ಕಲಬುರಗಿ: ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡ (ಕಿಡ್ನಿ) ಮಹತ್ವದಾಗಿದೆ. ದೇಹದಲ್ಲಿ ರಕ್ತ ಶುದ್ಧೀಕರಣ, ತ್ಯಾಜ್ಯ ಉತ್ಪನ್ನಗಳನ್ನು ಮೂತ್ರದ ಮೂಲಕ ಹೊರಹಾಕುತ್ತದೆ. ಹಲವು ಹಾರ್ಮೋನ್‌ಗಳ ಉತ್ಪಾದನೆಗೆ ನೆರವಾಗಿ ದೇಹದ ಉಪ್ಪು ಮತ್ತು ನೀರಿನ ಮಟ್ಟವನ್ನು ನಿಯಂತ್ರಿಸುವ ಮೂಲಕ ರಕ್ತದ ಒತ್ತಡವನ್ನೂ ನಿರ್ವಹಿಸುತ್ತದೆ. ಹೀಗಾಗಿ, ಮೂತ್ರಪಿಂಡದ ಕಾರ್ಯಕ್ಷಮತೆ ಕುಸಿಯದಂತೆ ಕಾಪಾಡಲು ಕಡ್ಡಾಯವಾಗಿ ನಿತ್ಯ 4ರಿಂದ 5 ಲೀಟರ್ ನೀರು ಕುಡಿಯಬೇಕು. ಮಾಂಸಾಹಾರ ಸೇವನೆ ಮಿತವಾಗಿರಬೇಕು ಎಂದು ಚಿರಾಯು ಆಸ್ಪತ್ರೆಯ ಡಾ.ಆನಂದ ಶಂಕರ ಹಾಗೂ ಡಾ.ಪೂರ್ಣಿಮಾ ತಡಕಲ್ ಸಲಹೆ ನೀಡಿದರು.
‘ಪ್ರಜಾವಾಣಿ’ ಬುಧವಾರ ಹಮ್ಮಿಕೊಂಡಿದ್ದ ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ಅವರು ಮೂತ್ರಪಿಂಡ ಕಾಯಿಲೆಯ ಆರಂಭಿಕ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳು, ಚಿಕಿತ್ಸೆಯ ಮಾಹಿತಿ, ವಿಧಾನ ತಿಳಿಸಿದರು. ಮಾರ್ಗದರ್ಶನವನ್ನೂ ಮಾಡಿದರು.
‘ಮೂತ್ರಪಿಂಡದ ಕಾರ್ಯಕ್ಷಮತೆ ಕ್ಷೀಣಿಸಿದಾಗ ಅಥವಾ ಸ್ಥಗಿತಗೊಂಡಾಗ ದೇಹದ ಇತರ ಅಂಗಾಂಗಳ ಮೇಲೂ ಪರಿಣಾಮ ಉಂಟಾಗುತ್ತದೆ. ಇದು ಸೂಕ್ಷ್ಮವಾದ ಅಂಗವಾಗಿದ್ದು, ಆರೋಗ್ಯದ ದೃಷ್ಟಿಯಿಂದ ಅದರ ಆರೈಕೆಗೆ ಒತ್ತು ನೀಡುವುದು ಅಗತ್ಯವಿದೆ’ ಎಂದು ಹೇಳಿದರು.
‘ಕಲ್ಯಾಣ ಕರ್ನಾಟಕ ಭಾಗದ ಜನರು ಕಡಿಮೆ ನೀರು ಕುಡಿಯುತ್ತಾರೆ. ದೈಹಿಕ ಶ್ರಮವೂ ಹೆಚ್ಚಾಗಿದೆ. ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಶುಶ್ಕತೆ (ಡೀಹೈಡ್ರೇಶನ್) ಕಾಣಿಸುತ್ತದೆ. ಆಗ ಮೂತ್ರದಲ್ಲಿ ಖನಿಜಾಂಶಗಳು ಹೆಚ್ಚಾಗುತ್ತವೆ. ಸಹಜವಾಗಿ ಮೂತ್ರಕೋಶದಲ್ಲಿ ಕ್ಯಾಲ್ಸಿಯಂ ಕಲ್ಲುಗಳು, ಯೂರಿಕ್ ಆ್ಯಸಿಡ್ ಕಲ್ಲುಗಳಾಗುತ್ತವೆ. ಜತೆಗೆ ವಾತಾವರಣವೂ ಪರಿಣಾಮ ಬೀರುತ್ತದೆ’ ಎಂದರು ಡಾ.ಪೂರ್ಣಿಮಾ ತಡಕಲ್.
‘ಬಿಸಿಲಿನ ವಾತಾವರಣದ ಶುಶ್ಕತೆಯಿಂದಾಗಿ ಕ್ಯಾಲ್ಸಿಯಂ ಆಕ್ಸಲೇಟ್ ಆಗುತ್ತದೆ. ಆಗ ದೇಹದ ಮೂಳೆಯಿಂದ ಕ್ಯಾಲ್ಸಿಯಂ ಹೊರಬಂದು ಕ್ಯಾಲ್ಸಿಯಂ ಸ್ಟೋನ್ ಆಗಿ ರೂಪುಗೊಳ್ಳುತ್ತದೆ. ಇದೇ ಸಮಯದಲ್ಲಿ ಕೆಲವರು ಮೂಲಕೋಶದಲ್ಲಿ ಕಲ್ಲು ಇದ್ದವರು ಕ್ಯಾಲ್ಸಿಯಂ ಪದಾರ್ಥಗಳು ತಿನ್ನಬಾರದು ಎನ್ನುತ್ತಾರೆ. ಅದು ತಪ್ಪು. ಮೂಳೆಯಿಂದ ಕ್ಯಾಲ್ಸಿಯಂ ಹೊರ ಬರುವುದರಿಂದ ಮೂಳೆ ಮೆತ್ತಗಾಗುತ್ತದೆ. ಇಂತಹದನ್ನು ತಪ್ಪಿಸಲು ಹೆಚ್ಚು ಹೆಚ್ಚು ನೀರು ಕುಡಿಯಬೇಕು’ ಎಂದು ಡಾ.ಆನಂದ ಶಂಕರ ಸಲಹೆ ನೀಡಿದರು.
‘ಮೂತ್ರಪಿಂಡ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ಕೊಡಿಸಬೇಕು. ವರ್ಷದಲ್ಲಿ ಎರಡ್ಮೂರು ಬಾರಿ ಕಿಡ್ನಿಗಳಲ್ಲಿ ನೋವು ಕಾಣಿಸಿಕೊಂಡರೆ ತಕ್ಷಣವೇ ತಪಾಸಣೆಗೆ ಒಳಪಡಿಸಬೇಕು. ಕಿಡ್ನಿ ಸ್ಟೋನ್ ಯಾವ ಹಂತದಲ್ಲಿದೆ ಎಂಬುದನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಕೊಡಬಹುದು’ ಎಂದರು.
‘ಫ್ಲೋರೈಡ್ ಅಂಶದ ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಆಗುವುದಿಲ್ಲ. ಅದಿರಂದ ಬೇರೆ ತರಹದ ಆರೋಗ್ಯ ಸಮಸ್ಯೆಗಳಾಗುತ್ತವೆ. ಕಿಡ್ನಿ ಸ್ಟೋನ್ ಆಗಲು ಕ್ಯಾಲ್ಸಿಯಂ, ಆಕ್ಸಲೇಟ್, ಕಾರ್ಬೋನ್, ಯೂರಿನ್ ಆಸಿಡ್‌ನಂತಹ ಪದಾರ್ಥಗಳು ಬೇಕಾಗುತ್ತದೆ. ಮಾಂಸಾಹಾರ ಸೇವನೆಯಿಂದ ಕಿಡ್ನಿ ಸ್ಟೋನ್‌ಗೆ ಅಗತ್ಯವಾಗುವಂತಹ ವಾತಾವರಣ ದೇಹದಲ್ಲಿ ಸೃಷ್ಟಿಯಾಗುತ್ತದೆ’ ಎಂದು ತಿಳಿಸಿದರು.
ಕರೆ ಮಾಡಿದ ಓದುಗರ ಪ್ರಶ್ನೆಗಳಿಗೆ ವೈದ್ಯರಿಬ್ಬರು ಉತ್ತರಿಸಿ, ಗೊಂದಲ ನಿವಾರಿಸಿದರು.
* ಕಿಡ್ನಿ ಸಮಸ್ಯೆ ನಿಯಂತ್ರಣ ಹೇಗೆ? (ರಾಘವೇಂದ್ರ ಭಕ್ರಿ, ಸುರಪುರ)
ಶುಗರ್, ಬಿ.ಪಿ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಕಿಡ್ನಿ ಸಮಸ್ಯೆ ಬರುವ ಸಾಧ್ಯತೆ ಬಹಳ ಕಡಿಮೆ. ಸುರಪುರ, ಶಹಾಪುರ, ಯಾದಗಿರಿ, ಕಲಬುರಗಿಯಲ್ಲಿ ಬಿಸಿಲು ಹೆಚ್ಚಾಗಿದೆ. ದಿನಕ್ಕೆ 8–12 ಗ್ಲಾಸ್ ನೀರು ಕುಡಿದು ಕಿಡ್ನಿ ಸಮಸ್ಯೆಯಿಂದ ದೂರ ಉಳಿಯಬಹುದು.
*ನೀರಿನ ಕೊರತೆಯಿಂದ ಕಿಡ್ನಿಯಲ್ಲಿ ಕಲ್ಲು ಆಗುತ್ತವೆಯೇ? (ಗುರು ಹಳಿಗೌಡ, ಚಿಂಚೋಳಿ)
ಈ ಪ್ರದೇಶದಲ್ಲಿ ಹೆಚ್ಚಾಗಿ ಬಿಸಿಲು ಇರುವುದರಿಂದ ನಿರ್ಜಲೀಕರಣ ಉಂಟಾಗುತ್ತಿರುತ್ತದೆ. ಬೇಸಿಗೆಯಲ್ಲಿ 4–5 ಲೀಟರ್ ನೀರು ಕುಡಿಯಬೇಕು. ಮುಖ್ಯವಾಗಿ ಹಿಂದೆ ಕಿಡ್ನಿಯಲ್ಲಿ ಕಲ್ಲಾಗಿದ್ದರೆ ಹೆಚ್ಚಿನ ಜಾಗೃತಿ ವಹಿಸಬೇಕು. ಉಪ್ಪು ಕಡಿಮೆ ಸೇವಿಸಬೇಕು. ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.
* ಮೂತ್ರಪಿಂಡ ತಜ್ಞರು ಮಕ್ಕಳಿಗೆ ಬೇರೆ ಇರುತ್ತಾರೆಯೇ? (ದುರಗಪ್ಪ ಹುಣಸಗಿ)
ಇಲ್ಲ. ವಯಸ್ಕರನ್ನು ಪರೀಕ್ಷಿಸುವ ಕಿಡ್ನಿ ವೈದ್ಯರೇ ಮಕ್ಕಳನ್ನೂ ನೋಡುತ್ತಾರೆ. ಔಷಧ ನೀಡುವಾಗ ಅದರ ಪ್ರಮಾಣ ಮಾತ್ರ ಬೇರೆ ಬೇರೆಯಾಗಿರುತ್ತದೆ.
* ಮೂತ್ರ ಹಳದಿ ಬಣ್ಣವಿರುವುದು ಸಮಸ್ಯೆಯೇ? (ಶಂಕರ್ ನಾಲವಾರ)
ಸಾಮಾನ್ಯವಾಗಿ ಮೂತ್ರದ ಬಣ್ಣ ಜೋಳದ ದಂಟಿನ ಬಣ್ಣ ಮತ್ತು ಭತ್ತ ಒಣಗಿದ ನಂತರ ಕಾಣುವ ಬಣ್ಣ ಇರುತ್ತದೆ. ಉರಿತವಿದ್ದರೆ ವೈದ್ಯರನ್ನು ಕಾಣಿ. ಶುಗರ್ ಇದ್ದ ರೋಗಿಗೆ ಪದೇಪದೆ ಮೂತ್ರ ಬರುತ್ತದೆ. ಜನನೇಂದ್ರೀಯ ಸಮಸ್ಯೆ ಇದ್ದರೂ ಹೆಚ್ಚಾಗಿ ಮೂತ್ರ ಬರುತ್ತಿರುತ್ತದೆ. ಶುಗರ್ ಪರೀಕ್ಷಿಸಿದ್ದು ನಾರ್ಮಲ್ ಇದೆ ಎಂದು ಹೇಳಿದ್ದೀರಿ. ಭಯ ಪಡುವ ಅಗತ್ಯವಿಲ್ಲ.
* ಕಿಡ್ನಿಯಲ್ಲಿ ಹರಳಿದ್ದು ಪರಿಹಾರ ಸಿಗುತ್ತಿಲ್ಲ (ಜೇವರ್ಗಿ ತಾಲ್ಲೂಕು ಗಂವ್ಹಾರ)
10 ಎಂಎಂಗಿಂತ ಕಡಿಮೆ ಗಾತ್ರದ ಹರಳನ್ನು ಔಷಧ ನೀಡಿ ಮೂತ್ರದ ಮೂಲಕ ಹೊರಹೋಗುವಂತೆ ಮಾಡುತ್ತೇವೆ. 1 ಸೆಂ.ಮೀ.ಗಿಂತ ದೊಡ್ಡದಾಗಿದ್ದರೆ ಲೇಸರ್ ಮೂಲಕ ಅಥವಾ ಸ್ಟಂಟ್ ಹಾಕಿ ಚಿಕಿತ್ಸೆ ನೀಡಲಾಗುತ್ತದೆ.
* ಕಿಡ್ನಿ ವೈಫಲ್ಯದ ಲಕ್ಷಣಗಳೇನು? (ವಿಶ್ವರಾಧ್ಯ ಯರಗೋಳ, ಯಾದಗಿರಿ)
ಕಾಲು ಬಾವು ಬರುವುದು, ವಿನಾ ರಕ್ತದೊತ್ತಡ ಹೆಚ್ಚಳ ಆಗುತ್ತದೆ. ಉಬ್ಬಸ ಬರುತ್ತದೆ. ಔಷಧ ಕೊಟ್ಟರೂ ಕಡಿಮೆ ಆಗುವುದಿಲ್ಲ.
‘ಕಿಡ್ನಿ ದಾನಿಗಳು ವಿರಳ’
‘ದೇಶದಲ್ಲಿ ಕಿಡ್ನಿ ದಾನಿಗಳ ಸಂಖ್ಯೆ ವಿರಳವಾಗಿದೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ‘ಜೀವ ಸಾರ್ಥಕತೆ’ ಸಂಸ್ಥೆಯಲ್ಲಿ ನೋಂದಾಯಿತ ರೋಗಿಗಳಿಗೆ ನಾಲ್ಕೈದು ವರ್ಷಗಳಾದರು ಕಿಡ್ನಿ ಸಿಗುತ್ತಿಲ್ಲ. ಕಾಯಿಲೆ ಪೀಡಿತರ ಕುಟುಂಬ ಸದಸ್ಯರೇ ಮುಂದೆ ಬಂದು ಕಿಡ್ನಿ ಕೊಡಬೇಕಿದೆ’ ಎಂದು ಡಾ.ಪೂರ್ಣಿಮಾ ತಡಕಲ್ ಹೇಳಿದರು. ‘ಅಪಘಾತ ಅಕಾಲಿಕವಾಗಿ ಮೃತಪಟ್ಟ ನಂತರ ಅಂಗಾಂಗ ದಾನ ಮಾಡಿದವರ ಕಿಡ್ನಿಯನ್ನು ತೆಗೆದುಕೊಂಡು ಬಂದು ಕಸಿ ಮಾಡುವುದಕ್ಕಿಂತ ಕುಟುಂಬದ ಆರೋಗ್ಯವಂತ ಸದಸ್ಯರೇ ನೇರವಾಗಿ ನೀಡಿದರೆ ಒಳ್ಳೆಯದು. ಒಂದೇ ಆಪರೇಷನ್ ಥೀಯೆಟರ್‌ನಲ್ಲಿ ಕೆಲವು ಗಂಟೆಗಳಲ್ಲಿ ಕಸಿ ಮಾಡಬಹುದು. ದಾನಿಗಳು ನೀಡಿದ್ದ ಅಂಗಾಂಗಳ ಅವಧಿಯಲ್ಲಿ ಸಾಕಷ್ಟು ವ್ಯತ್ಯಾಸ ಇರುತ್ತದೆ. ಜತೆಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತರಲಾಗಿರುತ್ತದೆ. ಅವುಗಳ ಜೀವಿತ ಅವಧಿ ಕಡಿಮೆ ಆಗಬಹುದು’ ಎಂದರು.
‘ಕಿಡ್ನಿ ಕಸಿಗೆ ಹತ್ತಾರು ಪ್ರಕ್ರಿಯೆಗಳು’
‘ಗ್ಲುಮೆರುಲರ್ ಫಿಲ್ಟರೇಷನ್ ರೇಟ್ (ಜಿಎಫ್‌ಆರ್) ಎನ್ನುವ ಅಳತೆಯ ಮಾಪನವನ್ನು ಬಳಸಿಕೊಂಡು ಮೂತ್ರಪಿಂಡ ಕಾರ್ಯದ ಮಟ್ಟವನ್ನು ತಿಳಿದುಕೊಳ್ಳಲಾಗುತ್ತದೆ. ಜಿಎಫ್‌ಆರ್ ಮಟ್ಟ 30ರಲ್ಲಿ ಇದ್ದರೆ ಕಿಡ್ನಿ ಕಸಿ ಮೊರೆ ಹೋಲಾಗುತ್ತದೆ. ಒಂದು ವೇಳೆ ಜಿಎಫ್‌ಆರ್ ಮಟ್ಟ 15ರಲ್ಲಿ ಇದ್ದಾಗ ಡಯಾಲಿಸಿಸ್‌ಗೆ ಶಿಫಾರಸು ಮಾಡಲಾಗುತ್ತದೆ’ ಎಂದು ಡಾ.ಪೂರ್ಣಿಮಾ ತಡಕಲ್ ಹೇಳಿದರು. ‘ಒಮ್ಮೆ ಕಿಡ್ನಿ ಕಸಿಗೆ ಮುಂದಾದ ಬಳಿಕ ಶಸ್ತ್ರಚಿಕಿತ್ಸೆಗೆ ಮುನ್ನ ಸಾಕಷ್ಟು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಕುಟುಂಬ ಸದಸ್ಯರಿಗೆ ಕಿಡ್ನಿ ಕಸಿ ಬಗ್ಗೆ ಅರಿವು ಮೂಡಿಸಬೇಕು. ಕುಟುಂಬದ ಸದಸ್ಯರನ್ನು ಬಿಟ್ಟು ಹಣ ನೀಡಿ ಹೊರಗಿನವರಿಂದ ಕಿಡ್ನಿ ಪಡೆಯುವುದು ಕ್ರೈಮ್. ಹೀಗಾಗಿ ಕಾಯಿಲೆ ಪೀಡಿತರ ಪತಿ/ಪತ್ನಿ ಅಣ್ಣ ತಂಗಿ ಮಕ್ಕಳು ತೀರ ಹತ್ತಿರದ ಸಂಬಂಧಿಗಳು ಕೊಡಬಹುದು’ ಎಂದರು. ದಾನಿಗಳಿಗೆ ಯಾವುದೇ ತರಹದ ಮಧುಮೇಹ ರಕ್ತದ ಒತ್ತಡ ಇರಬಾರದು. ಇಬ್ಬರು ರಕ್ತದ ಗುಂಪು ಹೋಲಿಕೆಯಾಗಬೇಕು. ದೈಹಿಕವಾಗಿ ಸದೃಢವಾಗಿರಬೇಕು. ಇಬ್ಬರು ಸಂಬಂಧಿಕರು ಎಂಬುದನ್ನು ದೃಢೀಕರಣ ಪತ್ರಗಳನ್ನು ಹಾಜರಿ ಪಡಿಸಬೇಕು. ಶಸ್ತ್ರಚಿಕಿತ್ಸೆಗೆ ಇಬ್ಬರೂ ಅರ್ಹರಿದ್ದಾರೆ ಎಂಬುದನ್ನು ಅನಸ್ತೇಶಿಯಾ ತಜ್ಞರು ದೃಢಪಡಿಸಬೇಕು. ಆನಂತರ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಕಿಡ್ನಿ ಕಸಿಯಲ್ಲಿ ದಾನಿ ಹಾಗೂ ರೋಗಿಯ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಬಹುಮುಖ್ಯವಾಗುತ್ತದೆ’ ಎಂದು ಮಾಹಿತಿ ನೀಡಿದರು.
ಕಿಡ್ನಿ ಸಮಸ್ಯೆ ಪತ್ತೆ ಹಚ್ಚಲು ಮೂರು ಪರೀಕ್ಷೆ
ಸಾಮಾನ್ಯವಾಗಿ ಕಿಡ್ನಿ 9 ಸೆಂ.ಮೀ ಇರುತ್ತದೆ. ಕಿಡ್ನಿ ಸರಿಯಾಗಿ ಇರುವಿಕೆ ಬಗ್ಗೆ ಪರೀಕ್ಷಿಸಲು ಯುಎಸ್‌ಜಿ ಮಾಡಲಾಗುತ್ತದೆ. ಪ್ರೊಟೀನ್ ಹೋಗುತ್ತಿರುವ ಬಗ್ಗೆ ಮೂತ್ರ ಪರೀಕ್ಷೆ ಸೀರಮ್ ಕ್ರಿಯೇಟಿನೀನ್ ಬಗ್ಗೆ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಈ ಮೂರು ವಿಧಾನಗಳ ಮೂಲಕ ಕಿಡ್ನಿ ಸಮಸ್ಯೆಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಡಾ.ಆನಂದ ಶಂಕರ ತಿಳಿಸಿದರು.
ಡಯಾಲಿಸೀಸ್‌ನಿಂದ ಹೊರಗೆ ಬರಬಹದೇ?
ಈ ಹಿಂದೆ ಕಿಡ್ನಿ ಸಮಸ್ಯೆ ಇಲ್ಲದವರು ಜ್ವರ ಅಥವಾ ಸೋಂಕಿನಿಂದ ಉಂಟಾಗುವ ಕಿಡ್ನಿ ಸಮಸ್ಯೆಗೆ ಅಗತ್ಯವಿದ್ದಲ್ಲಿ ಮಾತ್ರ ಡಯಾಲಿಸೀಸ್ ಮಾಡಲಾಗುತ್ತದೆ. ಅಂದರೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಡಯಾಲಿಸೀಸ್‌ನಿಂದ ಹೊರಗಡೆ ಬರಬಹುದು. ಇನ್ನು ಮೂತ್ರಪಿಂಡ ತನ್ನ ಕಾರ್ಯಾಚರಣೆ ನಿಲ್ಲಿಸಿದರೆ ಕಡ್ಡಾಯವಾಗಿ ಡಯಾಲಿಸೀಸ್ ಬೇಕೇಬೇಕು. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಕಿಡ್ನಿ ಕಸಿ ಮಾಡಬೇಕಾಗುತ್ತದೆ ಎಂದು ಡಾ.ಪೂರ್ಣಿಮಾ ತಡಕಲ್ ತಿಳಿಸಿದರು.
ಪಾಲಕ್ ಟೊಮೆಟೊದಿಂದ ಕಿಡ್ನಿಯಲ್ಲಿ ಕಲ್ಲಾಗುತ್ತಾ?
ಪಾಲಕ್ ಟೊಮೆಟೊ ತಿನ್ನುವುದರಿಂದ ಕಲ್ಲಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಎಲ್ಲ ಹಣ್ಣು ತರಕಾರಿ ಸೇರಿದಂತೆ ಸಸ್ಯಾಹಾರವನ್ನು ಸೇವಿಸಬಹುದು. ಇದು ದೇಹಕ್ಕೆ ಬೇಗ ಒಗ್ಗಿಕೊಳ್ಳುತ್ತದೆ. ಮಾಂಸಾಹಾರ ತಿನ್ನುವುದರಿಂದ ಯೂರಿಕ್ ಆ್ಯಸಿಡ್ ಉತ್ಪತ್ತಿ ಆಗುತ್ತದೆ. ಇದರಿಂದ ಹರಳು ಆಗುವ ಸಾಧ್ಯತೆ ಇರುತ್ತದೆ ಎಂದು ಡಾ.ಪೂರ್ಣಿಮಾ ತಿಳಿಸಿದರು. ‘ಒಂದೇ ಕಿಡ್ನಿ ಇದ್ದವರೂ ಎಲ್ಲ ಆಹಾರವನ್ನು ಸೇವಿಸಬಹುದು. ಉಪ್ಪಿನಕಾಯಿ ಹಪ್ಪಳ ತಿನ್ನದಿದ್ದರೆ ಒಳ್ಳೆಯದು. ಇನ್ನು ದಿನನಿತ್ಯದ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು. ವಾಕಿಂಗ್ ವ್ಯಾಯಾಮ ಮಾಡಬಹುದು. ಆದರೆ ಯಾವುದೂ ಮಿತಿ ಮೀರಬಾರದು’ ಎಂದು ಡಾ.ಆನಂದ ಶಂಕರ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.