ADVERTISEMENT

ಬಿಜೆಪಿಯದ್ದು ಫೋಟೊ ಆಲ್ಬಂ ಪ್ರಣಾಳಿಕೆ: ಪ್ರಿಯಾಂಕ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:11 IST
Last Updated 15 ಏಪ್ರಿಲ್ 2024, 16:11 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ‘ಗೊತ್ತು, ಗುರಿ ಇಲ್ಲದ ಬಿಜೆಪಿಯ ಚುನಾವಣೆಯ ಪ್ರಣಾಳಿಕೆಯು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಆಲ್ಬಂನಂತೆ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

‘ಪ್ರಣಾಳಿಕೆ ಪುಸ್ತಕದಲ್ಲಿ ಮೋದಿ ಅವರು ಪಿಕ್ನಿಕ್‌ನ ತರಹೇವಾರಿ ಫೋಟೊಗಳು ಬಿಟ್ಟರೆ ಯುವಕರು,‌ ಮಹಿಳೆಯರು, ರೈತರು, ಬಡವರು, ಶ್ರಮಿಕರು ಹಾಗೂ ನಿರ್ಗತಿಕರಿಗೆ ಉಪಯೋಗ ಆಗುವಂತ ಯಾವುದೇ ಅಂಶಗಳಿಲ್ಲ. ಕೊಟ್ಟ ಆಶ್ವಾಸನೆಗಳು ಹೇಗೆ, ಯಾವಾಗ ಈಡೇರಿಸುತ್ತೇವೆ ಎನ್ನುವ ಸ್ಪಷ್ಟತೆ ಕಾಣಿಸುತ್ತಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಚ್ಚೇದಿನ್, ಅಮೃತ ಕಾಲ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಘೋಷಣೆಗಳು ಏನಾದವು? 100 ಸ್ಮಾರ್ಟ್‌ ಸಿಟಿಗಳ ಎಲ್ಲಿಗೆ ಬಂದವು? ವರ್ಷಕ್ಕೆ 2 ಕೋಟಿಯಂತೆ 20 ಕೋಟಿ ಉದ್ಯೋಗ ಸೃಷ್ಟಿಯಾಗಿವೆಯಾ? ವಾರಂಟಿಯೇ ಇಲ್ಲದ ಮೋದಿ ಗ್ಯಾರಂಟಿಗಳನ್ನು ಜನರು ನಂಬುವುದಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನೇ ಕಾಪಿ‌ ಮಾಡಿಕೊಂಡಿದ್ದಾರೆ’ ಎಂದರು.

ADVERTISEMENT

‘ಕೇಂದ್ರದ ಅಂಕಿ ಅಂಶಗಳ ಪ್ರಕಾರ, ಕೇಂದ್ರದ ವಿವಿಧ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಹಣಕಾಸು ಇಲಾಖೆಯಲ್ಲಿ 9.64 ಲಕ್ಷ, ರೈಲ್ವೆಯಲ್ಲಿ 3 ಲಕ್ಷ, ಸೇನೆಯ ನಾಗರಿಕ ವಿಭಾಗದಲ್ಲಿ 2.2 ಲಕ್ಷ, ಅಂಚೆ ಇಲಾಖೆಯಲ್ಲಿ 1.20 ಲಕ್ಷ, ಕಂದಾಯ ಇಲಾಖೆಯಲ್ಲಿ 74 ಸಾವಿರ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಯಾವಾಗ ಭರ್ತಿ ಮಾಡುತ್ತಾರೆ ಎಂಬ ಪ್ರಸ್ತಾಪ ಪ್ರಣಾಳಿಕೆಯಲ್ಲಿ ಮಾಡಿಲ್ಲ’ ಎಂದು ಹೇಳಿದರು.

‘ಮಾಲೀಕಯ್ಯ ಗುತ್ತೇದಾರ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಬಂದಿದ್ದಾರೆ. ಪ್ರಸ್ತುತ ಯಾವುದೇ ಪ್ರಸ್ತಾವನೆ ಪಕ್ಷದ ಮುಂದಿಲ್ಲ. ಆದರೆ ಪಕ್ಷದ ನಿರ್ಧಾರಕ್ಕೆ ಬದ್ಧ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ರಾಜಗೋಪಾಲರೆಡ್ಡಿ, ಡಾ.ಕಿರಣ್ ದೇಶಮುಖ್, ಪ್ರವೀಣ್ ಹರವಾಳ, ಶಿವು ಹೊನಗುಂಟಿ ಉಪಸ್ಥಿತರಿದ್ದರು.

‘ಸಿಬಿಐ ಐಟಿ ಕತ್ತೆ ಕಾಯ್ತಿದ್ದಾರಾ?’

‘ಕರ್ನಾಟಕದಿಂದ ₹ 100 ಕೋಟಿ ಕಪ್ಪು ಹಣ ದೇಶದಾದ್ಯಂತ ಹಂಚಿಕೆಯಾಗುತ್ತಿದೆ’ ಎಂದು ಪ್ರಧಾನಿ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ‘ನೂರಾರು ಕೋಟಿ ರೂಪಾಯಿ ಕಪ್ಪು ಹಣ ಹರಿದಾಡುತ್ತಿದೆ ಎಂದರೆ ಕೇಂದ್ರದ ಅಧೀನ ಮೋದಿ ಮತ್ತು ಅಮಿತ್ ಶಾ ಹಿಡಿತದಲ್ಲಿರುವ ಸಿಬಿಐ ಐಟಿ ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರಾ’ ಎಂದು ಪ್ರಶ್ನಿಸಿದರು. ‘ಮೋದಿಯ ಹೇಳಿಕೆ ಹಾಸ್ಯಾಸ್ಪದವಾಗಿದೆ. ಕಪ್ಪು ಹಣದ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ಇದ್ದರೆ ಗಾಳಿಯಲ್ಲಿ ಗುಂಡು ಹಾರಿಸುವುದು ಬಿಟ್ಟು ಕ್ರಮ ತೆಗೆದುಕೊಂಡು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.