆದ ಎರಡು ವರ್ಷಗಳಿಂದ ಬರಗಾಲ ಅಷ್ಟಾಗಿ ಇಲ್ಲದೇ ಇರುವುದರಿಂದ ಬೆಳೆ ನಷ್ಟವಾಗಿಲ್ಲ. ಹೀಗಾಗಿ, ಬೆಳೆ ವಿಮೆಯೂ ರೈತರಿಗೆ ಬಂದಿಲ್ಲ. ವಿಮೆ ಪಾವತಿಸಿದ ಬಳಿಕ ಪರಿಹಾರದ ಹಣ ಬರಲೇಬೇಕು ಎಂದು ರೈತರು ನಿರೀಕ್ಷೆ
ಮಾಡುವುದು, ಬರದೇ ಇದ್ದಾಗ ವಿಮಾ ಕಂಪನಿಗಳನ್ನು ಆಕ್ಷೇಪಿಸುವುದು ನಡೆದೇ ಇದೆ. ಸಂಭವನೀಯ ನಷ್ಟವುಂಟಾದರೆ ಮಾತ್ರ ವಿಮೆ ಬರುತ್ತದೆ ಎಂಬ ಮಾತನ್ನು ರೈತರು ಕೇಳಲು ಸಿದ್ಧರಿಲ್ಲ. ಹೀಗಾಗಿ, ಕಂತು ಕಟ್ಟುವ ತಾಪತ್ರಯವೇ ಬೇಡವೆಂದು ಫಸಲ್ ಬಿಮಾ ಯೋಜನೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಅತಿವೃಷ್ಟಿ ಅಥವಾ ಅನಾವೃಷ್ಟಿಯಾದ ಸಂದರ್ಭದಲ್ಲಿ ವಿಮಾ ಕಂಪನಿಗಳು ಪರಿಹಾರ ಮೊತ್ತವನ್ನು ನೀಡಬೇಕು. ಆದರೆ, ಕೆಲವೆಡೆ ತಾಂತ್ರಿಕ ಕಾರಣಗಳ ನೆಪವೊಡ್ಡಿ ಪರಿಹಾರ ನೀಡುವುದರಿಂದ ಹಿಂದೆ ಸರಿಯುತ್ತಿರುವುದು. ಪ್ರಭಾವಿ ರೈತರಿಗೆ ಮಾತ್ರ ಪರಿಹಾರ ನೀಡುವ ಬೆಳವಣಿಗೆಗಳೂ ನಡೆದಿವೆ. ಇದನ್ನು ತಡೆಗಟ್ಟಲು ರೈತರ ಬಗ್ಗೆ ಈ ಯೋಜನೆಯ ಬಗ್ಗೆ ತಿಳಿವಳಿಕೆ ಮೂಡಿಸಿ ಹೆಚ್ಚು ಜನರು ವಿಮೆಯ ಪ್ರಯೋಜನ ಮಾಡುವಂತೆ ಮಾಡುವಲ್ಲಿ ಕೃಷಿ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎನ್ನುತ್ತಾರೆ ರೈತ ಸಂಘಟನೆಗಳ ಮುಖಂಡರು.

‘ಪ್ರಿಮಿಯಂ ₹ 221 ಕೋಟಿ, ಪರಿಹಾರ ₹ 26 ಕೋಟಿ’!

ನರೇಂದ್ರ ಮೋದಿ ಅವರ ಸರ್ಕಾರ 2016ರಲ್ಲಿ ಸರ್ಕಾರದ ಅಧೀನದಲ್ಲಿದ್ದ ವಿಮಾ ಕಂಪನಿಗಳ ಬದಲಾಗಿ ಖಾಸಗಿ ಕಂಪನಿಗಳಿಗೆ ಬೆಳೆ ವಿಮೆ ಕಂತನ್ನು ಪಡೆದುಕೊಳ್ಳಲು ಅವಕಾಶ ನೀಡಿದ ಬಳಿಕ ರೈತರ ವಿನಾಶ ಆರಂಭವಾಯಿತು. ಲಾಭಕೋರತನದ ಖಾಸಗಿ ವಿಮಾ ಕಂಪನಿಗಳು ಬೆಳೆ ನಷ್ಟವಾದರೂ ಏನೇನೊ ಕುಂಟು ನೆಪ ಹೇಳಿ ಪರಿಹಾರ ನೀಡಲು ಹಿಂಜರಿದವು. ಕಳೆದ ಐದು ವರ್ಷಗಳಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ರೈತರು ಮತ್ತು ಸರ್ಕಾರದ ಪಾಲುಸೇರಿ ₹ 221 ಕೋಟಿ ಪ್ರಿಮಿಯಂ ಸಂಗ್ರಹಿಸಿದೆ. ಪರಿಹಾರ ಮೊತ್ತ ₹ 26 ಕೋಟಿ ಮಾತ್ರ ಸಿಕ್ಕಿದೆ. ಮೋದಿ ಅವರು ಅಧಿಕಾರಕ್ಕೆ ಬರುವುದಕ್ಕೂ ಮುನ್ನ ರೈತರ ಪ್ರಿಮಿಯಂ ಹಣ ಸರ್ಕಾರಕ್ಕೆ ಹೋಗುತ್ತಿತ್ತು. ಇದೀಗ ಎಲ್ಲ ಖಾಸಗಿ ಕಂಪನಿಯ ಜೇಬು ತುಂಬುತ್ತಿದೆ. ಇದರಿಂದ ಸಹಜವಾಗಿಯೇ ರೈತರು ವಿಮಾ ಕಂಪನಿಗಳ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಮೊದಲಿನ ಪದ್ಧತಿಯಂತೆ ಖಾಸಗಿ ವಿಮಾ ಕಂಪನಿಗಳನ್ನು ಯೋಜನೆಯಿಂದ ಹೊರಗಿಟ್ಟು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳಿಗೆ ಇದರ ಉಸ್ತುವಾರಿ ವಹಿಸಬೇಕು.

– ಡಾ.ಶರಣಪ್ರಕಾಶ ಪಾಟೀಲ, ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ

‘ನಷ್ಟ ಎಂದು ಒಪ್ಪಿಕೊಂಡರೂ ಪರಿಹಾರ ಇಲ್ಲ’

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಬೆಳೆ ನಷ್ಟವಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದ್ದರೂ ಬೆಳೆ ವಿಮೆ ಪರಿಹಾರವನ್ನು ಮಾತ್ರ ₹ 10 ಕೋಟಿ ನೀಡಿತು. ಪಕ್ಕದ ಜಿಲ್ಲೆಗಳಾದ ಬೀದರ್, ವಿಜಯಪುರಗಳಿಗೆ ನೂರಾರು ಕೋಟಿ ಪರಿಹಾರ ಸಿಕ್ಕಿತು. ಇದು ವಿಮಾ ಕಂ‍ಪನಿಯಿಂದ ಆದ ಅನ್ಯಾಯ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಆದರೆ, ಮುಂದಿನ ಬಾರಿ ಸರಿಪಡಿಸುವುದಾಗಿ ಹೇಳಿದರು. ಹೀಗೆ ಆಗದಂತೆ ಎಚ್ಚರ ವಹಿಸಬೇಕು.

ಬೆಳೆ ವಿಮೆಯಲ್ಲಿ ಹೆಚ್ಚು ರೈತರು ಪಾಲ್ಗೊಳ್ಳದೇ ಇರುವ ಬಗ್ಗೆ ನಾನು ರೈತರನ್ನು ದೂಷಿಸಲಾರೆ. ಈ ಬಗ್ಗೆ ಸಮಗ್ರ ತಿಳಿವಳಿಕೆ ಮೂಡಿಸಬೇಕು. ಬೆಳೆ ವಿಮೆ ಕಂತು ಪಾವತಿ ಮಾಡಿದ್ದರೂ ಬೆಳೆ ನಷ್ಟವಾದರೆ ಮಾತ್ರ ಪರಿಹಾರ ಬರುತ್ತದೆ. ಇಲ್ಲದಿದ್ದರೆ ಇಲ್ಲ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಹಕಾರ ಸಂಘಗಳು, ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ರೈತರ ಕೈಯಲ್ಲಿ ಹಣ ಇದ್ದರೆ ಅವರು ಬೆಳೆ ವಿಮೆ ಕಂತು ಪಾವತಿಸಲು ಮುಂದೆ ಬರುತ್ತಾರೆ.

– ಸಿದ್ರಾಮಪ್ಪ ಪಾಟೀಲ ಧಂಗಾಪುರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ

‘ಮಾನದಂಡಗಳು ಅವೈಜ್ಞಾನಿಕ’

ಬೆಳೆ ನಷ್ಟದ ವರದಿಯನ್ನು ವಿಮಾ ಕಂಪನಿಗಳು 72 ಗಂಟೆಯೊಳಗಾಗಿ ನೀಡಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಇದು ಎಷ್ಟು ಸರಿ. ಜಿಲ್ಲೆಯಲ್ಲಿ 4 ಲಕ್ಷ ರೈತ ಕುಟುಂಬಗಳಿದ್ದು, ಎಲ್ಲರಿಗೂ ಇಷ್ಟು ಕಡಿಮೆ ಅವಧಿಯಲ್ಲಿ ಮಾಹಿತಿ ನೀಡಲು ಸಾಧ್ಯವೇ? ರೈತ ಸ್ನೇಹಿ ಯೋಜನೆಗಳನ್ನು ರೂಪಿಸಿ ಎಂದರೆ ಸರ್ಕಾರ ಹಾಗೂ ವಿಮಾ ಕಂಪನಿಗಳು ಇಂತಹ ಅವೈಜ್ಞಾನಿಕ ಮಾನದಂಡಗಳನ್ನು ರೂಪಿಸುತ್ತವೆ. ಇದರಿಂದಾಗಿ ಜನರು ವಿಮಾ ಯೋಜನೆಯ ಬಗ್ಗೆಯೇ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚು ಪಾರದರ್ಶಕವಾಗಿ ನಿರ್ವಹಣೆ ಮಾಡದ ಹೊರತು ರೈತರು ಫಸಲ್ ಬಿಮಾ ಅಡಿಯಲ್ಲಿ ಬರುವುದಿಲ್ಲ.

– ಮಾರುತಿ ಮಾನಪಡೆ, ರಾಜ್ಯ ಉಪಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ

‘ಗ್ರಾಮ ಮಟ್ಟದಲ್ಲಿ ಸರ್ವೆ ನಡೆಯಬೇಕು’

ಬೆಳೆ ಪರಿಹಾರ ವಿಮೆಯನ್ನು ನೀಡುವ ಸಂದರ್ಭದಲ್ಲಿ ನಷ್ಟದ ಅಂದಾಜನ್ನು ಮಾಡುವ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ. ಗ್ರಾಮ ಮಟ್ಟ, ಹೋಬಳಿ ಮಟ್ಟದಲ್ಲಿ ಬೆಳೆ ಸಮೀಕ್ಷೆಯನ್ನು ಮಾಡಬೇಕು. ಖಾಸಗಿ ಸ್ವಾಮ್ಯದ ವಿಮಾ ಕಂಪನಿಗಳಿಗೆ ಫಸಲ್ ಬಿಮಾ ಯೋಜನೆಯ ಹೊಣೆಯನ್ನು ವಹಿಸಿರುವುದು ತಪ್ಪು. ಆ ಮೂಲಕ ಸರ್ಕಾರ ರೈತರಿಂದ ಲೂಟಿ ಹೊಡೆಯಲು ಕಂಪನಿಗಳಿಗೆ ಅವಕಾಶ ಕೊಟ್ಟಿದೆ. ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ರೈತರ ಸಮ್ಮುಖದಲ್ಲಿ ಬೆಳೆ ನಷ್ಟದ ಅಂದಾಜನ್ನು ಪಾರದರ್ಶಕವಾಗಿ ಮಾಡಬೇಕು.

– ಎಚ್‌.ವಿ. ದಿವಾಕರ್, ರಾಜ್ಯ ಕಾರ್ಯದರ್ಶಿ, ರೈತ ಕೃಷಿ ಕಾರ್ಮಿಕರ ಸಂಘಟನೆ

‘ಸರ್ಕಾರವೇ ವಿಮಾ ಕಂತು ತುಂಬಲಿ’

ಕಿಸಾನ್ ಸಮ್ಮಾನ್ ಹಣ ರೈತರ ಖಾತೆಗೆ ಜಮಾ ಮಾಡುವ ಬದಲಿಗೆ ವಿಮಾ ಕಂಪನಿಗಳಿಗೆ ರೈತರ ಪರವಾಗಿ ಸರ್ಕಾರ ವಿಮೆಯ ಕಂತಿನ ರೂಪದಲ್ಲಿ ಭರಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.

– ಚಂದ್ರಶೇಖರ ಹರಸೂರ, ಪ್ರಗತಿಪರ ರೈತ, ನಾವದಗಿ ತಾ. ಕಾಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.