ADVERTISEMENT

ಬಸ್ ಅಡ್ಡಗಟ್ಟಿ ನಿಲ್ಲಿಸಿದ ಮಹಿಳೆಯರು

ಕರ್ತವ್ಯಕ್ಕೆ ಹಾಜರಾದ ಚಾಲಕನಿಗೆ ತರಾಟೆ, ಪೊಲೀಸರೊಂದಿಗೂ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 6:28 IST
Last Updated 13 ಏಪ್ರಿಲ್ 2021, 6:28 IST
ಕಲಬುರ್ಗಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಸೋಮವಾರ ಬಸ್‌ ಓಡಿಸಲು ಅಡ್ಡಿಪಡಿಸಿದ ಮಹಿಳೆಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು
ಕಲಬುರ್ಗಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಸೋಮವಾರ ಬಸ್‌ ಓಡಿಸಲು ಅಡ್ಡಿಪಡಿಸಿದ ಮಹಿಳೆಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು   

ಕಲಬುರ್ಗಿ: ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ ಓಡಿಸಲು ಮುಂದಾದ ಚಾಲಕನನ್ನು, ಮುಷ್ಕರದಲ್ಲಿ ಪಾಲ್ಗೊಂಡ ಮಹಿಳೆಯರೇ ಬಸ್‌ನಿಂದ ಕೆಳಗಿಳಿಸಿ ಪ್ರತಿಭಟನೆ ನಡೆಸಿದರು.‌

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕಲಬುರ್ಗಿ ಘಟಕದ ಚಾಲಕರೊಬ್ಬರು ಸೋಮವಾರ ಬೆಳಿಗ್ಗೆ, ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾದರು. ಅವರು ಬಸ್‌ ಓಡಿಸಲು ಚಾಲಕನ ಸೀಟ್‌ ಮೇಲೆ ಹತ್ತಿ ಕುಳಿತರು. ಅಲ್ಲಿಯೇ ಧರಣಿ ಕೂತಿದ್ದ ಮುಷ್ಕರ ನಿರತ ಸಿಬ್ಬಂದಿಯ ಕುಟುಂಬದ ಸದಸ್ಯೆಯರು, ಬಸ್ ಸುತ್ತವರಿದು ಪ್ರತಿಭಟನೆ ನಡೆಸಿದರು.‌ ಚಾಲಕನನ್ನು ಬಸ್‌ನಿಂದ ಕೆಳಗಿಳಿಸಿ ತರಾಟೆ ತೆಗೆದುಕೊಂಡರು.

‘ಸಂಸ್ಥೆಯ ಎಲ್ಲ ಸಿಬ್ಬಂದಿ ಒಗ್ಗಟ್ಟಿನಿಂದ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ನಿಲ್ಲಲು ನಾವು ಮನೆ ಬಿಟ್ಟು ಇಲ್ಲಿಗೆ ಬಂದು ಕುಳಿತಿದ್ದೇವೆ. ನೀವು ನಿಮ್ಮ ಮನಸ್ಸಿಗೆ ಬಂದಂತೆ ಮುಷ್ಕರ ಕೈ ಬಿಡುವುದಾದರೆ ಹೋರಾಟಕ್ಕೆ ಪೆಟ್ಟು ಬೀಳುತ್ತದೆ. ನಿಮ್ಮಂಥವರಿಂದಾಗಿ ನಮ್ಮ ಕುಟಂಬಗಳೂ ಬೀದಿಗೆ ಬರುವಂತಾಗಿದೆ’ ಎಂದು ಚಾಲಕನ ಮೇಲೆ ಹರಿಹಾಯ್ದರು.

ADVERTISEMENT

ಇದರಿಂದ ವಿಚಲಿತರಾದ ಚಾಲಕ ಬಸ್‌ನಿಂದ ಇಳಿದು ಮಹಿಳೆಯರ ಬಳಿ ಕ್ಷಮೆ ಕೋರಿದರು. ‘ನನ್ನಿಂದ ತಪ್ಪಾಗಿದೆ ಕ್ಷಮಿಸಿ. ಹೋರಾಟ ಮುಗಿಯುವವರೆಗೆ ಬಸ್‌ ಹತ್ತುವುದಿಲ್ಲ’ ಎಂದು ಕೈ ಮುಗಿದು ಸ್ಥಳದಿಂದ ತೆರಳಿದರು.‌

ಈ ವೇಳ ಸ್ಥಳಕ್ಕೆ ಬಂದ ಪೊಲೀಸರು, ‘ಮುಷ್ಕರ ನಡೆಸುವವರು ನಡೆಸಿ; ಆದರೆ, ಕರ್ತವ್ಯಕ್ಕೆ ಹಾಜರಾಗುವವರನ್ನು ತಡೆಯುವಂತಿಲ್ಲ’ ಎಂದು ತಿಳಿಹೇಳಲು ಮುಂದಾದರು. ಇದಕ್ಕೂ ಜಗ್ಗದ ಮಹಿಳೆಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ನಂತರ ಬಸ್‌ನಲ್ಲಿ ಹತ್ತಿದ ಕೆಲವು ಮಹಿಳೆಯರು ಪ್ರಯಾಣಿಕರನ್ನೂ ಕೆಳಗೆ ಇಳಿಸಿದರು. ತುರ್ತು ಸಂಚಾರ ಅಗತ್ಯವಿದ್ದವರು ಖಾಸಗಿ ಬಸ್‌ಗಳಲ್ಲಿ ಹೋಗಿ ಎಂದು ಅಲ್ಲಿಂದ ಕಳುಹಿಸಿದರು.‌

ವರ್ಗಾವಣೆ ಹಿಂಪಡೆಯಲು ಆಗ್ರಹ: ‌ಇನ್ನೊಂದೆಡೆ ಕಲಬುರ್ಗಿಯ 1ನೇ ಡಿಪೊ ಹಾಗೂ 2ನೇ ಡಿಪೊ ಮುಂದೆ ಪ್ರತಿಭಟನೆ ನಡೆಸಿದ ಸಾರಿಗೆ ಸಂಸ್ಥೆಯ ಸಿಬ್ಬಂದಿ ಕುಟುಂಬದ ಸದಸ್ಯರು ‘75 ಜನರ ವರ್ಗಾವಣೆ ಆದೇಶ ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.

ವೇತನ ಪರಿಷ್ಕರಣೆಗೆ ಆಗ್ರಹಿಸಿ ಮುಷ್ಕರದಲ್ಲಿ ಪಾಲ್ಗೊಂಡ ಕಾರಣಕ್ಕೆ 75 ಜನ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳು ಹೋರಾಟ ಹತ್ತಿಕ್ಕುವ ನೆಪದಲ್ಲಿ ಈ ರೀತಿ ಅಸ್ತ್ರ ಬಳಸಿದ್ದು ಖಂಡನಾರ್ಹ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಮುಷ್ಕರ ರಾಜ್ಯದಾದ್ಯಂತ ನಡೆದಿದೆ. ಆದರೆ, ಕಲಬುರ್ಗಿಯಲ್ಲಿ ಮಾತ್ರ ಆಯ್ದ 75 ಸಿಬ್ಬಂದಿಯನ್ನಷ್ಟೇ ವರ್ಗಾವಣೆ ಮಾಡಿದ್ದು ಯಾವ ಉದ್ದೇಶಕ್ಕೆ? ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸುವುದು ತಪ್ಪೇ? ಎಂದು ‍ಪ್ರಶ್ನಿಸಿದರು.

‌ಡಿಪೊದ ಗೇಟ್‌ ಮುಂದೆಯೇ ಕೆಲಕಾಲ ಧರಣಿ ನಡೆಸಿದ ಮಹಿಳೆಯರು, ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.

ಕಳೆದ ತಿಂಗಳ ಸಂಬಳ ಇನ್ನೂ ನೀಡಿಲ್ಲ. ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬಿದ್ದಿವೆ. ಸಹಿಸಿಕೊಳ್ಳಲಾಗದೇ ಮಹಿಳೆಯರೇ ಹೋರಾಟಕ್ಕೆ ಬಂದಿದ್ದೇವೆ. ಈ ಬಾರಿಯ ಯುಗಾದಿ ಹಬ್ಬವೂ ನಮ್ಮ ಪಾಲಿಗೆ ಇಲ್ಲವಾಗಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ದಿಢೀರ್‌ ವರ್ಗ ಮಾಡಿದರೆ ನಾವು ಕುಟುಂಬ ಸಮೇತ ಹೇಗೆ ಹೋಗಬೇಕು ಎಂದೂ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.