ADVERTISEMENT

‘ಖಾಸಗಿ ಶಾಲೆಗಳ ಶುಲ್ಕಕ್ಕೆ ಕಡಿವಾಣ ಹಾಕಿ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 6:47 IST
Last Updated 28 ಜೂನ್ 2024, 6:47 IST
ಕಲಬುರಗಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಜನತಾ ಪರಿವಾರ ಸಂಘಟನೆಯ ಮುಖಂಡರು ಡಿಡಿಪಿಐ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು
ಕಲಬುರಗಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಜನತಾ ಪರಿವಾರ ಸಂಘಟನೆಯ ಮುಖಂಡರು ಡಿಡಿಪಿಐ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು   

ಕಲಬುರಗಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಲು ಶಾಲಾ ಶುಲ್ಕ ನಿಯಂತ್ರಣ ಸಮಿತಿ ಮುಂದಾಗಬೇಕು ಎಂದು ಜನತಾ ಪರಿವಾರ ಸಂಘಟನೆಯ ಮುಖಂಡರು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸಾವಿರಾರು ಶಿಕ್ಷಣ ಸಂಸ್ಥೆಗಳು ಎಲ್‌ಕೆಜಿಯಿಂದ ಹಿಡಿದು ಸ್ನಾತಕೋತ್ತರವರೆಗೂ ಡೊನೆಷನ್‌ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿವೆ. ಪೋಷಕರಿಗೆ ಅದನ್ನು ಭರಿಸಲು ಆಗುತ್ತಿಲ್ಲ. ಬಡ ವಿದ್ಯಾರ್ಥಿಗಳ ಪಾಲಕರು ಹಣ ಹೊಂದಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಣ ವ್ಯಾಪಾರಿಕರಣಕ್ಕೆ ಕಡಿವಾಣ ಹಾಕಬೇಕಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೆಲವು ಶಾಲಾ–ಕಾಲೇಜುಗಳ ಆಡಳಿತ ಮಂಡಳಿ ಶುಲ್ಕ ಮತ್ತು ಡೊನೆಷನ್ ವಸೂಲಿ ಮಾಡುವುದರ ಜತೆಗೆ ತಮ್ಮಲ್ಲಿಯೇ ಪಠ್ಯಪುಸ್ತಕ, ನೋಟ್‌ ಬುಕ್, ಸಮವಸ್ತ್ರ, ಸ್ಕೂಲ್ ಬ್ಯಾಗ್, ಶೂ ಖರೀದಿಸುವಂತೆ ಪೋಷಕರನ್ನು ಒತ್ತಾಯಿಸುತ್ತಿವೆ. ವಾಮ ಮಾರ್ಗದ ಮೂಲಕ ಹಣ ಸೂಲಿಗೆ ಮಾಡುತ್ತಿದ್ದರೂ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಮಧ್ಯಮ, ಬಡ ಕೂಲಿ ಕಾರ್ಮಿಕ ವರ್ಗದ ಪಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಲಾ ಶುಲ್ಕ ತುಂಬಲು ಆಗುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಿದ್ದಾರೆ. ಹೆಚ್ಚಿಗೆ ಶುಲ್ಕ ಪಡೆಯುವ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ 1,757 ಸರ್ಕಾರಿ ಶಾಲೆಗಳ ಪೈಕಿ, 67 ಶಾಲೆಗಳಲ್ಲಿ ಶೂನ್ಯ ಶಿಕ್ಷಕರಿದ್ದಾರೆ. 253 ಶಾಲೆಗಳಿಗೆ ತಾಲಾ ಒಬ್ಬೊಬ್ಬರು ಶಿಕ್ಷಕರಿದ್ದಾರೆ. ಹೀಗಾಗಿ, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಕೋರಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ಸಿರಾಜ್ ಶಬ್ದಾ, ಕಾರ್ಯಾಧ್ಯಕ್ಷ ಆಕಾಶ್ ರಿದ್ಲಾನ್, ಕಾರ್ಯದರ್ಶಿಗಳಾದ ಕೃಷ್ಣಕಾಂತ ಸರಡಿಗಿ, ಶೇಖ್ ಸೈಫಾನ್, ಮಹಿಳಾ ವಿಭಾಗದ ಅಧ್ಯಕ್ಷೆ ನಿಲೋಫರ್ ಹಕೀಂ, ಪ್ರಮುಖರಾದ ಸಬೀರ್ ಗನಿ, ಅಜ್ಮತ್ ಉಲಾ ಖಾದ್ರಿ, ಶೇಖ್ ಉಮರ್, ಜಾವೀದ್ ಪಟೇಲ್, ಅಜರ್ ಮುಬಾರಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.