ಕಲಬುರಗಿ: ‘ಸಾಹೇಬ್ರೆ ನಮ್ಮ ಊರಿನಲ್ಲಿ ದಿನಾಲೂ ನೂರಾರು ಮಕ್ಕಳು ಶಾಲಿಗ ಹೋಗ್ತಾರ. ಸರಿಯಾದ ಟೈಮಿಗೆ ಬಸ್ ಬರೋದೇ ಇಲ್ಲ. ಮುಂಜಾನೆ ಒಂದು ಸಂಜೀಕ ಒಂದು ಬಸ್ ಶುರು ಮಾಡ್ರಿ...’
‘ಪ್ರಜಾವಾಣಿ’ ಗುರುವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮಕ್ಕೆ ಇಂತಹ ಬೇಡಿಕೆ ಹೊತ್ತ ಹಲವು ಕರೆಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಅವರಿಗೆ ಬಂದವು.
ಗುರುವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಫೋನ್ ಇನ್ ನಡೆಯಲಿದೆ ಎಂದು ತಿಳಿಸಿದ್ದರೂ ವಿವಿಧ ಜಿಲ್ಲೆಗಳಿಂದ ಬುಧವಾರ ಬೆಳಿಗ್ಗೆಯಿಂದಲೇ ಫೋನ್ ಕರೆಗಳು ಬರಲು ಶುರುವಾಗಿದ್ದವು. ಕೆಕೆಆರ್‌ಟಿಸಿ ಎಂ.ಡಿ. ಅವರು ಫೋನ್ ಇನ್‌ನಲ್ಲಿ ಭಾಗವಹಿಸಿ ಹಲವು ಕರೆಗಳಿಗೆ ಉತ್ತರಿಸಿ, ‘ಪ್ರಜಾವಾಣಿ’ ಕಚೇರಿಯಿಂದ ಹೊರಟ ಬಳಿಕವೂ ಸಂಜೆಯವರೆಗೂ ಕರೆಗಳು ಬರುತ್ತಲೇ ಇದ್ದವು.
ಪ್ರಮುಖವಾಗಿ ಸಕಾಲಕ್ಕೆ ಬಸ್‌ಗಳು ಬರದಿರುವುದು, ವಸತಿ ಬಸ್‌ಗಳು ಇರದಿರುವುದು, ಬಸ್‌ಗಳನ್ನು ನಿಲ್ಲಿಸದಿರುವುದು, ಬಸ್ ನಿಲ್ದಾಣದ ಅವ್ಯವಸ್ಥೆ, ಸಿಬ್ಬಂದಿಯ ವರ್ತನೆ ಸರಿ ಇಲ್ಲದಿರುವುದು, ಬಸ್ ನಿಲ್ದಾಣಗಳನ್ನು ನಿರ್ಮಿಸಬೇಕು ಎಂಬ ಬೇಡಿಕೆಗಳನ್ನು ಓದುಗರು ಹಾಗೂ ಸಾರ್ವಜನಿಕರು ಎಂ. ರಾಚಪ್ಪ ಅವರ ಮುಂದೆ ಇರಿಸಿದರು. ‘ಸಮಸ್ಯೆಗಳನ್ನು ದಾಖಲಿಸಿಕೊಂಡಿದ್ದೇವೆ. ವಾರದೊಳಗೆ ಪರಿಹಾರ ಕಲ್ಪಿಸಲಾಗುವುದು’ ರಾಚಪ್ಪ ಭರವಸೆ ನೀಡಿದರು.
ಫೋನ್ ಇನ್‌ನಲ್ಲಿ ಕೇಳಿ ಬಂದ ಪ್ರಶ್ನೆಗಳು ಹಾಗೂ ಅದಕ್ಕೆ ನೀಡಲಾದ ಉತ್ತರಗಳ ಸಂಕ್ಷಿಪ್ತ ರೂಪ ಇಲ್ಲಿದೆ.
* ಭಾಗ್ಯಶ್ರೀ ಠಾಕೂರ್
ಶಹಾಬಾದ್‌ನಿಂದ ಜೇವರ್ಗಿಗೆ ನಿತ್ಯ ಹಲವರು ಪ್ರಯಾಣಿಸುತ್ತಾರೆ. ತಾಲ್ಲೂಕು ಕೇಂದ್ರವಾದರೂ ಸಮರ್ಪಕ ಸಾರಿಗೆ ಸೌಲಭ್ಯವಿಲ್ಲ. ಶಹಾಬಾದ್ ಬಸ್ ನಿಲ್ದಾಣದಲ್ಲಿ ಕಂಟ್ರೋಲರ್ ಕುಳಿತುಕೊಳ್ಳುವ ಜಾಗದ ಹಿಂಬದಿಯಲ್ಲಿ ಅಪಾಯಕಾರಿ ಎಲೆಕ್ಟ್ರಿಕ್ ಬಾಕ್ಸ್‌ಗಳಿದ್ದು ಅವುಗಳನ್ನು ತೆರವುಗೊಳಿಸಬೇಕು.
ಶಹಾಬಾದ್–ಜೇವರ್ಗಿ ರಸ್ತೆ ಹದಗೆಟ್ಟಿದ್ದರಿಂದ ಬಸ್‌ಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ಆದರೂ, ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ಸಂಚಾರವನ್ನು ನಡೆಸಲಾಗುತ್ತಿದೆ. ಹೆಚ್ಚು ಜನದಟ್ಟಣೆ ಇರುವ ಸಮಯದಲ್ಲಿ ಹೆಚ್ಚುವರಿ ಬಸ್ ಓಡಿಸಲು ಕ್ರಮ ಕೈಗೊಳ್ಳಲಾಗುವುದು. ಶಹಾಬಾದ್ ನಿಲ್ದಾಣದಲ್ಲಿರುವ ಎಲೆಕ್ಟ್ರಿಕ್ ಬಾಕ್ಸ್‌ಗಳನ್ನು ತೆರವುಗೊಳಿಸಲು ಎಲೆಕ್ಟ್ರಿಕಲ್ ಎಂಜಿನಿಯರ್ ಅವರನ್ನು ಕಳುಹಿಸುತ್ತೇನೆ.
* ಕಮಲಾಪುರ ತಾಲ್ಲೂಕಿನ ಸಿರಗಾಪುರ ಕ್ರಾಸ್‌ನಲ್ಲಿ ಬಸ್‌ಗಳು ನಿಲ್ಲುವುದೇ ಇಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ.
ಸಿರಗಾಪುರದಲ್ಲಿ ಬಸ್‌ಗಳ ನಿಲುಗಡೆ ಇದೆ. ಯಾವುದು ನಿಲ್ಲುವುದಿಲ್ಲವೋ ಅಂಥ ಬಸ್‌ಗಳ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ.
* ವೀರಣ್ಣ ಯಾರಿ
ವಾಡಿಯಲ್ಲಿ ನಿಲ್ದಾಣ ಇಲ್ಲದೆ ಮಕ್ಕಳು, ವೃದ್ಧರು ಪರದಾಡುತ್ತಿದ್ದಾರೆ. ಹೊಸ ನಿಲ್ದಾಣ ಯಾವಾಗ ನಿರ್ಮಾಣಗೊಳ್ಳಿದೆ?
ವಾಡಿ ಪಟ್ಟಣದ ಒಳಗೆ ಜಾಗ ಸಿಗದ ಕಾರಣ ರಾಷ್ಟ್ರೀಯ ಹೆದ್ದಾರಿ 150ರ ಸಮೀಪ ಬಳಿರಾಮ್ ಚೌಕ್‌ನಲ್ಲಿ ₹2.50 ಕೋಟಿ ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ಜಾಗ ಸಿಕ್ಕರೆ ಎರಡನೇ ಹಂತಹಂತವಾಗಿ ಪಟ್ಟಣದಲ್ಲೂ ನಿರ್ಮಾಣ ಮಾಡುತ್ತೇವೆ.
* ಕೋರ್ಟ್ ನೌಕರ
ಕುಷ್ಟಗಿ– ಕೊಪ್ಪಳದ ನಡುವೆ ನಾನ್‌ಸ್ಟಾಪ್ ಬಸ್ ಓಡಿಸಿ.
ನಾನ್‌ಸ್ಟಾಪ್ ಆಗಿ ಬಸ್ ಓಡಿಸಿದರೆ ಮಾರ್ಗ ಮಧ್ಯದಲ್ಲಿನ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. 10ರಿಂದ 15 ನಿಮಿಷ ತಡವಾಗಿ ಹೋದರೆ ಏನೂ ತೊಂದರೆ ಆಗುವುದಿಲ್ಲ. ಮಕ್ಕಳ ಶಿಕ್ಷಣವೂ ನೋಡಬೇಕಾಗುತ್ತೆ. ಮುಂದಿನ ದಿನ ಕ್ರಮ ತೆಗೆದುಕೊಳ್ಳುತ್ತೇವೆ.
* ಬೀದರ್–ಮನ್ನಾಎಖ್ಖೇಳಿ ನಡುವೆ ನಾನ್‌ಸ್ಟಾಪ್ ಬಸ್ ಓಡಾಡುತ್ತಿವೆ. ವಡ್ಡನಕೇರಾ, ಕಪ್ಪರಗಾಂವ, ಹಿಪ್ಪರಗಾಂವ ಕ್ರಾಸ್‌ಗೆ ನಿಲುಗಡೆ ಮಾಡಿ.
ರಾಷ್ಟ್ರೀಯ ಹೆದ್ದಾರಿ ಇರಿವುದರಿಂದ ಎಕ್ಸ್‌ಪ್ರೆಸ್‌ಗಳ ಓಡಾಟ ಹೆಚ್ಚಾಗಿರುತ್ತದೆ. ಅವುಗಳಿಗೆ ತೊಂದರೆ ಆಗಿದಂತೆ ಆರ್ಡಿನರಿ ಬಸ್‌ಗಳನ್ನೇ ಓಡಿಸುತ್ತೇವೆ.
* ಲಿಂಗನಗೌಡ
ರೋಗಿಗಳು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಾದಗಿರಿಯ ವಡಗೇರಾ ತಾಲ್ಲೂಕಿನಿಂದಲೇ ಬೆಳಿಗ್ಗೆ 6ರಿಂದ ಸುರಪುರ, ಕಲಬುರಗಿಗೆ ನೇರವಾಗಿ ಬಸ್‌ಗಳನ್ನು ಓಡಿಸಿ
ವಡಗೇರಾದಲ್ಲಿ ರಾತ್ರಿ ವೇಳೆ ನಿಲುಗಡೆಯಾಗಿ ಬೆಳಿಗ್ಗೆ 6ರಿಂದಲೇ ಕಲಬುರಗಿಗೆ ಹೋಗುವ ವ್ಯವಸ್ಥೆ ಮಾಡುತ್ತೇವೆ. ಸುರಪುರಕ್ಕೆ ಹೈಯಾಳ ಮಾರ್ಗವಾಗಿ ಮತ್ತೊಂದು ಬಸ್ ಬಿಡುತ್ತೇವೆ.
* ಸಿಂಧನೂರು ಸಮೀಪದ ಮುದ್ದಾಪುರ ಕ್ರಾಸ್‌ನಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳು ನಿಲ್ಲುವುದಿಲ್ಲ.
ಎಕ್ಸ್‌ಪ್ರೆಸ್ ಬಸ್‌ಗಳು ಪ್ರಮುಖ ನಗರಗಳ ಮಧ್ಯೆ ಮಾತ್ರ ನಿಲ್ಲುತ್ತವೆ. ಈ ಕ್ರಾಸ್‌ನಲ್ಲಿ ನಿಲುಗಡೆ ನೀಡಿದರೆ ಬೇರೆ ಕ್ಯಾಂಪ್‌ನವರು ಬೇಡಿಕೆ ಇಡುತ್ತಾರೆ. ಹಾಗಾಗಿ, ಎಕ್ಸ್‌ಪ್ರೆಸ್ ಬಸ್ ನಿಲುಗಡೆ ಮಾಡುವುದು ಕಷ್ಟ.
* ಹುಣಸಗಿ ತಾಲ್ಲೂಕಿನ ಬಸವಸಾಗರ ಅಣೆಕಟ್ಟೆ ಸಮೀಪದ ಜಂಗಿನಗಡ್ಡಿ ಗ್ರಾಮಕ್ಕೆ ಹುಣಸಗಿ ಬಸ್ ಕೂಡ ಬರುವುದಿಲ್ಲ. ಪ್ರತಿದಿನ 4ರಿಂದ 5 ಕಿಲೋ ಮೀಟರ್ ನಡೆದುಕೊಂಡೇ ಹೋಗಿ ಬಸ್ ಹತ್ತಬೇಕು. ಇಲ್ಲಿಗೆ ಬಸ್ ವ್ಯವಸ್ಥೆ ಮಾಡಿ.
ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
* ಬಸಣ್ಣ ಘತ್ತರಗಿ, ಅಫಜಲಪುರ
ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಅಂಗವಿಕಲರನ್ನು ಅನುಮತಿಸುತ್ತಿಲ್ಲ.
ಅಂಗವಿಕಲರನ್ನು ಎಕ್ಸ್‌ಪ್ರೆಸ್ ಬಸ್‌ಗಳಿಗೆ ಹತ್ತಿಸಿಕೊಳ್ಳಬಾರದು ಎಂಬ ಆದೇಶ ಎಲ್ಲಿಯೂ ಆಗಿಲ್ಲ. ಡಿಪೊ ವ್ಯವಸ್ಥಾಪಕರು, ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಈ ಬಗ್ಗೆ ತಿಳಿ ಹೇಳುತ್ತೇವೆ. ಪಾಸ್ ಹೊಂದಿದ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡುತ್ತಿದ್ದೇವೆ.
ಬರಹದಲ್ಲಿ ಕಳುಹಿಸಲು ಮನವಿ
ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಜನಪ್ರತಿನಿಧಿಗಳು ಸಂಘಟನೆಗಳ ಮುಖಂಡರು ಸೇರಿದಂತೆ ಹಲವರಿಂದ ಫೋನ್ ಕರೆಗಳ ಮಹಾಪುರವೇ ಹರಿದುಬಂತು. ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಇದ್ದ ಕಾರಣ ವೀಕ್ಷಕರು ತಮ್ಮ ಸಮಸ್ಯೆಗಳನ್ನು ಕಮೆಂಟ್ ಮಾಡಿದರು. ಫೋನ್ ಕರೆ ಸಿಗದವರು ಎಸ್‌ಎಂಎಸ್ ವಾಟ್ಸ್ಆ್ಯಪ್ ಮೂಲಕ ನೂರಾರು ಸಮಸ್ಯೆಗಳ ಪಟ್ಟಿಯನ್ನು ಕಳುಹಿಸಿದರು. ಸಮಸ್ಯೆಗಳ ಗಂಭೀರತೆ ಅರಿತ ಎಂ. ರಾಚಪ್ಪ ಅವರು ‘ಪ್ರಯಾಣಿಕರಿಂದ ಬಂದ ಪ್ರಶ್ನೆ ಸಮಸ್ಯೆಗಳನ್ನು ಬರಹದ ರೂಪದಲ್ಲಿ ನಮಗೆ ಕಳುಹಿಸಿ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುತ್ತೇವೆ. ಇಷ್ಟೊಂದು ಕರೆಗಳು ಬರುತ್ತವೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಬಸ್ ನಿಲುಗಡೆ ಬಸ್ ನಿಲ್ದಾಣ ನಿರ್ಮಾಣ ಮೂಲಸೌಕರ್ಯದಂತಹ ಮನವಿಗಳು ಬಂದಿವೆ’ ಎಂದರು.
ಆಂಧ್ರಪ್ರದೇಶದ ಜತೆ ಅಂತರರಾಜ್ಯ ಒಪ್ಪಂದ
‘ಕಳೆದ ಒಂದೂವರೆ ವರ್ಷದಿಂದ ಆಂಧ್ರಪ್ರದೇಶದಲ್ಲಿ ಸಾರಿಗೆ ಸೇವೆ ಬಂದ್ ಆಗಿದ್ದು ಅನುಮತಿ ಇಲ್ಲದೆ ಓಡಿಸುವಂತಿಲ್ಲ. ಬಳ್ಳಾರಿ ಸೇರಿದಂತೆ ನೆರೆಯ ರಾಜ್ಯದಲ್ಲಿ 11 ಸಾವಿರ ಕಿ.ಮೀ. ಹೆಚ್ಚುವರಿಯಾಗಿ ಓಡಿಸುವ ಸಂಬಂಧ ಆಂಧ್ರಪ್ರದೇಶದ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಹೇಳಿದರು. ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಒಪ್ಪಂದದ ಪರಾಮರ್ಶೆ ಮಾಡಿದ್ದಾರೆ. ಅಧಿಸೂಚನೆ ಸಹ ಹೊರಡಿಸಲಾಗಿದೆ. ಮುಂದಿನ ಐದಾರು ತಿಂಗಳಲ್ಲಿ ಜಾರಿಗೆ ಬರಲಿದ್ದು ಗಡಿ ಭಾಗದ 3 ಕಿ.ಮೀ ವ್ಯಾಪ್ತಿಯ ಹಳ್ಳಿಗಳಿಗೆ ಸಾಕಷ್ಟು ಅನುಕೂಲ ಆಗಲಿದೆ’ ಎಂದು ಸಿರುಗುಪ್ಪದ ಅಶೋಕ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದರು. ಮಹಾರಾಷ್ಟ್ರಕ್ಕೆ ಬಸ್‌ಗಳ ಕಡಿತ: ‘ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಅರ್ಧದಷ್ಟು ಟಿಕೆಟ್ ದರ ಕಡಿತ ಮಾಡಲಾಗಿದೆ. ನಮ್ಮ ನಿಗಮದ ವ್ಯಾಪ್ತಿಯಲ್ಲಿ ಬಸ್‌ಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಅಂತರರಾಜ್ಯ ಬಸ್‌ಗಳನ್ನು ಕಡಿತ ಮಾಡಿ ಇಲ್ಲಿಯೇ ಬೇಡಿಕೆ ಇರುವಲ್ಲಿ ಓಡಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಅನುಪಾಲನಾ ವರದಿ ತರಿಸಿಕೊಳ್ಳುತ್ತೇವೆ’
‘ಪ್ರಜಾವಾಣಿ’ ಫೋನ್‌ಇನ್ ಕಾರ್ಯಕ್ರಮದ ಒಂದು ಗಂಟೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ನಾನಾ ಭಾಗದಿಂದ ಕರೆಗಳು ಬಂದಿವೆ. ಕೆಲವರು ಸಮಯಕ್ಕೆ ಸರಿಯಾಗಿ ಬಸ್ ಆಗುತ್ತಿಲ್ಲ. ಸಮಯದಲ್ಲಿ ಬದಲಾವಣೆ ಮಾಡಿ ಹೊಸ ನಿಲ್ದಾಣದ ಮಾಡಿ ಮೂಲಸೌಕರ್ಯ ಕಲ್ಪಿಸಿ ಎಂದೆಲ್ಲ ಕೇಳಿದ್ದಾರೆ. ಅವುಗಳನ್ನು ಪರಿಹರಿಸುತ್ತೇವೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಹೇಳಿದರು. ‘ಫೋನ್‌ಇನ್ ಕಾರ್ಯಕ್ರಮದಲ್ಲಿ ಗಮನಕ್ಕೆ ಬಂದಂತಹ ಸಮಸ್ಯೆಗಳನ್ನು ಎಂಟು ದಿನಗಳಲ್ಲಿ ಇತ್ಯರ್ಥಪಡಿಸುತ್ತೇವೆ. ಜತೆಗೆ ಅದರ ಅನುಪಾಲನಾ ವರದಿಯೂ ತರಿಸಿಕೊಳ್ಳುತ್ತೇವೆ. ನಮಗೆ ಸೇವೆಯೇ ಮುಖ್ಯವಾಗಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು’ ಎಂದರು.
‘ಬಸ್ ನಿಲ್ಲಿಸಿ ಅಥವಾ ವರ್ಗಾವಣೆ ಕೊಡಿಸಿ!’
ಇಂಥದೊಂದು ಕೋರಿಕೆ ಮಾಡಿದವರು ಚಿತ್ತಾಪುರ ತಾಲ್ಲೂಕಿನ ಲಕ್ಷ್ಮಿಪುರ ವಾಡಿಯಲ್ಲಿ ಶಿಕ್ಷಕಿಯಾಗಿರುವ ಚಂದ್ರಾವತಿ ಠಾಕೂರ್ ಅವರು. ಫೋನ್ ಇನ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಲು ಕರೆ ಮಾಡಿದ ಚಂದ್ರಾವತಿ ‘ನನಗೊಬ್ಬ ಮಾನಸಿಕ ಅಸ್ವಸ್ಥ ಮಗನಿದ್ದು ಅವನ ಆರೈಕೆ ಮಾಡಿ ಶಾಲೆಗೆ ಹೋಗಬೇಕು. ವಾಡಿ ಕ್ರಾಸ್‌ನಿಂದ ರಾವೂರಿನವರಿಗೆ ಒಮ್ಮೆ ರಾಜಹಂಸ ಬಸ್ ಹತ್ತಲು ಮುಂದಾದಾಗ ಚಾಲಕರು ಆ ಬಸ್ ನಿಲ್ಲಿಸಲಿಲ್ಲ. ತಡವಾಗಿ ಹೋದರೆ ಹಿರಿಯ ಅಧಿಕಾರಿಗಳಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಆದ್ದರಿಂದ ಬೆಳಗಿನ ಸಮಯದಲ್ಲಿ ವಾಡಿ ಕ್ರಾಸ್ ಬಳಿ ಬಸ್ ನಿಲ್ಲಿಸಿ ಇಲ್ಲವೇ ನನಗೆ ಶಹಾಬಾದ್‌ಗೆ ನಿಯೋಜನೆ ಮೇರೆಗೆ ಕಳಿಸುವಂತೆ ಡಿಡಿಪಿಐ ಅವರಿಗೆ ಮನವರಿಕೆ ಮಾಡಿಕೊಡಿ’ ಎಂದು ಮನವಿ ಮಾಡಿದರು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.