ADVERTISEMENT

ಕಲಬುರಗಿ: ಜಿಮ್‌ ಉದ್ಘಾಟನೆಗೆ ಕೂಡಿ ಬಾರದ ಮುಹೂರ್ತ

ಪಾಲಿಕೆಯಿಂದ ನಿರ್ಮಿಸಿರುವ ಅಂಗವಿಕಲ ಸ್ನೇಹಿ ಜಿಮ್‌: ಉದ್ಘಾಟನೆಗೂ ಮುನ್ನವೇ ಹಾಳಾದ ಇಪಿಡಿಎಂ!

ಬಸೀರ ಅಹ್ಮದ್ ನಗಾರಿ
Published 18 ಅಕ್ಟೋಬರ್ 2024, 7:33 IST
Last Updated 18 ಅಕ್ಟೋಬರ್ 2024, 7:33 IST
ಕಲಬುರಗಿಯ ಸಾರ್ವಜನಿಕ ಉದ್ಯಾನದಲ್ಲಿ ನಿರ್ಮಿಸಿರುವ ಅಂಗವಿಕಲಸ್ನೇಹಿ ಓಪನ್‌ ಜಿಮ್‌ನ ನೆಲಹಾಸಿನ ಮೇಲೆ ಕಸ ಹಬ್ಬುತ್ತಿದೆ
ಕಲಬುರಗಿಯ ಸಾರ್ವಜನಿಕ ಉದ್ಯಾನದಲ್ಲಿ ನಿರ್ಮಿಸಿರುವ ಅಂಗವಿಕಲಸ್ನೇಹಿ ಓಪನ್‌ ಜಿಮ್‌ನ ನೆಲಹಾಸಿನ ಮೇಲೆ ಕಸ ಹಬ್ಬುತ್ತಿದೆ   

ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ಅಂಗವಿಕಲರ ಸ್ನೇಹಿ ಆಕರ್ಷಕ ಓಪನ್‌ ಜಿಮ್‌ ನಿರ್ಮಿಸಿ ಆರು ತಿಂಗಳಾದರೂ ಈತನಕ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಬಣ್ಣ–ಬಣ್ಣದ ಅತ್ಯಾಕರ್ಷಕ ಸಿಂಥೆಟಿಕ್‌ ರಬ್ಬರ್‌ (ಇಪಿಡಿಎಂ) ನೆಲಹಾಸು ಹಾಗೂ ಅಂಗವಿಕಲರಸ್ನೇಹಿ ವ್ಯಾಯಾಮ ಸಲಕರಣೆಗಳು ಈ ಜಿಮ್‌ನ ವೈಶಿಷ್ಟ. ಇಪಿಡಿಎಂಗಾಗಿ ₹ 4 ಲಕ್ಷ ವೆಚ್ಚ ಮಾಡಲಾಗಿದೆ. ‘15 ಎಂಎಂ ದಪ್ಪ ಇರುವ ಇಪಿಡಿಎಂ ಫ್ಲೋರಿಂಗ್‌ ಸಾಮಾನ್ಯ ನೆಲಕ್ಕಿಂತಲೂ ಮೃದು. ಅಂಗವಿಕಲರು ಜಿಮ್‌ ಮಾಡುವಾಗ ಬಿದ್ದರೂ ಪೆಟ್ಟಾಗಲ್ಲ. ಚೆನ್ನಾಗಿ ನಿರ್ವಹಣೆ ಮಾಡಿದರೆ ಏಳೆಂಟು ವರ್ಷಗಳ ಕಾಲ ಬಾಳಿಕೆ ಬರುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಉದ್ಘಾಟನೆಗೂ ಮುನ್ನವೇ ಇಪಿಡಿಎಂ ಉಬ್ಬಿದ್ದು, ನೆಲಹಾಸು ಹಾಳಾಗಿದೆ. ಬಣ್ಣವೂ ತುಸು ಮಾಸುತ್ತಿದೆ.

ತೆರೆದ ಜಿಮ್‌ ಸುತ್ತಲೂ ಸದೃಢವಾದ ಕಬ್ಬಿಣದ ಬೇಲಿ, ಗೇಟ್‌ ಅಳವಡಿಸಿ ಕೀಲಿಯೇನೋ ಹಾಕಲಾಗಿದೆ. ಆದರೆ, ಅದರ ಅಂಚಿನಲ್ಲಿ ಕಸ ಬೆಳೆದು ಇಪಿಡಿಎಂ ಮೇಲೆ ಹಬ್ಬುತ್ತಿದೆ. ಸುರಿಯುತ್ತಿರುವ ಮಳೆ, ಕೆಂಡದಂಥ ಬಿಸಿಲು ಹಾಗೂ ನಿರ್ವಹಣೆಯ ನಿರ್ಲಕ್ಷ್ಯದಿಂದ ಸುಸಜ್ಜಿತ ಸಲಕರಣೆಗಳು ಹಾಳಾಗುವ ಅಪಾಯ ಎದುರಿಸುತ್ತಿವೆ.

ADVERTISEMENT

ಪಾಲಿಕೆಯ 2022–23ನೇ ಸಾಲಿನ 15ನೇ ರಾಜ್ಯ ಹಣಕಾಸು ನಿಧಿಯ ₹ 35 ಲಕ್ಷ ಅನುದಾನದಲ್ಲಿ 12x15 ಮೀಟರ್ ವಿಸ್ತೀರ್ಣದಲ್ಲಿ ಈ ವಿಶೇಷ ಜಿಮ್‌ ನಿರ್ಮಿಸಲಾಗಿದೆ. ಈ ಜಿಮ್‌ನಲ್ಲಿ ಕೂಚಿ ಪ್ಲೇ ಸಿಸ್ಟಮ್ಸ್‌ ಇಂಟರನ್ಯಾಷನಲ್‌ ಕಂಪನಿಯ ಒಟ್ಟು ಒಂಬತ್ತು ಬಗೆಯ ಜಿಮ್‌ ಸಲಕರಣೆಗಳಿವೆ. ಆದರೆ, ಜಿಮ್‌ ಉದ್ಘಾಟನೆ ಆಗದ ಕಾರಣ ಅಂಗವಿಕಲರ ಬಳಕೆಗೆ ಮುಕ್ತವಾಗಿಲ್ಲ.

2023ರ ಅಕ್ಟೋಬರ್‌ನಲ್ಲಿ ಆರಂಭವಾಗಿದ್ದ ಈ ಕಾಮಗಾರಿ 2024ರ ಏಪ್ರಿಲ್‌ನಲ್ಲಿ ಪೂರ್ಣಗೊಂಡಿತ್ತು. ಅದಾಗೀ ಆರು ತಿಂಗಳು ಕಳೆದರೂ ಉದ್ಘಾಟನೆಯಾಗಿಲ್ಲ.

ಆಟಿಕೆ ತಾಣದಲ್ಲೂ ಹಬ್ಬಿದ ಕಸ: ಇನ್ನು, ಈ ವಿಶಿಷ್ಟ ಜಿಮ್‌ ಪಕ್ಕದಲ್ಲೇ ಅಂಗವಿಕಲ ಸ್ನೇಹಿ ಮಕ್ಕಳ ಆಟಿಕೆಗಳ ತಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಅದಕ್ಕೂ ಉದ್ಘಾಟನೆಯ ಮುಹೂರ್ತ ಕೂಡಿ ಬಂದಿಲ್ಲ.

ಆಟಿಕೆಗಳನ್ನು ಅಳವಡಿಸಿರುವ ತಾಣಕ್ಕೂ ಇಪಿಡಿಎಂ ನೆಲಹಾಸು ಹಾಕಲಾಗಿದೆ. ನಾಲ್ಕು ಅಂಗವಿಕಲ ಮಕ್ಕಳ ಸ್ನೇಹಿ ಆಟಿಕೆ ಅಳವಡಿಸಿ, ಸುತ್ತಲೂ ತಂತಿಬೇಲಿ ಕಾಂಪೌಂಡ್‌ ಹಾಕಲಾಗಿದೆ. ಅದರಲ್ಲಿ ಸ್ಪ್ರಿಂಗ್‌ ರೈಡರ್‌, ಎರಡು ಆಸನ ಸಾಮರ್ಥ್ಯದ ಸ್ಪ್ರಿಂಗ್‌ ಸೀಸಾ, ಒಬ್ಬರೇ ಆಡುವ ಬಕೆಟ್‌ ಸ್ವಿಂಗ್‌ ಹಾಗೂ ಎರಡು ಜೋಕಾಲಿಗಳಿವೆ. ಆದರೆ, ಉದ್ಘಾಟನೆಯಾಗದ ಕಾರಣ ಇವು ಬಳಕೆಯೇ ಆಗುತ್ತಿಲ್ಲ. ಈಗಾಗಲೇ ಫ್ಲೋರಿಂಗ್‌ ಬಣ್ಣ ಮಾಸುತ್ತಿದ್ದು, ಸುತ್ತಲೂ ಕಸ ಬೆಳೆದು ಫ್ಲೋರಿಂಗ್‌ ಮೇಲೆ ಹಬ್ಬುತ್ತಿದೆ.

‘ಸಾರ್ವಜನಿಕರ ತೆರಿಗೆ ದುಡ್ಡಲ್ಲಿ ಇಂಥ ಸೌಲಭ್ಯಗಳನ್ನು ನಿರ್ಮಿಸಿ ಅದನ್ನು ಅಂಗವಿಕಲರಿಗೆ ಬಳಕೆಗೆ ನೀಡದಿದ್ದರೆ ಅದರ ಪ್ರಯೋಜನವೇನು? ನಿರ್ಮಾಣ ಮುಗಿದರೂ, ಅದನ್ನು ಉದ್ಘಾಟಿಸಲು ಮೀನಮೇಷ ಎನಿಸುತ್ತಿರುವುದು ಸರಿಯಲ್ಲ. ಕೂಡಲೇ ಪಾಲಿಕೆ ಅಧಿಕಾರಿಗಳು ಉದ್ಘಾಟನೆಗೆ ತುರ್ತು ಕ್ರಮವಹಿಸಬೇಕು’ ಎಂದು ನವಕರ್ನಾಟಕ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಂಬಾಜಿ ಮೇಟಿ ಒತ್ತಾಯಿಸಿದರು.

ಕಲಬುರಗಿಯ ಸಾರ್ವಜನಿಕ ಉದ್ಯಾನದಲ್ಲಿ ನಿರ್ಮಿಸಿರುವ ಅಂಗವಿಕಲ ಮಕ್ಕಳಸ್ನೇಹಿ ಆಟಿಕೆ ತಾಣದ ನೆಲಹಾಸಿನ ಮೇಲೆ ಕಸ ಹಬ್ಬುತ್ತಿರುವುದು
ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಜೊತೆಗೆ ಅಂಗವಿಕಲ ಸ್ನೇಹಿ ಜಿಮ್‌ ಉದ್ಘಾಟಿಸಲು ನಿರ್ಧರಿಸಿದ್ದರಿಂದ ಬಳಕೆಗೆ ಮುಕ್ತಗೊಳಿಸುವಲ್ಲಿ ವಿಳಂಬವಾಗಿದೆ. ಶೀಘ್ರವೇ ಉದ್ಘಾಟನೆಯಾಗಲಿದೆ.
–ಆರ್‌.ಪಿ.ಜಾಧವ, ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ)
ಇಂಥ ಜಿಮ್ ಕಲ್ಯಾಣ ಭಾಗದಲ್ಲೇ ಮೊದಲ ಪ್ರಯತ್ನ. ಅಂಥ ಮಹತ್ವಾಕಾಂಕ್ಷಿ ಜಿಮ್‌ ಜನಬಳಕೆಗೆ ಸಿಗದಿದ್ದರೆ ಪ್ರಯೋಜನವೇನು? ಕೂಡಲೇ ಸಂಬಂಧಪಟ್ಟವರು ಅದನ್ನು ಉದ್ಘಾಟಿಸಿ ಬಳಕೆಗೆ ಮುಕ್ತಗೊಳಿಸಬೇಕು.
–ಬೀರಪ್ಪ ಅಂಡಗಿ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.