ADVERTISEMENT

ವಕ್ಫ್‌ ವಿರುದ್ಧ ಮಠಾಧೀಶರ, ರೈತರ ಕಹಳೆ

ವಕ್ಫ್‌ ಹಠಾವೋ, ಅನ್ನದಾತ ಬಚಾವೋ: ಬೃಹತ್ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:56 IST
Last Updated 21 ನವೆಂಬರ್ 2024, 15:56 IST
ಕಲಬುರಗಿಯಲ್ಲಿ ಗುರುವಾರ ನಡೆದ ‘ವಕ್ಫ್‌ ಹಠಾವೋ, ಅನ್ನದಾತ ಬಚಾವೋ’ ಪ್ರತಿಭಟನೆಯಲ್ಲಿ ಮಠಾಧೀಶರು, ರೈತ ಹಾಗೂ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು
ಕಲಬುರಗಿಯಲ್ಲಿ ಗುರುವಾರ ನಡೆದ ‘ವಕ್ಫ್‌ ಹಠಾವೋ, ಅನ್ನದಾತ ಬಚಾವೋ’ ಪ್ರತಿಭಟನೆಯಲ್ಲಿ ಮಠಾಧೀಶರು, ರೈತ ಹಾಗೂ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು   

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್‌ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ವಕ್ಫ್ ಮಂಡಳಿ ವಿರುದ್ಧ ರೈತರ ಆಕ್ರೋಶದ ಘೋಷಣೆಗಳು, ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ಕೃಷಿಕರ ಕೂಗಿಗೆ ಧ್ವನಿಗೂಡಿಸಿದ ಮಠಾಧೀಶರು, ನಿಮ್ಮೊಂದಿಗೆ ನಾವೂ ನಿಲ್ಲುತ್ತೇವೆ ಎಂದು ಪಾಲ್ಗೊಂಡ ಬಿಜೆಪಿ ಮುಖಂಡರು, ಹೋರಾಟಕ್ಕೆ ಬೆಂಬಲಿಸಿ ಸ್ವಯಂಪ್ರೇರಿತವಾಗಿ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿದ ವರ್ತಕರು...

ಇದು ನಗರದಲ್ಲಿ ನೇಗಿಲ ಯೋಗಿ ಸ್ವಾಭಿಮಾನಿ ವೇದಿಕೆ ವತಿಯಿಂದ ಗುರುವಾರ ನಡೆದ ‘ವಕ್ಫ್‌ ಹಠಾವೋ, ಅನ್ನದಾತ ಬಚಾವೋ’ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಕಂಡುಬಂದ ದೃಶ್ಯಗಳಿವು.

ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಆವರಣದಲ್ಲಿ ಹಸಿರು ಶಾಲುಗಳು ರಾರಾಜಿಸಿದವು. ಎತ್ತಿನ ಬಂಡಿಗಳೊಂದಿಗೆ ಬಂದ ರೈತರು ಮತ್ತು ಬಿಜೆಪಿ ಕಾರ್ಯಕರ್ತರು, ‘ರಾಜ್ಯ ಸರ್ಕಾರವು ವಕ್ಫ್ ಮಂಡಳಿಯ ಹೆಸರಿನಲ್ಲಿ ರೈತರ ಜಮೀನು, ಮಠ–ಮಂದಿರಗಳ ಆಸ್ತಿ, ಸರ್ಕಾರದ ಜಾಗವನ್ನು ಕಬಳಿಸುವ ಹುನ್ನಾರ ನಡೆಸುತ್ತಿದೆ’ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

20ಕ್ಕೂ ಹೆಚ್ಚು ಮಠಾಧೀಶರು ಹೋರಾಟದ ಬೆನ್ನಿಗೆ ನಿಂತು, ‘ವಕ್ಫ್ ಮಂಡಳಿಯನ್ನು ರದ್ದು ಮಾಡಬೇಕು ಹಾಗೂ ವಕ್ಫ್‌ ಗೆಜೆಟ್ ನೋಟಿಫಿಕೇಶನ್ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ರೈತರೇ ದೇಶದ ಆಸ್ತಿ’, ‘ನಮ್ಮ ನಡೆ ರೈತರ ಕಡೆ’, ‘ಜಮೀರ್ ಹಠಾವೋ, ಜಮೀನ್ ಬಚಾವೋ’, ‘ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’, ‘ಭೂಮಿಯಿಂದ ರೈತ ರೈತನಿಂದ ನಾವು’... ನಾಮಫಲಕಗಳನ್ನು ಹಿಡಿದು ಘೋಷಣೆಗಳು ಮೊಳಗಿಸುತ್ತಾ, ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಮೆರವಣಿಗೆ ನಡೆಸಿದರು.

ಈ ಪ್ರತಿಭಟನೆಗೆ ಗಂಜ್, ಸೂಪರ್ ಮಾರ್ಕೆಟ್‌ನ ಬಹುತೇಕ ವರ್ತಕರು ಬೆಂಬಲಿಸಿದರು. ತಮ್ಮ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಇದರಿಂದ ಬಹುತೇಕ ಕಡೆಗಳಲ್ಲಿ ವ್ಯಾಪಾರ– ವಹಿವಾಟು ಸ್ಥಗಿತಗೊಂಡಿತ್ತು. ಸರಾಫ್ ಬಜಾರ್, ಕಿರಾಣ ಬಜಾರ್, ಕ್ಲಾಥ್ ಬಜಾರ್, ಬಾಂಡಾ ಬಜಾರ್‌ಗಳಲ್ಲಿನ ಹಲವು ಮಳಿಗೆಗಳ ಬಾಗಿಲು ಹಾಕಲಾಗಿತ್ತು.

ಪ್ರತಿಭಟನೆಯಲ್ಲಿ ಕೆಂಚ ಬಸವೇಶ್ವರ ಶಿವಾಚಾರ್ಯರು, ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ಬಬಲಾದ ಶಿವಮೂರ್ತಿ ಶಿವಾಚಾರ್ಯ, ಬೆಳಗುಂಪಾ ಪರ್ವತೇಶ್ವರ ಶಿವಾಚಾರ್ಯರು, ಮಕ್ತಂಪುರ ಗದ್ದುಗೆ ಮಠದ ಚರಲಿಂಗ ಸ್ವಾಮೀಜಿ, ವೀರಭದ್ರ ಶಿವಾಚಾರ್ಯರು, ಸಿದ್ದರೇಣುಕಾ ಸ್ವಾಮೀಜಿ, ಶಾಂತ ಸೋಮನಾಥ ಸ್ವಾಮೀಜಿ, ಬಾಲ ಬ್ರಹ್ಮಚಾರಿ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಸಂಗಮೇಶ್ವರ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ದೇವಿಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಕೇದಾರಲಿಂಗ ದೇವರು, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಮುಖಂಡರಾದ ಅಮರನಾಥ ಪಾಟೀಲ, ಚಂದು ಪಾಟೀಲ, ಅಂಬಾರಾಯ ಅಷ್ಟಗಿ, ನಿತಿನ್ ಗುತ್ತೇದಾರ, ರಾಜಕುಮಾರ ಪಾಟೀಲ ತೇಲ್ಕೂರ, ಶಿವರಾಜ ಪಾಟೀಲ ರದ್ದೇವಾಡಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರತಿಭಟನೆ ಸಾಗುವ ಮಾರ್ಗದ ಉದ್ದಕ್ಕೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಎರಡು ಗಂಟೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕಲಬುರಗಿಯಲ್ಲಿ ಗುರುವಾರ ನಡೆದ ‘ವಕ್ಫ್‌ ಹಠಾವೋ ಅನ್ನದಾತ ಬಚಾವೋ’ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಜಮೀರ್ ಪಾಕ್ ಏಜೆಂಟ್’

‘ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿರುವ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಇದೇ ರೀತಿ ಮುಂದುವರಿದರೆ ನವಲಗುಂದ ಮತ್ತು ನರಗುಂದ ರೈತರ ಮಾದರಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಆಂದೋಲ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ‘ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಮ್ಮ ಮಾತು ಕೇಳಿಯೇ ಪ್ರಕರಣ ದಾಖಲಿಸುತ್ತಾರೆ. ಅದರ ಬದಲು ನೊಂದವರ ನೋವು ಆಲಿಸಲಿ. ಆಳಂದ ತಾಲ್ಲೂಕಿನ ಮೂವರು ದಲಿತ ಮಹಿಳೆಯರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ತಲಾ 2 ಎಕರೆ ಜಮೀನು ನೀಡಲಾಗಿದೆ. ಈಗ ಅವರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ಅವರ ಕಷ್ಟಕ್ಕೆ ಕಿವಿಯಾಗಲಿ’ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.