ADVERTISEMENT

ಚಿಂಚೋಳಿ |ಹೆದ್ದಾರಿಯಲ್ಲಿ ಪ್ರಯಾಣಿಕರ ಸರ್ಕಸ್; ಅನುದಾನ ನೀಡುವಲ್ಲಿ ತಾರತಮ್ಯ ಆರೋಪ

ಜಗನ್ನಾಥ ಡಿ.ಶೇರಿಕಾರ
Published 28 ಸೆಪ್ಟೆಂಬರ್ 2024, 5:59 IST
Last Updated 28 ಸೆಪ್ಟೆಂಬರ್ 2024, 5:59 IST
ಚಿಂಚೋಳಿ ತಾಲ್ಲೂಕು ಚಿಮ್ಮಾಈದಲಾಯಿ ಬಳಿ ರಾಜ್ಯ ಹೆದ್ದಾರಿ 15ರಲ್ಲಿ ಬಿದ್ದಿರುವ ಬೈಕ್ ಸವಾರರನ್ನು ಬಿಜೆಪಿ ಮುಖಂಡ ಶರಣಪ್ಪ ತಳವಾರ ಮೇಲೆತ್ತಿದ್ದರು
ಚಿಂಚೋಳಿ ತಾಲ್ಲೂಕು ಚಿಮ್ಮಾಈದಲಾಯಿ ಬಳಿ ರಾಜ್ಯ ಹೆದ್ದಾರಿ 15ರಲ್ಲಿ ಬಿದ್ದಿರುವ ಬೈಕ್ ಸವಾರರನ್ನು ಬಿಜೆಪಿ ಮುಖಂಡ ಶರಣಪ್ಪ ತಳವಾರ ಮೇಲೆತ್ತಿದ್ದರು    

ಚಿಂಚೋಳಿ: ತಾಲ್ಲೂಕಿನಲ್ಲಿ ಹೆದ್ದಾರಿಗಳು ಹಾಳಾಗಿದ್ದರೂ ಅವುಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿಕೆಯಲ್ಲಿ ತಾತ್ಸಾರ ಧೋರಣೆ ತಳೆಯುತ್ತಿರುವುದಕ್ಕೆ ತಾಲ್ಲೂಕಿನ ಜನರಲ್ಲಿ ಬೇಸರ ಮೂಡಿಸಿದೆ.

ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಜತೆಗೆ ವಿಶೇಷ ಅನುದಾನ ಮರಿಚೀಕೆಯಾಗಿದೆ. ಶಾಸಕರು ಬಿಜೆಪಿಯವರಾಗಿದ್ದರಿಂದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬ ಆರೋಪ ಜನ ಸಾಮಾನ್ಯರಿಂದ ಕೇಳಿ ಬರುತ್ತಿದೆ.

ಐನಾಪುರ ಏತ ನೀರಾವರಿ ಯೋಜನೆಗೆ 2 ವರ್ಷದ ಹಿಂದೆಯೇ ಕ್ಯಾಬಿನೆಟ್ ಅನುಮೋದನೆ ದೊರಕಿದ್ದು, ಟೆಂಡರ್ ಅಂತಿಮಗೊಂಡಿದೆ. ಆದರೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಅನುಮೋದನೆಗಾಗಿ ಒಂದೂವರೆ ವರ್ಷದಿಂದ ಚಾತಕ ಪಕ್ಷಿಯಂತೆ ಕಾಯುತ್ತಿರುವ ಜನರಲ್ಲಿ ಬೇಸರ ಮೂಡಿಸುತ್ತಿದೆ.

ADVERTISEMENT

ನಾಗಾಈದಲಾಯಿ ಕೆರೆ ಕಾಯಕಲ್ಪಕ್ಕೆ ಕಾಯುತ್ತಿದೆ. ಸೋರುತ್ತಿರುವ ನ್ಯಾಯಾಲಯ ಕಟ್ಟಡಕ್ಕೆ ಪ್ರತಿಯಾಗಿ ಹೊಸ ಕಟ್ಟಡದ ಪ್ರಸ್ತಾವನೆಗೂ ಕಲಬುರಗಿ ಕ್ಯಾಬಿನೆಟ್ ಅನುಮೋದಿಸಿಲ್ಲ. ಸ್ನಾತಕೋತ್ತರ ಕೇಂದ್ರ, ಅರಣ್ಯ ಕಾಲೇಜು ಮರೀಚಿಕೆಯಾಗಿವೆ. ಬಹು ನಿರೀಕ್ಷೆಯ ಪರಿಸರ ಪ್ರವಾಸೋದ್ಯಮ ಉತ್ತೇಜನವೂ ಗಗನಕುಸುಮವಾಗಿದೆ.

ಚಿಂಚೋಳಿ – ಭಾಲ್ಕಿ ರಾಜ್ಯ ಹೆದ್ದಾರಿ 75, ರಾಯಚೂರು – ವನ್ಮಾರಪಳ್ಳಿ ರಾಜ್ಯ ಹೆದ್ದಾರಿ 15, ರಾಷ್ಟ್ರೀಯ  ಹೆದ್ದಾರಿ 167, ರಾಜ್ಯ ಹೆದ್ದಾರಿ ಶಹಾಪುರ – ಶಿವರಾಂಪುರ 149 ವ್ಯಾಪ್ತಿಯಲ್ಲಿ ಬರುವ ಗಣಾಪುರದಿಂದ ಕುಂಚಾವರಂ ಕ್ರಾಸ್ ಹಾಗೂ ಕುಂಚಾವರಂ ಕ್ರಾಸ್‌ನಿಂದ ಕುಂಚಾವರಂವರೆಗೆ ರಸ್ತೆಗಳು ಕೆಟ್ಟು ಹೋಗಿವೆ. ಇದರಲ್ಲಿ ಚಿಂಚೋಳಿಯಿಂದ ಸುಲೇಪೇಟವರೆಗಿನ ಹೆದ್ದಾರಿ ಸಂಚಾರ ನರಕ ದರ್ಶನ ಮಾಡಿಸುತ್ತಿದೆ.

‘ನಿತ್ಯ ಈ ರಸ್ತೆಯಲ್ಲಿ ಪ್ರಯಾಣಿಕರ ವಾಹನಗಳು ಮಗುಚಿ ಬೀಳುತ್ತಿವೆ. ಚಿಂಚೋಳಿ ತಾಲ್ಲೂಕಿನಲ್ಲಿ ಹೆದ್ದಾರಿಗಳು ಹಾಳಾಗಿದ್ದರಿಂದ ವಿಶೇಷ ಅನುದಾನ ಬರುತ್ತಿಲ್ಲ. ಎಲ್ಲದಕ್ಕೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯತ್ತ ಸರ್ಕಾರ ಬೊಟ್ಟು ಮಾಡುವುದು ಸರಿಯಲ್ಲ. ಗಡಿ ತಾಲ್ಲೂಕಿಗೆ ವಿಶೇಷ ಅನುದಾನ ನೀಡಬೇಕು’ ಎಂದು ಬಿಜೆಪಿ ಮುಖಂಡ ಶರಣಪ್ಪ ತಳವಾರ ಒತ್ತಾಯಿಸಿದರು.

ಚಿಂಚೋಳಿ ತಾಲ್ಲೂಕು ಸುಲೇಪೇಟ ಹೊಡೇಬೀರನಹಳ್ಳಿ ಮಧ್ಯೆ ರಾಜ್ಯ ಹೆದ್ದಾರಿ 32ರಲ್ಲಿ ಗುಂಡಿಗೆ ಗಿಡದ ಟೊಂಗೆಗಳಿಂದ ಅಪಾಯದ ಸೂಚನೆ ನೀಡುತ್ತಿರುವುದು ಮುಖಂಡ ಅಮರ ಲೊಡ್ಡನೋರ ತೋರಿಸಿದರು
ಚಿಂಚೋಳಿ ಕ್ಷೇತ್ರದ ಜನರ ಮೇಲೆ ಕಾಂಗ್ರೆಸ್ ನಾಯಕರು ಸೇಡು ತೀರಿಸಿಕೊಳ್ಳಲು ಅನುದಾನ ನೀಡದೇ ಕ್ಷೇತ್ರ ಕಪ್ಪುಪಟ್ಟಿಗೆ ಹಾಕಿದಂತಿದೆ. ಸರ್ಕಾರದ ಮಲತಾಯಿ ಧೋರನೆ ಖಂಡಿಸುತ್ತೇನೆ
-ಶರಣಪ್ಪ ತಳವಾರ, ಬಿಜೆಪಿ ಮುಖಂಡ
ಅನುದಾನ ನೀಡಿಕೆಯಲ್ಲಿ ಚಿಂಚೋಳಿ ಕ್ಷೇತ್ರ ಕಡೆಗಣಿಸಲಾಗುತ್ತಿದೆ. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು. ಇದರಿಂದ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ
-ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಅಧ್ಯಕ್ಷ ಪ್ರಾಂತ ರೈತ ಸಂಘ ಕಲಬುರಗಿ
ಅನುದಾನ ನೀಡಿಕೆಯಲ್ಲಿ ಪಕ್ಷಪಾತ ಮಾಡುತ್ತಿಲ್ಲ. ಕೆಕೆಆರ್‌ಡಿಬಿಯ ಅತಿ ಹೆಚ್ಚು ಅನುದಾನ ಚಿಂಚೋಳಿಗೆ ನೀಡಲಾಗಿದೆ. ಈ ಅನುದಾನ ಎಲ್ಲಿಗೆ ಹೋಗಿದೆ ಎಂಬುದನ್ನು ಶಾಸಕರಿಂದ ತಿಳಿದುಕೊಳ್ಳಲಿ
-ಸುಭಾಷ ರಾಠೋಡ್, ಕೆಪಿಸಿಸಿ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.