ADVERTISEMENT

ಕೇಂದ್ರದ ಧೋರಣೆ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 6:07 IST
Last Updated 10 ಜುಲೈ 2024, 6:07 IST

ಕಲಬುರಗಿ: ಎನ್‌ಟಿಎ ಪರೀಕ್ಷೆ ಹಗರಣ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ, ಕ್ರಿಮಿನಲ್‌ ತಿದ್ದುಪಡಿ ಕಾಯ್ದೆ ವಾಪಾಸಾತಿ ಹಾಗೂ ದೇಶಾದ್ಯಂತ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಎಸ್‌ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. 

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ‘ಎನ್‌ಟಿಎ ಪರೀಕ್ಷೆ ಹಗರಣದಿಂದಾಗಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಆತಂಕ ಎದುರಿಸುವಂತಾಗಿದೆ. ಈ ಮೂಲಕ ಕೇಂದ್ರ ಶಿಕ್ಷಣ ಸಚಿವವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜತೆಗೆ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯನ್ನು ರದ್ದುಗೊಳಿಸಿ, ಎನ್‌ಟಿಎ ಅನ್ನು ವಿಸರ್ಜಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರವು ಜುಲೈ 1ರಿಂದ ಜಾರಿಗೊಳಿಸಿರುವ ಹೊಸ ಅಪರಾಧ ಕಾನೂನುಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದ್ದು, ಅವುಗಳನ್ನು ಕೂಡಲೇ ಹಿಂಪಡೆಯಬೇಕು. ಈ ಕಾನೂನುಗಳಲ್ಲಿ ಜನಸಾಮಾನ್ಯರಿಗೆ ಹಾನಿಯುಂಟು ಮಾಡುವಂತಹ ಹಾಗೂ ಪೊಲೀಸರ ಅಧಿಕಾರಗಳನ್ನು ಹೆಚ್ಚಿಸುವಂತಹ ಅನೇಕ ನಿಬಂಧನೆಗಳಿದ್ದು, ಜನಹಿತಕ್ಕೆ ಮಾರಕವಾಗಿವೆ. ಇವುಗಳನ್ನು ವಕೀಲರ ಸಂಘಗಳು ಕೂಡ ವಿರೋಧಿಸಿದ್ದು, ಸಂಘಗಳೊಂದಿಗೆ ನಮ್ಮ ಸಂಘಟನೆಯೂ ಕೂಡ ಬೆಂಬಲ ನೀಡುತ್ತದೆ’ ಎಂದು ಹೇಳಿದರು.

ADVERTISEMENT

‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದರಿಂದ ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಿರಂತರ ಹಲ್ಲೆ ಹಾಗೂ ದಾಳಿಗಳು ನಡೆಯುತ್ತಿವೆ. ವಿವಿಧ ರಾಜ್ಯಗಳಲ್ಲಿ ಐವರು ಮುಸ್ಲಿಂ ಸಮುದಾಯದವರು ಮೃತಪಟ್ಟಿದ್ದಾರೆ. ಜತೆಗೆ 11ಕ್ಕೂ ಹೆಚ್ಚು ಮುಸ್ಲಿಮರ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಕೆಲವು ಹಿಂದುತ್ವದ ಸಂಘಟನೆಗಳು ಮುಸ್ಲಿಂ ಸಮದಾಯಕ್ಕೆ ಜೀವ ಬೆದರಿಕೆ ಒಡ್ಡುತ್ತಿವೆ. ಇಂತಹ ಕೃತ್ಯ ಎಸಗುತ್ತಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಂಘದ ಕಾರ್ಯದರ್ಶಿ ಬಸವರಾಜ, ಶ್ರೀಮಂತ ಬಿರಾದಾರ, ರಾಜ್ಯ ಸಮಿತಿ ಸದಸ್ಯೆ ಶಾಂತಾ ಘಂಟಿ, ಭೀಮಶೆಟ್ಟಿ ಯಂಪಳ್ಳಿ, ಎಂ.ಬಿ.ಸಜ್ಜನ, ಪಾಂಡುರಂಗ, ಪ್ರಭು ಖಾನಾಪುರೆ, ಸುಧಾಮ ಧನ್ನಿ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.