ಕಲಬುರಗಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 15ರ ನಂತರ ಕಲಬುರಗಿಯಲ್ಲಿ ವಿಭಾಗ ಮಟ್ಟದ ಜನಸ್ಪಂದನ ಸಭೆ ನಡೆಸಲು ಉದ್ದೇಶಿಸಿದ್ದಾರೆ. ಹೀಗಾಗಿ, ಜಿಲ್ಲೆಯ ವಿವಿಧ ಯೋಜನೆಗಳ ಅಡಿಗಲ್ಲು, ಉದ್ಘಾಟನೆ ಹಾಗೂ ಸೌಲಭ್ಯ ವಿತರಣೆಯ ಸಂಪೂರ್ಣ ಮಾಹಿತಿಯನ್ನು ಆಗಸ್ಟ್ 5ರ ಒಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಭೆ ನಡೆಸಿ ಮಾತನಾಡಿದ ಅವರು, ‘ಜನಸ್ಪಂದನ ಸಭೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು. ಚಿಂಚೋಳಿ ಮತ್ತು ಕಲಬುರಗಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಸರಿಯಾಗಿ ಆಗಿಲ್ಲ. ಅಂತಹ ತಪ್ಪು ಮರುಕಳಿಸಬಾರದು. ವಿಭಾಗ ಮಟ್ಟದ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು’ ಎಂದರು.
‘ವಿಭಾಗ ಮಟ್ಟದ ಜನಸ್ಪಂದನೆಗೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಜನರು ಬರುತ್ತಾರೆ. ಅವರಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಊಟ, ನೀರು, ಪಾರ್ಕಿಂಗ್, ಭದ್ರತೆ ವ್ಯವಸ್ಥೆಯೂ ಅಚ್ಚುಕಟ್ಟಾಗಬೇಕು. ಸೌಲಭ್ಯ ವಿತರಣೆಗೆ ಫಲಾನುಭವಿಗಳನ್ನು ಕರೆತರಬೇಕು. ಅರ್ಜಿ ಸ್ವೀಕಾರಕ್ಕೆ ಇಲಾಖಾವಾರು ಕೌಂಟರ್ ತೆರೆಯಬೇಕು. ಮುಂಚಿತವಾಗಿ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಬೇಕು. ಜನಪರ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಮಳಿಗೆ ಹಾಕಬೇಕು. ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳಿಂದ ಯೋಜನೆಗಳ ಪ್ರಾತ್ಯಕ್ಷಿಕೆ ನಡೆಸಬೇಕು’ ಎಂದು ತಾಕೀತು ಮಾಡಿದರು.
‘ಸಿ.ಎಂ. ಜನಸ್ಪಂದನ ಸಭೆ ಪ್ರಮುಖ ವಿಷಯಗಳ ಪ್ರಸ್ತಾವನೆಗೆ ವೇದಿಕೆಯಾಗಬೇಕೆ ಹೊರತು ಜಾತ್ರೆಯಾಗಬಾರದು. ಸಿ.ಎಂ. ಬಂದ್ರು, ಹೋದ್ರು ಏನು ಪ್ರಯೋಜನವಾಗಲಿಲ್ಲ ಎಂದು ಜನರು ಮಾತಾಡಿಕೊಳ್ಳಬಾರದು’ ಎಂದು ಶಾಸಕ ಎಂ.ವೈ.ಪಾಟೀಲ ಅಧಿಕಾರಿಗಳಿಗೆ ಒತ್ತಿ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಅಲ್ಲಮಪ್ರಭು ಪಾಟೀಲ, ‘ಪಹಣಿ ತಿದ್ದುಪಡಿ, ಪಿಂಚಣಿದಂತಹ ಸಣ್ಣ-ಪುಟ್ಟ ಸಮಸ್ಯೆಗಳಿಗೆ ರಾಜ್ಯದ ಮುಖ್ಯಮಂತ್ರಿ ಬಳಿ ಜನ ಬರುತ್ತಾರಂದರೆ ಅಧಿಕಾರಿಗಳು ಏನು ಮಾಡುತ್ತೀದ್ದೀರಿ’ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ ಮಾತನಾಡಿ, ‘ತಾಲ್ಲೂಕು ಕೆಡಿಪಿ ಸಭೆಗೆ ಕೆಲವು ಅಧಿಕಾರಿಗಳು ಗೈರಾಗುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಕೆಡಿಪಿ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ನಿರ್ದೇಶನ ನೀಡಬೇಕು’ ಎಂದು ಹೇಳಿದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ಕೆಡಿಪಿ ಸಭೆಗೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಶಿಷ್ಟಾಚಾರದಲ್ಲಿ ಲೋಪವಾದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಸಭೆಯಲ್ಲಿ ರಾಜ್ಯ ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಐಜಿಪಿ ಅಜಯ್ ಹಿಲೋರಿ, ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಗೂ ಮುನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳೊಂದಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮೈದಾನಕ್ಕೆ ತೆರಳಿ, ಸ್ಥಳ ಪರಿಶೀಲನೆ ನಡೆಸಿದರು.
‘ವಚನ ಮಂಟಪ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ’
‘ಕೆರೆ ಬೋಸಗಾದಲ್ಲಿ ವಚನ ಮಂಟಪ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಸ್ಥಳ ಗುರುತಿಸಿದ್ದು ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕರೆ ನೀಲನಕ್ಷೆಯೂ ತಯಾರಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
‘ಗುಲಬರ್ಗಾ ವಿವಿಯಲ್ಲಿ 1000 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಹಿಳೆಯರ ಒಳಾಂಗಣ ಕ್ರೀಡಾಂಗಣ ಬಹುಮುಖ ಕೌಶಲ ಕೇಂದ್ರ ಸ್ಥಾಪನೆ ಸೇರಿ ಹಲವು ಯೋಜನೆಗಳಿಗೆ ಸ್ಥಳ ವೀಕ್ಷಣೆ ಮಾಡಲಾಗಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಸ್ಟೇಡಿಯಂ ನಿರ್ಮಾಣಕ್ಕೆ ₹30 ಕೋಟಿ ಬಿಡುಗಡೆಯಾಗಿದೆ. ರಾಹುಲ್ ದ್ರಾವಿಡ್ ಹಾಗೂ ಪ್ರಕಾಶ ಪಡುಕೋಣೆ ಕ್ರೀಡಾ ತರಬೇತಿ ಸಂಸ್ಥೆ ಮಾಡಿದವರನ್ನೇ ಕರೆಯಿಸಿ ಚರ್ಚಿಸಲಾಗಿದೆ’ ಎಂದರು.
‘ಎಲೆಕ್ಟ್ರಾನಿಕ್ಸ್ ಕ್ಲಸ್ಟರ್ ತಯಾರಿಕಾ ಘಟಕ ನಿರ್ಮಾಣ ಹಾಗೂ ಜಿಡಿಎ ವತಿಯಿಂದ ಹೊಸ ಕಲಬುರಗಿ ನಗರದ ನೀಲನಕ್ಷೆ ಹಾಕಲಾಗುವುದು’ ಎಂದು ಹೇಳಿದರು.
‘ಒತ್ತುವರಿ ತೆರವಿಗೆ ಇಚ್ಛಾಶಕ್ತಿ ಇದೆ’
‘ಬಹಮನಿ ಕೋಟೆಯಲ್ಲಿನ ನಿವಾಸಿಗಳಿಗೆ ಮನವರಿಕೆ ಮಾಡಿ ಬೇರೊಂದು ಕಡೆ ವಸತಿ ಕಲ್ಪಿಸುವ ಇಚ್ಛಾಶಕ್ತಿಯೂ ಇದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟ ಕೋಟೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರತಿಕ್ರಿಯಿಸಿದ ಅವರು ‘ಪಾಲಿಕೆಯ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸುತ್ತೇನೆ. ಕೋಟೆಯೊಳಗೆ ವಾಸಿಸಿರುವ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಈ ಹಿಂದೆ ಸೂಚಿಸಿದ್ದ ಜಾಗ ನಗರದಿಂದ ದೂರಾಗುತ್ತದೆ ಎಂದು ನಿರಾಕರಿಸಿದ್ದರು’ ಎಂದರು.
‘ಚುನಾವಣೆಯ ಸಮಯದಲ್ಲಿ ಕೋಟೆಯಲ್ಲಿ ಇದ್ದವರಿಗೆ ಮನೆ ಕಟ್ಟಿಕೊಳ್ಳಲು ಬಿಟ್ಟು ಕೊಟ್ಟು ಕರೆಂಟ್ ರಸ್ತೆ ನೀರಿನ ವ್ಯವಸ್ಥೆ ಮಾಡಿಕೊಟ್ಟು ತಪ್ಪು ಮಾಡಿದ್ದೇವೆ. ಈಗ ತಲೆ ಚಚ್ಚಿಕೊಳ್ಳುವಂತೆ ಆಗಿದೆ’ ಎಂದು ಹೇಳಿದರು. ‘ಗಂಡೋರಿ ನಾಲಾ ನೀರಾವರಿ ಕಾಲುವೆಯ ಅವ್ಯವಹಾರದ ಬಗ್ಗೆ ಈ ಹಿಂದೆ ನಾನೇ ದೂರು ಕೊಟ್ಟಿದ್ದೆ. ಆಗ ಶಾಸಕರು ಬಂದು ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದರು. ಸಭೆಯಲ್ಲಿಯೂ ಚರ್ಚೆಯಾಗಿತ್ತು. ಈಗ ಮತ್ತೆ ಪರಿಶೀಲನೆ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.
11 ವಾಹನಗಳು ಪಾಲಿಕೆಗೆ ಹಸ್ತಾಂತರ
ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಗೆ ಪಾಲಿಕೆಯ ವಿವಿಧ ಅನುದಾನದಡಿ ಸುಮಾರು ₹6.68 ಕೋಟಿ ವೆಚ್ಚದ 11 ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪಾಲಿಕೆಗೆ ಹಸ್ತಾಂತರಿಸಿದರು. ತಲಾ ಒಂದು ಗಾರ್ಬೇಜ್ ಸಕ್ಕರ್ ಸೂಪರ್ ಸಕ್ಕರ್ ಸ್ವೀಪಿಂಗ್ ಯಂತ್ರ ಐದು ಕಾಂಪ್ಯಾಕ್ಟರ್ ಮತ್ತು ಮೂರು ಲೈಟ್ ವ್ಯಾಕ್ಯೂಮ್ ರೋಡ್ ಸ್ವೀಪಿಂಗ್ ಯಂತ್ರಗಳನ್ನು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.