ADVERTISEMENT

ವಾಡಿ | ಪಾಠ ಪ್ರಾಥಮಿಕ, ವೇತನ ಪ್ರೌಢ! ಪ್ರಾಥಮಿಕ ಶಾಲೆಗೆ ಸೀಮಿತವಾದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 4:51 IST
Last Updated 17 ನವೆಂಬರ್ 2024, 4:51 IST
   

ವಾಡಿ: ಚಿತ್ತಾಪುರ ತಾಲ್ಲೂಕಿನ ಹಲವು ಪ್ರೌಢಶಾಲೆಗಳಲ್ಲಿ ಕಲಿಕೆ ಉತ್ತಮಪಡಿಸಲು ಶಿಕ್ಷಣ ಇಲಾಖೆ ಹೆಣಗಾಡುತ್ತಿದೆ. ಆದರೆ ಕಾಯಂ ಶಿಕ್ಷಕರ ಕೊರತೆ ಎದುರಾಗಿದೆ. ಇದರ ಮಧ್ಯೆ ತಾಲ್ಲೂಕಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತರಬೇತಿ ಪಡೆದ 51 ಪದವೀಧರ ಶಿಕ್ಷಕರು(ಟಿಜಿಟಿ) ಪ್ರೌಢಶಾಲೆಗೆ ಮರು ಹೊಂದಾಣಿಕೆಯಾಗದೇ ಪ್ರಾಥಮಿಕ ಶಾಲೆಯಲ್ಲಿಯೇ ಉಳಿದುಕೊಂಡಿದ್ದಾರೆ. ಜಿಲ್ಲೆಯಲ್ಲಿಯೇ ಚಿತ್ತಾಪುರ ತಾಲ್ಲೂಕಿನಲ್ಲಿ ಈ ಸಂಖ್ಯೆ ಅಧಿಕ ಎನ್ನಲಾಗಿದೆ.

ಚಾಮನೂರು, ಕುಂದನೂರು, ಹಣ್ಣಿಕೇರಾ, ಬಳವಡಗಿ, ಕಮರವಾಡಿ, ಭಂಕೂರುವಾಡಾ, ಮುತ್ತುಗಾ, ಚಿತ್ತಾಪುರ ಪಟ್ಟಣ ಸಹಿತ ಹಲವೆಡೆ ಪ್ರಾಥಮಿಕ ವಿಭಾಗದಲ್ಲಿ ತರಬೇತಿ ಪಡೆದ ಪದವೀಧರ ಶಿಕ್ಷಕರು (ಟಿಜಿಟಿ) ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತೊಂದೆಡೆ ಕೊಲ್ಲೂರು, ನಾಲವಾರ, ಶಹಾಬಾದ ಪಟ್ಟಣ ಸಹಿತ ತಾಲ್ಲೂಕಿನ ಹಲವು ಪ್ರೌಢಶಾಲೆಗಳಲ್ಲಿ ಶಿಕ್ಷಕರು ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

2007ರಲ್ಲಿ ಪ್ರೌಢಶಾಲಾ ಶಿಕ್ಷಕರ ವೇತನಶ್ರೇಣಿಯೊಂದಿಗೆ 8ನೇ ತರಗತಿಗೆ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಆಯ್ಕೆಯಾದ ಟಿಜಿಟಿ ಶಿಕ್ಷಕರು ಮರು ಹೊಂದಾಣಿಕೆಯ ಬಗ್ಗೆ ಮಾರ್ಗಸೂಚಿ ಇದ್ದರೂ ಪ್ರಾಥಮಿಕ ಶಾಲೆಯಲ್ಲಿಯೇ ಉಳಿದುಕೊಂಡಿದ್ದಾರೆ. ಕಳೆದ ವರ್ಷ ಪ್ರಾಥಮಿಕ ಶಾಲೆಗಳಿಗೆ ಪದವೀಧರ ಶಿಕ್ಷಕರ ನೇಮಕಾತಿ(ಜಿಪಿಟಿ) ಶಿಕ್ಷಕರ ನೇಮಕಾತಿ ಆದರೂ ಟಿಜಿಟಿ ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲಿಯೇ ಉಳಿದುಕೊಂಡಿದ್ದಾರೆ.

ADVERTISEMENT

ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಪಿಸಿಎಂ ಸಹ ಶಿಕ್ಷಕರ ಹುದ್ದೆಗಳಿಗೆ ಮರು ಹೊಂದಾಣಿಕೆ ಮೂಲಕ ಸ್ಥಳ ನಿಯುಕ್ತಿಗೊಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು 2019 ಜ.30ರಂದು ಆದೇಶಿಸಿದ್ದಾರೆ.  ಆದರೆ ಕಳೆದ ಹಲವು ವರ್ಷಗಳಿಂದ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಒಂದು ರೀತಿಯಲ್ಲಿ ಹೊಂದಾಣಿಕೆಯಾಗಿದ್ದೇವೆ. ಮಕ್ಕಳ ಸಂಖ್ಯೆ, ಫಲಿತಾಂಶ ಹೆಚ್ಚಳದ ಒತ್ತಡದಿಂದ ಹಿಂದೇಟು ಹಾಕುವಂತಾಗಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಟಿಜಿಟಿ ಶಿಕ್ಷಕ.

ಪ್ರೌಢಶಾಲೆಗಿಂತ ಪ್ರಾಥಮಿಕ ಶಾಲೆಯಲ್ಲಿ ಒತ್ತಡರಹಿತವಾಗಿ ಕಲಿಸುವಿಕೆಯಲ್ಲಿ ತೊಡಗಬಹುದು ಎನ್ನುವುದು ಪ್ರಾಥಮಿಕ ವಿಭಾಗದಲ್ಲಿ ಉಳಿಯಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಆದರೆ ಟಿಜಿಟಿ ಶಿಕ್ಷಕರನ್ನು ಪ್ರೌಢಶಾಲೆಗಳಿಗೆ ಮರುನಿಯೋಜನೆ ಮಾಡಿದರೆ 10ನೇ ತರಗತಿ ಫಲಿತಾಂಶದಲ್ಲಿ ಪ್ರಗತಿ ಕಾಣಬಹುದು ಎನ್ನುತ್ತಾರೆ ಪೋಷಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.