ADVERTISEMENT

ರಟಕಲ್ | ವಿವಿಧ ಸಮಸ್ಯೆಗಳ ಪರಿಹಾರಕ್ಕೆ ರೈತ ಸಂಘ ಆಗ್ರಹ: ಸಂಚಾರ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 5:54 IST
Last Updated 26 ಜುಲೈ 2024, 5:54 IST
ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ರಾಜ್ಯಹೆದ್ದಾರಿ ತಡೆದು ಪ್ರತಿಭಟಿಸಲಾಯಿತು
ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ರಾಜ್ಯಹೆದ್ದಾರಿ ತಡೆದು ಪ್ರತಿಭಟಿಸಲಾಯಿತು   

ಕಾಳಗಿ: ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಡೆಂಗಿ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಅತಿವೃಷ್ಟಿಗೆ ಬೆಳೆ ಹಾಳಾಗುತ್ತಿವೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದಿಂದ ಮಹಾಗಾಂವ ಕ್ರಾಸ್-ಸುಲೇಪೇಟ್ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ‘ರಟಕಲ್ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಸಗೂಡ ಗ್ರಾಮದಲ್ಲಿ ಡೆಂಗಿ, ಸಾಂಕ್ರಾಮಿಕ ರೋಗಗಳು ವೇಗವಾಗಿ ಹರಡುತ್ತಿವೆ. ಅನೇಕ ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಟಕಲ್ ಗ್ರಾಮದಲ್ಲಿ ರಸ್ತೆ ಬದಿಯ ಚರಂಡಿಗಳು ತುಂಬಿ ಗಬ್ಬುವಾಸನೆ ಬೀರುತ್ತಿದ್ದು ಸೊಳ್ಳೆ, ಕ್ರಿಮಿ, ಕೀಟಗಳು ಹೆಚ್ಚಾಗಿವೆ. ಕೂಡಲೇ ಗ್ರಾಮದಲ್ಲಿ ಫಾಗಿಂಗ್ ಮಾಡಿಸಬೇಕು’ ಎಂದು ಒತ್ತಾಯಿಸಿದರು.

‘ರಟಕಲ್ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿ ಜನರು ನೀರಿಲ್ಲದೆ ಪರದಾಡುತ್ತಿದ್ದಾರೆ. ಕೆಟ್ಟಿರುವ ಪೈಪ್ ಲೈನ್ ದುರಸ್ತಿ ಮಾಡದೆ ನಿರ್ಲಕ್ಷ್ಯವಹಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಹಾಳುಬಿದ್ದಿದೆ. ಹುಲಸಗೂಡ ಗ್ರಾಮದಲ್ಲಿ ಶುದ್ಧ ನೀರು ಸಿಗುತ್ತಿಲ್ಲ. ನೀರು ಸರಬರಾಜಿನ ಮೋಟರ್ ಕೆಟ್ಟಿದ್ದರೂ ರಿಪೇರಿ ಮಾಡುತ್ತಿಲ್ಲ. ಕಸ ವಿಲೇವಾರಿ, ಕುಡಿಯುವ ನೀರಿನ ಹೆಸರಿನಲ್ಲಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿದ್ದರೂ ಯಾವ ಪ್ರಯೋಜನವಾಗಿಲ್ಲ. ಹಳ್ಳಿಯ ಸ್ವಚ್ಛತೆ, ಅಭಿವೃದ್ಧಿ ಬಗ್ಗೆ ಗ್ರಾಮಾಡಳಿತ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ಅವರು ದೂರಿದರು.

ADVERTISEMENT

‘ಎರಡು ವಾರಗಳಿಂದ ಅತಿವೃಷ್ಟಿಯಾಗುತ್ತಿದೆ. ಇದರಿಂದ ಹೊಲಗಳಲ್ಲಿ ನೀರು ನಿಲ್ಲುತ್ತಿದೆ. ಬೆಳೆಗಳು ಹುಲುಸಾಗಿ ಬೆಳೆಯದೆ ನೀರಿನಲ್ಲಿ ಕೊಳೆಯುವ ಸಂಭವವಿದೆ. ಸರ್ಕಾರ ಬೆಳೆನಷ್ಟಕ್ಕೆ ಪರಿಹಾರ ನೀಡಲು ಕೂಡಲೇ ಮುಂದಾಗಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‌ಮುಖಂಡ ವೀರಣ್ಣಾ ಗಂಗಾಣಿ, ಗೌರಿಶಂಕರ ಕಿಣ್ಣಿ, ಕುಪ್ಪಣ್ಣಾ ಪಡಶೆಟ್ಟಿ, ಚಂದ್ರಕಾಂತ ಸೀಗಿ, ನಾಗಯ್ಯ ಬುಕಟಗಿ, ವಿಜ್ಜು ರಡಗಿ, ಪ್ರಭು ಹುಲಸೂಡ, ನಾಗರಾಜ ಏರಿ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.