ADVERTISEMENT

ರಸ್ತೆ ದುರಸ್ತಿಗಾಗಿ ಭಿಕ್ಷಾಟನೆ ಮಾಡಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:46 IST
Last Updated 20 ಅಕ್ಟೋಬರ್ 2024, 7:46 IST
ಕಾಳಗಿ ತಾಲ್ಲೂಕಿನ ತೆಂಗಳಿ-ತೊನಸನಹಳ್ಳಿ ಕ್ರಾಸ್‌ನಲ್ಲಿ ಶನಿವಾರ ರಸ್ತೆ ದುರಸ್ತಿಗಾಗಿ ಬುಟ್ಟಿಗಳನ್ನು ಮುಂದಿಟ್ಟುಕೊಂಡು ಭಿಕ್ಷಾಟನೆ ಮಾಡಿ ಪ್ರತಿಭಟನೆ ನಡೆಸಿದರು
ಕಾಳಗಿ ತಾಲ್ಲೂಕಿನ ತೆಂಗಳಿ-ತೊನಸನಹಳ್ಳಿ ಕ್ರಾಸ್‌ನಲ್ಲಿ ಶನಿವಾರ ರಸ್ತೆ ದುರಸ್ತಿಗಾಗಿ ಬುಟ್ಟಿಗಳನ್ನು ಮುಂದಿಟ್ಟುಕೊಂಡು ಭಿಕ್ಷಾಟನೆ ಮಾಡಿ ಪ್ರತಿಭಟನೆ ನಡೆಸಿದರು   

ಕಾಳಗಿ: ರಾಜ್ಯ ಹೆದ್ದಾರಿ 126ರ ತೆಂಗಳಿ–ತೊನಸನಹಳ್ಳಿ ಕ್ರಾಸ್ ನಡುವಿನ ರಸ್ತೆ ದುರಸ್ತಿಗೆ ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಿದ ತೆಂಗಳಿ ಗ್ರಾಮಸ್ಥರು, ದುರಸ್ತಿಗಾಗಿ ಹಣ ಹೊಂದಿಸಲು ಭಿಕ್ಷಾಟನೆಯೂ ಮಾಡಿದರು.

ಬುಟ್ಟಿಗಳನ್ನು ಮುಂದಿಟ್ಟುಕೊಂಡು ರಸ್ತೆಯಲ್ಲಿ ಕುಳಿತ ಗ್ರಾಮಸ್ಥರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ತೆಂಗಳಿ–ತೊನಸನಹಳ್ಳಿ ನಡುವಿನ 6 ಕಿ.ಮೀ. ರಸ್ತೆ ಹದಗೆಟ್ಟು, ಗುಂಡಿಗಳಿಂದ ಆವೃತ್ತವಾಗಿದೆ. ಪ್ರಾಣ ಭೀತಿಯಲ್ಲಿ ಪ್ರಯಾಣಿಸುತ್ತಿದ್ದೇವೆ. ರಸ್ತೆ ದುರಸ್ತಿಯ ಮನವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ಸುತ್ತಲಿನ ಗ್ರಾಮಗಳ ರಸ್ತೆಗಳು ಹಾಳಾಗಿವೆ. ಜನರ ಗೋಳು ಸರ್ಕಾರಕ್ಕೆ ಅರ್ಥವಾದಂತಿಲ್ಲ. ರಸ್ತೆ ಸುಧಾರಣೆಗೆ ಅನುದಾನ ಇಲ್ಲದಂತೆ ಕಾಣುತ್ತಿದೆ. ನಾವೇ ಭಿಕ್ಷೆ ಬೇಡಿ, ಹಣ ಸಂಗ್ರಹಿಸಿ ರಸ್ತೆ ದುರಸ್ತಿ ಮಾಡುತ್ತೇವೆ. ಇದಕ್ಕೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಹಶೀಲ್ದಾರ್ ಘಮಾವತಿ ರಾಠೋಡ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ದಶವಂತ ಗಾಜರೆ, ಸಲೀಂ ಅಕ್ತಾರ್, ಮಲ್ಲಿಕಾರ್ಜುನ ದಂಡಿನ ಅವರು ಅಹವಾಲು ಆಲಿಸಿ, ರಸ್ತೆ ದುರಸ್ತಿಯ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.