ADVERTISEMENT

ಕಲಬುರಗಿ: ಸುಗಮ ಸಂಚಾರಕ್ಕೆ ನಿತ್ಯವೂ ಸಂಚಕಾರ

ರಸ್ತೆಯೊಳಗೆ ಗುಂಡಿಗಳೋ, ಗುಂಡಿಯೊಳಗೇ ರಸ್ತೆಗಳೋ!

ಮಲ್ಲಿಕಾರ್ಜುನ ನಾಲವಾರ
Published 23 ಅಕ್ಟೋಬರ್ 2024, 5:56 IST
Last Updated 23 ಅಕ್ಟೋಬರ್ 2024, 5:56 IST
ಕಲಬುರಗಿಯ ನಂದೂರು ಸಮೀಪ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಕಿತ್ತು ಹೋದ ಡಾಂಬಾರು, ರಸ್ತೆಯಲ್ಲಿನ ಗುಂಡಿ
ಕಲಬುರಗಿಯ ನಂದೂರು ಸಮೀಪ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಕಿತ್ತು ಹೋದ ಡಾಂಬಾರು, ರಸ್ತೆಯಲ್ಲಿನ ಗುಂಡಿ   
ಕಲ್ಯಾಣ ಕರ್ನಾಟಕದ ಪ್ರಮುಖ ಕಚೇರಿಗಳನ್ನು ಹೊಂದಿರುವ ಕಲಬುರಗಿ ಈಗ ‘ಹದಗೆಟ್ಟ ರಸ್ತೆಗಳ’ ಕೇಂದ್ರವಾಗಿ ಬದಲಾಗುತ್ತಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ನಿತ್ಯ ಓಡಾಡುವ ನಗರದ ರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳು ಗುಂಡಿಗಳಿಂದ ಆವೃತವಾಗಿವೆ. ವಾಹನ ಸವಾರರು ಸುಗಮವಾಗಿ ಓಡಾಡಲಾಗದಷ್ಟು ಮಟ್ಟಿಗೆ ರಸ್ತೆಗಳು ಹಾಳಾಗಿವೆ ಎಂಬ ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಅಂತಹ ರಸ್ತೆಗಳ ಚಿತ್ರಣ ತೆರೆದಿಡಲು ‘ಪ್ರಜಾವಾಣಿ’ಯು ವಿಶೇಷ ವರದಿಗಳ ಸರಣಿಯನ್ನು ಇಂದಿನಿಂದ ಪ್ರಕಟಿಸಲಿದೆ.

ಕಲಬುರಗಿ: ನಗರವೂ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ಹಾಗೂ ಗ್ರಾಮೀಣ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ಯೋಗ್ಯವಾಗಿಲ್ಲ. ಗುಂಡಿಗಳಿಂದ ಆವೃತವಾದ ರಸ್ತೆಗಳಲ್ಲಿ ಸಾರ್ವಜನಿಕರು ನಿತ್ಯ ಪ್ರಯಾಸದಿಂದ ಸಂಚರಿಸಬೇಕಾಗಿದೆ.

200 ಕಿ.ಮೀ.ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿ, 1,875 ಕಿ.ಮೀ.ಗೂ ಹೆಚ್ಚು ರಾಜ್ಯ ಹೆದ್ದಾರಿ, 1,640 ಕಿ.ಮೀ.ಗೂ ಅಧಿಕ ಜಿಲ್ಲಾ ಮುಖ್ಯ ರಸ್ತೆ ಹಾಗೂ 11,261 ಕಿ.ಮೀ. ಅಧಿಕ ಗ್ರಾಮೀಣ ರಸ್ತೆಗಳು ಜಿಲ್ಲೆಯಾದ್ಯಂತ ವಿಸ್ತರಿಸಿಕೊಂಡಿವೆ. ರಾಜ್ಯ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಜಿಲ್ಲೆಯ ವಾಣಿಜ್ಯ ಚಟುವಟಿಕೆಗಳಿಗೆ ಜೀವಾಳವಾಗಿವೆ. ಆದರೆ, ಕೆಲವು ಕಡೆಗಳಲ್ಲಿ ರಸ್ತೆಯೊಳಗೆ ಗುಂಡಿಗಳಿವೆಯೋ ಅಥವಾ ಗುಂಡಿಯೊಳಗೇ ರಸ್ತೆಗಳಿವೆಯೋ ಎಂಬ ಸಂಶಯ ಮೂಡುವಷ್ಟು ಹಾಳಾಗಿವೆ.

ಇನ್ನು ಗ್ರಾಮೀಣ ರಸ್ತೆಗಳ ಸ್ಥಿತಿ ಅದಕ್ಕಿಂತಲೂ ಶೋಚನೀಯವಾಗಿದೆ. ರಾತ್ರಿಯ ಹೊತ್ತು ವಾಹನ ಸವಾರರಿಗೆ ಗುಂಡಿಗಳು ಕಾಣದೆ ಅಪಘಾತ ಸಂಭವಿಸಿ ಗಾಯಗೊಂಡಿದ್ದು, ಕೆಲವರು ಜೀವವನ್ನೂ ಕಳೆದುಕೊಂಡಿದ್ದಾರೆ. ಹಾಳಾದ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಾದ ಸವಾಲು ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಮುಂದಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿಗಳು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಯಾದಗಿರಿ, ರಾಯಚೂರು, ಮಂತ್ರಾಲಯ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ– 150ರ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ವಾಡಿ ಹೊರ ವಲಯದ ರೈಲ್ವೆ ಟ್ರ್ಯಾಕ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಸ್ಥಗಿತವಾಗಿದೆ. ಇಲ್ಲಿನ ರಸ್ತೆ ಸ್ಥಿತಿ ಅಯೋಮಯವಾಗಿದ್ದು, ಅರ್ಧ ಕಿ.ಮೀ. ಸಂಚರಿಸಲು ಸವಾರರು ಹರಸಾಹಸ ಪಡುವಂತಿದೆ.

ಗ್ರಾಮೀಣ ರಸ್ತೆಗಳಲ್ಲಿ ಕೊರಕಲು ಬಿದ್ದಿವೆ. ರಸ್ತೆಗಳ ಅಕ್ಕಪಕ್ಕದಲ್ಲಿ ಇರುವ ಕುರುಚಲು ಗಿಡಗಳು, ಜಾಲಿ ಗಿಡಗಳು ಹರಿಯುವ ನೀರನ್ನು ತಡೆಯುತ್ತಿದ್ದು, ಕೊರಕಲು ಬಿದ್ದು ಗುಂಡಿಗಳ ಆಳ ಹೆಚ್ಚಾಗುತ್ತಿದೆ. ಕೆಲವೆಡೆ ಚರಂಡಿ ಹಾಗೂ ಹಳ್ಳದ ನೀರು ರಸ್ತೆಯ ಮೇಲೆ ಹರಿದು ಡಾಂಬಾರು ಕೊಚ್ಚಿಕೊಂಡು ಹೋಗುತ್ತಿದೆ ಎನ್ನುತ್ತಾರೆ ವಾಹನ ಸವಾರರು. 

ಕಲಬುರಗಿ ತಾಲ್ಲೂಕಿನಲ್ಲಿ ಹಾದು ಹೋಗಿರುವ ಹಾಗರಗಿ, ಸಣ್ಣೂರು, ನಂದೂರು (ಕೆ), ಕಲ್ಲಹಂಗರಗಾ, ಹರಸೂರ, ಹಡಗಿಲ ಹಾರುತಿ, ಕೆಸರಟಗಿ ಮಾರ್ಗದ ರಾಜ್ಯ ಹೆದ್ದಾರಿ ಹಾಗೂ ಮಾಲಗತ್ತಿ, ಶ್ರೀನಿವಾಸ ಸರಡಗಿ, ಪಾಳಾ, ಹುಣಸಿ ಹಡಗಿಲ, ಕುಮಸಿ, ಕುಸನೂರು, ತಾವರಗೇರಾ ಗ್ರಾಮಗಳ ನಡುವಿನ ಜಿಲ್ಲಾ ರಸ್ತೆಗಳು ಗುಂಡಿಗಳಿಂದ ಮುಕ್ತವಾಗಿಲ್ಲ.

ಕಲಬುರಗಿ ರಿಂಗ್ ರೋಡ್ ಸಮೀಪ ಕುಸನೂರು ಜಿಲ್ಲಾ ರಸ್ತೆಯ ದುಃಸ್ಥಿತಿ

‘ರಸ್ತೆಗಳ ದುರಸ್ತಿ ಆರಂಭ’

‘ಲೋಕೋಪಯೋಗಿ ಇಲಾಖೆಯು (ಪಿಡಬ್ಲ್ಯುಡಿ) ರಸ್ತೆಗಳ ದುರಸ್ತಿಗೆ ಈಗಾಗಲೇ ಸರ್ವೆ ನಡೆಸಿ ಅಂದಾಜು ವೆಚ್ಚದ ಪಟ್ಟಿ ತಯಾರಿಸಿದ್ದು ದುರಸ್ತಿ ಕಾರ್ಯವೂ ಕೈಗೆತ್ತಿಕೊಳ್ಳಲಾಗಿದೆ. ಪಿಡಬ್ಲ್ಯುಡಿ ಕಲಬುರಗಿ ವಿಭಾಗವು 1291 ಕಿ.ಮೀ. ರಾಜ್ಯ ಹೆದ್ದಾರಿ ದುರಸ್ತಿಗೆ ₹5.90 ಕೋಟಿ ಹಾಗೂ 906 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿಗೆ ₹3.50 ಕೋಟಿ ಅನುದಾನ ತೆಗೆದಿರಿಸಿದೆ’ ಎಂದು ವಿಭಾಗದ ಇಇ ಸುಭಾಷ ಶಿಕ್ಷಣಕರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಶೇ 3ರಿಂದ 3.5ರಷ್ಟು ಗುಂಡಿಗಳು ಬಿದ್ದರೆ ದುರಸ್ತಿಗೆ ಪರಿಗಣಿಸಲಾಗುತ್ತದೆ. ಜಿಲ್ಲೆಯ ರಸ್ತೆಗಳಲ್ಲಿ ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಗುಂಡಿಗಳು ಬಿದ್ದಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಲಹೆಯ ಅನುಸಾರ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದರು.

‘ಸೇಡಂ ವಿಭಾಗ: ₹3.18 ಕೋಟಿ ಅಂದಾಜು’

ಸೇಡಂ ವಿಭಾಗ ವ್ಯಾಪ್ತಿಯ 461 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 462 ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿಗೆ ಕ್ರಮವಾಗಿ ₹1.56 ಕೋಟಿ ಹಾಗೂ ₹1.62 ಕೋಟಿ ಸೇರಿ ಒಟ್ಟು ₹3.18 ಕೋಟಿ ಅನುದಾನ ಅಂದಾಜು ಮಾಡಲಾಗಿದೆ. ರಾಜ್ಯ ಹೆದ್ದಾರಿಯ 155 ಕಿ.ಮೀ. ಹಾಗೂ ಜಿಲ್ಲಾ ಮುಖ್ಯ ರಸ್ತೆಯ 266 ಕಿ.ಮೀ. ನಿರ್ವಹಣೆಗೆ ಬಾಕಿ ಉಳಿದಿದೆ’ ಎಂದು ಸೇಡಂ ವಿಭಾಗದ ಎಎ ದಶರಥ ಗಾಜರೆ ತಿಳಿಸಿದರು. ನಿಗದಿತ ಮೊತ್ತ ಸಾಲದು: ರಾಜ್ಯ ಹೆದ್ದಾರಿಯ 1 ಕಿ.ಮೀ. ವ್ಯಾಪ್ತಿಯಲ್ಲಿನ ಗುಂಡಿಗಳ ದುರಸ್ತಿಗೆ ₹1 ಲಕ್ಷ ಹಾಗೂ ಜಿಲ್ಲಾ ರಸ್ತೆಗೆ ₹60 ಸಾವಿರ ನಿಗದಿ ಮಾಡಲಾಗಿದೆ. ಅದರಲ್ಲಿಯೇ ಜಿಎಸ್‌ಟಿ 30 ಕಿ.ಮೀ. ವ್ಯಾಪ್ತಿಗೆ ಒಬ್ಬರಂತೆ ಕೇರ್‌ಮ್ಯಾನ್ ರಸ್ತೆ ಬದಿಯ ಗಿಡಗಂಟಿಗಳ ತೆರವಿಗೂ ಖರ್ಚು ಮಾಡಬೇಕಿದೆ. ಟೆಂಡರ್‌ನಲ್ಲಿ ನಿಗದಿಪಡಿಸಿದ ಈ ಮೊತ್ತ ಸಾಕಾಗುವುದಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.