ADVERTISEMENT

ಶಹಾಬಾದ್ | 'ಮೂಲಸೌಕರ್ಯ, ಉಪನ್ಯಾಸಕರ ಕೊರತೆ ನೀಗಿಸಿ’

ಎಐಡಿಎಸ್ಒ ಸಂಘಟನೆಯಿಂದ ಆಗ್ರಹ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:12 IST
Last Updated 2 ಜುಲೈ 2024, 5:12 IST
ಫೋಟೋ 1
ಫೋಟೋ 1   

ಶಹಾಬಾದ್: ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಾಯಂ ಉಪನ್ಯಾಸಕರ ನೇಮಕ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ನಗರದ ನೆಹರು ಚೌಕ್‌ನಲ್ಲಿ ಎಐಡಿಎಸ್ಒ ಸಂಘಟನೆಯ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಬಳಿಕ ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ವೇಳೆ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ತುಳಜಾರಾಮ ಎನ್‌.ಕೆ. ಮಾತನಾಡಿ, ‘ಸುತ್ತಲಿನ ಹಳ್ಳಿಗಳಿಂದ ಬಡ ರೈತ-ಕಾರ್ಮಿಕರ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಾರೆ. ಪ್ರಸಕ್ತ ವರ್ಷ ಉತ್ತಮ ಫಲಿತಾಂಶ ಪಡೆದಿರುವ ಕಾಲೇಜಿಗೆ ಕಾಯಂ ಉಪನ್ಯಾಸಕರು ಮತ್ತು ಮೂಲಸೌಕರ್ಯಗಳನ್ನು ಒದಗಿಸಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಸೂಕ್ತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಲಾ-ವಾಣಿಜ್ಯ ಮತ್ತು ವಿಜ್ಞಾನ ವಿಭಾಗಕ್ಕೆ ನಿಯೋಜಿತ ಉಪನ್ಯಾಸಕರ ಬದಲು ಕಾಯಂ ಉಪನ್ಯಾಸಕರನ್ನು ನೇಮಿಸಿಬೇಕು. ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ವ್ಯವಸ್ಥೆ, ವಿಜ್ಞಾನದ ಪ್ರಯೋಗಾಲಯ, ಗ್ರಂಥಾಲಯದಲ್ಲಿ ಅವಶ್ಯಕತೆಗೆ ತಕ್ಕಷ್ಟು ಪುಸ್ತಕಗಳ ವ್ಯವಸ್ಥೆ ಮಾಡಬೇಕು. ಪುಸ್ತಕಗಳಿಲ್ಲದಿರುವುದು ವಿದ್ಯಾರ್ಥಿಗಳ ಸಮಗ್ರ ಜ್ಞಾನಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಉನ್ನತ ಹಂತದ ಹೋರಾಟ ರೂಪಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ದೇವರಾಜ ಹೊನಗುಂಟ, ಕಾರ್ಯದರ್ಶಿ ಅಜಯ ಗುರಜಲ್ಕರ, ಸ್ಫೂರ್ತಿ ಗುರಜಲ್ಕರ, ಬಾಬು ಪವರ, ರಂಗನಾಥ ಮಾನೆ, ಸೃಷ್ಟಿ ಗುರಜಲ್ಕರ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಹಾಬಾದ್ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಕಾಯಂ ಉಪನ್ಯಾಸಕರ ನೇಮಕ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಎಐಡಿಎಸ್ಒ ಕಾರ್ಯಕರ್ತರು ನಗರದ ನೆಹರೂ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್‌ಗೆ ಮನವಿ  ಸಲ್ಲಿಸಿದರು

ಸರ್ಕಾರದ ಯೋಜನೆ ಅಡಿಯಲ್ಲಿ ಕಾಲೇಜಿಗೆ ಅಗತ್ಯವಿರುವ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಾಯಂ ಉಪನ್ಯಾಸಕರ ಬಗ್ಗೆ ಕೂಡಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುತ್ತೇನೆ

-ಬಸವರಾಜ ಮತ್ತಿಮಡು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.