ಕಲಬುರ್ಗಿ: ‘ಆರ್‌ಎಸ್‌ಎಸ್ ಮನುಸ್ಮೃತಿಯನ್ನು ಸಂವಿಧಾನ ಮಾಡುವ ಹುನ್ನಾರ ನಡೆಸಿದೆ. ಅದಕ್ಕಾಗಿಯೇ ಸಂವಿಧಾನಕ್ಕೆ ಅಪಮಾನ ಮಾಡಲಾಗುತ್ತಿದೆ’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿಮೊಮ್ಮಗ ರಾಜರತನ್ ಅಂಬೇಡ್ಕರ್ ಆರೋಪಿಸಿದರು.
ನಗರದಲ್ಲಿ ಸಂವಿಧಾನ ರಕ್ಷಣಾ ಸಮಿತಿಯು ಶನಿವಾರ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದರು.
‘ಲೋಕಸಭೆ ಮೇಲೆ ಗುರುಸಭೆಯನ್ನು ಸ್ಥಾಪಿಸಿ, ಮನುಸ್ಮೃತಿಯನ್ನು ಜಾರಿಗೆ ತರುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರನ್ನು ಗುಲಾಮರನ್ನಾಗಿ ಮಾಡಲು ಹೊರಟಿದೆ’ ಎಂದು ದೂರಿದರು.
‘ಥೈಲಾಂಡ್ ಗುಹೆಯಲ್ಲಿ ಸಿಲುಕಿದ್ದ ಬಾಲಕರು ನರೇಂದ್ರ ಮೋದಿ ಅವರಿಗೆ ಕಾಣಿಸುತ್ತಾರೆ. ಆದರೆ, ಸಂಸತ್ ಭವನದ ಪಕ್ಕದಲ್ಲೇ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವವರು ಕಾಣಿಸುವುದಿಲ್ಲ. ಸಂಸತ್ ಹೊರಗೆ ಸಂವಿಧಾನದ ಪ್ರತಿಯನ್ನು ಸುಡಲಾಗುತ್ತಿದ್ದರೆ, ಸಂಸತ್‌ನೊಳಗೆ ಸಂವಿಧಾನವನ್ನು ಬದಲಾವಣೆ ಮಾಡಲಾಗುತ್ತಿದೆ. ಹೀಗಾಗಿ ಸಂವಿಧಾನ ರಕ್ಷಣೆಗಾಗಿ ನಾವೆಲ್ಲರೂ ಪಣತೊಡಬೇಕು’ ಎಂದು ಹೇಳಿದರು.
‘ನಮ್ಮ ದೇಶಕ್ಕೆ ಒಂದು ದೇಶ; ಒಂದು ಚುನಾವಣೆಯ ಅವಶ್ಯಕತೆ ಇಲ್ಲ. ಆದರೆ, ಒಂದು ದೇಶ; ಒಂದೇ ಶಿಕ್ಷಣದ ಅವಶ್ಯಕತೆ ಇದೆ. ನರೇಂದ್ರ ಮೋದಿ ಹಠಾವೋಗೆ ನಾನು ಬೆಂಬಲಿಸುವುದಿಲ್ಲ. ನರೇಂದ್ರ ಮೋದಿ ಒಂದು ಉತ್ಪಾದನೆ ಇದ್ದಂತೆ, ಅವರು ಹೋದರೂ ಇನ್ನೊಬ್ಬರು ಆ ಜಾಗದಲ್ಲಿ ಬರುತ್ತಾರೆ. ಹೀಗಾಗಿ ಆರ್‌ಎಸ್‌ಎಸ್ ಎಂಬ ಕಾರ್ಖಾನೆ ಹಠಾವೋ ಮಾಡಬೇಕಾಗಿದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ನ ಯಾರೊಬ್ಬರೂ ರಕ್ತ ಅಲ್ಲ, ಬೆವರನ್ನೂ ಹರಿಸಿಲ್ಲ. ಆದರೆ, ಅವರೇ ಈಗ ದೇಶಭಕ್ತಿಯ ಪ್ರಮಾಣಪತ್ರ ವಿತರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ದೆಹಲಿಯಿಂದ ಅಧಿಕಾರ ನಡೆಸುತ್ತಿಲ್ಲ, ನಾಗಪುರದಿಂದ ಅಧಿಕಾರ ನಡೆಸುತ್ತಿದೆ’ ಎಂದು ಹರಿಹಾಯ್ದರು.
‘ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ತಮ್ಮ ಮನೆಗಳಲ್ಲಿ ಬೇಕಿದ್ದರೆ ಮನುಸ್ಮೃತಿಯನ್ನು ಅನುಷ್ಠಾನಗೊಳಿಸಲಿ. ಮನುಸ್ಮೃತಿಯಲ್ಲಿ ಹೆಣ್ಣು ಮಕ್ಕಳನ್ನು ಕುರಿತು ಮಕ್ಕಳನ್ನು ತಯಾರು ಮಾಡುವ ಯಂತ್ರ ಎಂದು ಹೇಳಲಾಗಿದೆ. ಆಗ ಆ ಹೆಣ್ಣು ಮಕ್ಕಳಿಗೆ ಮನುಸ್ಮೃತಿ ಒಳ್ಳೆಯದೋ ಅಥವಾ ಸಂವಿಧಾನ ಒಳ್ಳೆಯದೋ ಎಂಬುದು ಅರಿವಿಗೆ ಬರುತ್ತದೆ’ ಎಂದು ಹೇಳಿದರು.
ಕಠಿಣ ಶಿಕ್ಷೆಗೆ ಆಗ್ರಹಿಸಿ ಬೃಹತ್ ರ್‍ಯಾಲಿ
ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಸಂವಿಧಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಿತು.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು, ವಿವಿಧ ಸಮಾಜದ ಮುಖಂಡರು, ಜನಪ್ರತಿನಿಧಿಗಳು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ‘ಸಂವಿಧಾನ ಪ್ರತಿಯನ್ನು ಸುಟ್ಟಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ವಿಧಿಸಬೇಕು, ಗಡಿಪಾರು ಮಾಡಬೇಕು’ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.