ADVERTISEMENT

ಕಲಬುರ್ಗಿ: ಸ್ಕೀಂ ವರ್ಕರ್‌ಗಳನ್ನು ನೌಕರರೆಂದು ಪರಿಗಣಿಸಿ

ಜಿಲ್ಲಾಧಿಕಾರಿ ಕಚೇರಿ ಎದುರು ಅಂಗನವಾಡಿ– ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 7:18 IST
Last Updated 25 ಸೆಪ್ಟೆಂಬರ್ 2021, 7:18 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಮುಖಂಡರುಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಮುಖಂಡರುಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ‘ಕೋವಿಡ್‌ ಕೆಲಸಕ್ಕೆ ನಿಯೋಜನೆಗೊಳಿಸಿದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಸ್ಕೀಂ ವರ್ಕರ್‌ಗಳನ್ನು ಫ್ರಂಟ್‌ಲೈನ್‌ ನೌಕರರೆಂದು ಪರಿಗಣಿಸಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

‘ನಮ್ಮನ್ನು ಕೋವಿಡ್‌ ಕೆಲಸಕ್ಕೆ ಎಥೇಚ್ಚವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಮುಂಚೂಣಿ ನೌಕರರೆಂದು ಪರಿಗಣಿಸಿಲ್ಲ. ಇನ್ನೂ ಹಲವಾರು ನೌಕರರಿಗೆ ಲಸಿಕೆ ನೀಡಿಲ್ಲ. ಕೂಡಲೇ ಲಸಿಕೆ ಉತ್ಪಾದನೆ ಪ್ರಮಾಣ ಹೆಚ್ಚಿಸಿ ಎಲ್ಲರಿಗೂ ಆದ್ಯತೆ ಮೇಲೆ ಚುಚ್ಚುಮದ್ದು ನೀಡಬೇಕು. ಕೋವಿಡ್‌ ಕೆಲಸಕ್ಕೆ ಹೋಗುವವರಿಗೆ ಸೂಕ್ತ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕು’ ಎಂದೂ ಘೋಷಣೆ ಕೂಗಿದರು.

ADVERTISEMENT

ಶೇ 6ರಷ್ಟು ಜಿಡಿಪಿಯನ್ನು ಆರೋಗ್ಯ ಕ್ಷೇತ್ರಕ್ಕೆ ಒದಗಿಸಬೇಕು. ಸಮರ್ಪಕ ಬೆಡ್‌, ಆಮ್ಲಜನಕ ಘಟಕ, ಆರೋಗ್ಯ ಸಂಪನ್ಮೂಲ ಹಾಗೂ ಸಿಬ್ಬಂದಿ ಕೊರತೆ ನೀಗಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ಡೇತರ ರೋಗಿಗಳಿಗೂ ಪರಿಣಾಮಕಾರಿ ಚಿಕಿತ್ಸಾ ಸೌಕರ್ಯ ನೀಡಬೇಕು. ಕೋವಿಡ್‌ ಸೇವೆಯಲ್ಲಿ ನಿಧನರಾದ ಗುತ್ತಿಗೆ ಆಧಾರದ ನೌಕರರಿಗೂ ₹ 50 ಲಕ್ಷ ಆರೋಗ್ಯ ವಿಮೆ ಒದಗಿಸಬೇಕು. ಸ್ಕೀಂ ವರ್ಕರ್‌ಗಳಿಗೆ ತಲಾ ₹ 10 ಸಾವಿರ ಅವಘಡ ಭತ್ಯೆ ನೀಡಬೇಕು. ಸೇವೆಯಲ್ಲಿದ್ದಾಗ ಸೋಂಕು ತಗುಲಿದ ಪ್ರತಿಯೊಬ್ಬರಿಗೂ ಕನಿಷ್ಠ ₹ 10 ಲಕ್ಷ ಪರಿಹಾರ ನೀಡಬೇಕು. ಕಾಯಂ ನೌಕರರೆಂದು ಪರಿಗಣಿಸಿ ಮಾಸಿಕ ₹ 21 ಸಾವಿರ ವೇತನ ನೀಡಬೇಕು.’ ಎಂದೂ ಮನವಿಯಲ್ಲಿ
ಕೋರಿದ್ದಾರೆ.

ಕೇಂದ್ರೀಯ ಪ್ರಾಯೋಜಿತ ಐಸಿಡಿಎಸ್‌, ಎನ್‌ಎಚ್ಎಂ ಮತ್ತು ಎಂಡಿಎಂಎಸ್‌ ಯೋಜನೆಗಳನ್ನು ಕಾಯಂಗೊಳಿಸಿ ಬಜೆಟ್‌ನಲ್ಲಿ ಸಮರ್ಪಕ ಅನುದಾನ ಮೀಸಲಿಡಬೇಕು. ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಅಂಗನವಾಡಿ ನೌಕರರ ವಿಮಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಡಿಜಿಟಲೀಕರಣದ ಹೆಸರಿನಲ್ಲಿ ಫಲಾನುಭವಿಗಳಿಗೆ ತೊಂದರೆ ಆಗುವುದನ್ನು ತಡೆಯಬೇಕು. ಸಂಪನ್ಮೂಲ ಕ್ರೂಢೀಕರಿಸಲು ಶ್ರೀಮಂತರ ಮೇಲೆ ತೆರಿಗೆ ಹೇರಿ, ಬಡವರಿಗೆ ವಿನಾಯಿತಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಜಿ. ದೇಸಾಯಿ, ಸಂಘನಾಕಾರರಾದ ರಾಧಾ ಜಿ., ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷರಾದ ರಫತ್‌ ಸುಲ್ತಾನಾ, ಸಂಗೀತಾ ಕೋಟನೂರ, ವಿಜಯಲಕ್ಷ್ಮಿ ನಂದಿಕೂರ, ಪ್ರಧಾನ ಕರ್ಯದರ್ಶಿ ವಿಜಯಲಕ್ಷ್ಮಿ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.