ADVERTISEMENT

ಧ್ವನಿ ಇಲ್ಲದ ಸಮುದಾಯ ಏನು ಮಾಡಬೇಕು: ಪ್ರಿಯಾಂಕ್ ಪ್ರಶ್ನೆ

ಮುಖ್ಯಮಂತ್ರಿ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 13:03 IST
Last Updated 1 ಜುಲೈ 2024, 13:03 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ‘ಕೆಲವು ಸಮುದಾಯಗಳಿಗೆ ತಮ್ಮವರಿಗೆ ಸಿಎಂ, ಡಿಸಿಎಂ ಹುದ್ದೆ ಕೊಡಿ ಎಂದು ಕೇಳಲು ವೇದಿಕೆ, ಮಠಾಧೀಶರು, ಪ್ರಬಲವಾದ ಧ್ವನಿಯಾದರೂ ಇದೆ. ಆದರೆ, ಹುಟ್ಟಿನಿಂದ ಕಾಂಗ್ರೆಸ್‌ ಪಕ್ಷವನ್ನೇ ಬೆಂಬಲಿಸಿಕೊಂಡು ಬರುತ್ತಿರುವ, ಧ್ವನಿ, ಮಠ, ಸ್ವಾಮೀಜಿ ಇಲ್ಲದ ಸಮುದಾಯಗಳು ಏನು ಮಾಡಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಇಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸ್ವಾತಂತ್ರ್ಯದ ನಂತರ ಯಾವ ಸಮುದಾಯಗಳಿಗೆ ಮುಖ್ಯಮಂತ್ರಿ ಪ್ರಾತಿನಿಧ್ಯ ಸಿಕ್ಕಿದೆ? ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಯಾವ ಸಮುದಾಯಗಳಿಗೆ ಎಷ್ಟೆಷ್ಟು ವೋಟ್ ಬಿದ್ದಿವೆ? ಯಾವ ಸಮುದಾಯಗಳು ನೂರಕ್ಕೆ ನೂರು ಮತ ಹಾಕಿದ್ದಾರೆ? ಯಾವ ಸಮುದಾಯ ಶೇ 40ರಷ್ಟು ಮತ ಚಲಾಯಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

‘ಗಟ್ಟಿ ಧ್ವನಿ ಇರುವ ಸಮುದಾಯಗಳು ಪ್ರಶ್ನಿಸುತ್ತಿವೆ. ಧ್ವನಿ ಇಲ್ಲದವರಿಗೆ ಕೇಳಲು ಆಗುತ್ತಿಲ್ಲ. ಆದರೂ ಶೇ 100ರಷ್ಟು ವೋಟ್ ಕೊಟ್ಟಿವೆ. ನಾವ್ಯಾರೂ ಪಕ್ಷ, ಸರ್ಕಾರ ಮತ್ತು ಸಂಘಟನೆಗೆ ನಷ್ಟ ಆಗುವಂತೆ ಎಲ್ಲಿಯೂ ಮಾತನಾಡಿಲ್ಲ’ ಎಂದು ಹೇಳಿದರು.

ADVERTISEMENT

‘ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಹೊರಗಿನ ಉದ್ಯಮಿಗಳಿಗೆ ನೂರಾರು ಪ್ರೆಸೆಂಟೇಷನ್‌ಗಳನ್ನು ಕೊಟ್ಟು, ಕೈಕಾಲು ಬಿದ್ದು, ಬೆವರು ಸುರಿಸಿ ಕಷ್ಟಪಟ್ಟು ರಾಜ್ಯಕ್ಕೆ ಕರೆ ತರುತ್ತಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಹೂಡಿಕೆದಾರರಿಗೆ ಫೋನ್ ಕರೆ ಮಾಡಿ, ‘ಗುಜರಾತ್‌ಗೆ ಬಾರದಿದ್ದರೆ ಸಬ್ಸಿಡಿ, ಉತ್ತೇಜನ ಕೊಡುವುದಿಲ್ಲ’ ಎಂದು ಬೆದರಿಸುತ್ತಿದ್ದಾರೆ. ಹೀಗಾದರೆ, ರಾಜ್ಯದಲ್ಲಿ ಹೂಡಿಕೆ ಮಾಡಲು ಯಾರು ಬರುತ್ತಾರೆ? ಮೋದಿಗೆ ಗುಜರಾತ್ ಮತ್ತು ಉತ್ತರ ಪ್ರದೇಶ ಬಿಟ್ಟರೆ ಉಳಿದ ಭಾರತ ಕಾಣಿಸುತ್ತಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.