ADVERTISEMENT

ಬೋಧಗಯಾ ಟೆಂಪಲ್ ಕಾಯ್ದೆ ರದ್ದತಿಗೆ ಆಗ್ರಹ: 26ರಂದು ದೇಶದಾದ್ಯಂತ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:40 IST
Last Updated 19 ನವೆಂಬರ್ 2024, 14:40 IST
ಪ್ರಜ್ಞಾಶೀಲ ಮಹಾಥೇರೊ
ಪ್ರಜ್ಞಾಶೀಲ ಮಹಾಥೇರೊ   

ಕಲಬುರಗಿ: ‘ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ಹಸ್ತಾಂತರ, ಬೋಧಗಯಾ ಟೆಂಪಲ್ (ಬಿಟಿ) ಕಾಯ್ದೆ–1949 ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂವಿಧಾನ ದಿನವಾದ ನವೆಂಬರ್ 26ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಬುದ್ಧಗಯಾದ ಬದಂತ ಪ್ರಜ್ಞಾಶೀಲ ಮಹಾಥೇರೊ ತಿಳಿಸಿದರು.

‘ಬುದ್ಧನಿಗೆ ಜ್ಞಾನೋದಯವಾದ ಬೋಧಗಯಾ ಜಗತ್ತಿನಲ್ಲಿ ಇರುವ ಬೌದ್ಧರಿಗೆ ಪವಿತ್ರ ಸ್ಥಳವಾಗಿದೆ. ಇದುವರೆಗೂ ಬೌದ್ಧ ಪರಂಪರೆಯ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಿಲ್ಲ. ತಲಾ ನಾಲ್ವರು ಬೌದ್ಧರು ಮತ್ತು ಹಿಂದೂಗಳು ಒಳಗೊಂಡ ಆಡಳಿತ ಮಂಡಳಿ ಇರುವುದು ಸರಿಯಲ್ಲ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಂವಿಧಾನದ ಕಲಂ 25, 26 ಮತ್ತು 29ರ ಅನ್ವಯ ಎಲ್ಲ ಜಾತಿ, ಜನಾಂಗದವರು ಸ್ವತಂತ್ರವಾಗಿ ದೇವಸ್ಥಾನ, ಮಂದಿರ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಯಾ ಜಾತಿಗಳ ದೇವಸ್ಥಾನ, ಟ್ರಸ್ಟ್‌ಗಳಿಗೆ ಆಯಾ ಜಾತಿಗಳ ಪ್ರಮುಖರೆ ಆಡಳಿತ ಮಂಡಳಿಗಳಿವೆ. ಆದರೆ, ಬೋಧಗಯಾದಲ್ಲಿ ಇದಕ್ಕೆ ವಿರುದ್ಧವಾದ ಆಡಳಿತ ಮಂಡಳಿ ಇದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘ಸಂವಿಧಾನ ವಿರೋಧಿಯಾ ಬಿಟಿ ಕಾಯ್ದೆ–1949ರ ಅಡಿ ಆಡಳಿತ ಮಂಡಳಿಯೊಳಗೆ ಸೇರಿಸಿ ಹಿಂದೂ ಪುರೋಹಿತರು ಬೌದ್ಧರ ಇತಿಹಾಸ ಮತ್ತು ಸಂಸ್ಕೃತಿ ನಾಶ ಮಾಡಲು ಯತ್ನಿಸುತ್ತಿದ್ದಾರೆ. ಬುದ್ಧನ ವಿಗ್ರಹದ ಮುಂದೆ ಶಿವಲಿಂಗ ಇದೆ ಎಂದು ಸುಳ್ಳು ಹೇಳಿ, ಬುದ್ಧ ವಿಹಾರದ ಆವರಣದಲ್ಲಿ ಗಣಪತಿ ವಿಗ್ರಹ ಇರಿಸಿದ್ದಾರೆ’ ಎಂದು ಆರೋಪಿಸಿದರು.

‘ಬೋಧಗಯಾದಲ್ಲಿನ ಸಂವಿಧಾನ ಬಾಹಿರ ನಡೆಗಳ ಬಗ್ಗೆ ಬಿಹಾರ ಸರ್ಕಾರ ಮತ್ತು ಪ್ರಧಾನಿಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ, ದೇಶದಾದ್ಯಂತ ಈ ಬಗ್ಗೆ ಗಮನ ಸೆಳೆದು ಸರ್ಕಾರದ ಮೇಲೆ ಒತ್ತಡ ತರಲು ನ.26ರಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ. 2025ರ ಫೆಬ್ರುವರಿ 12ರಂದು ಬೋಧಗಯಾದಲ್ಲೂ ಬೃಹತ್ ಪ್ರತಿಭಟನೆ ನಡೆಸಲಾಗುವುದುಠ ಎಂದು ತಿಳಿಸಿದರು.

ಸಮಸ್ತ ದಲಿತ ಸಂಘಟನೆಗಳು, ಬೌದ್ಧ ಸಂಘ–ಸಂಸ್ಥೆಗಳು, ಬುದ್ಧ ವಿವಾಹರಗಳು ಹಾಗೂ ಆಲ್‌ ಇಂಡಿಯಾ ಬುದ್ಧಿಸ್ಟ್ ಫೋರಂ ವತಿಯಿಂದ ಪ್ರತಿಭಟನೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸಿದ್ಧಾರ್ಥ ವಿಹಾರದ ಭಂತೆ ಸಂಘಾನಂದ, ಕೆರಿ ಅಂಬಲಗಾದ ಸುಮನ ಆರ್ಯಾಜಿ, ಬುದ್ಧಘೋಷ ದೇವಿಂದ್ರ ಹೆಗಡೆ, ಅರ್ಜುನ ಭದ್ರೆ, ವಿ.ಟಿ.ಕಾಂಬಳೆ, ಸೂರ್ಯಕಾಂತ ನಿಂಬಾಳಕರ, ವೆಂಕಟೇಶ ಬಿಜಾಪುರ, ಮಹೇಶ ಹುಬ್ಬಳ್ಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.