ADVERTISEMENT

PV WEB EXCLUSIVE: ‘ಮಂತ್ರಿಗಿರಿ’ ಆಸೆಯಲ್ಲಿ ‘ತ್ಯಾಗ’ದ ಮಾತು; ಮತ್ತದೇ ‘ಬರ’!

ಗಣೇಶ ಚಂದನಶಿವ
Published 6 ಆಗಸ್ಟ್ 2021, 9:23 IST
Last Updated 6 ಆಗಸ್ಟ್ 2021, 9:23 IST
ಕಲಬುರ್ಗಿ ಜಿಲ್ಲೆ ನಕ್ಷೆ
ಕಲಬುರ್ಗಿ ಜಿಲ್ಲೆ ನಕ್ಷೆ   

ಮಂತ್ರಿಗಿರಿಯ ಆಸೆಗಾಗಿ ‘ತ್ಯಾಗ’ದ ಮಾತುಗಳನ್ನಾಡಿದ ಮತ್ತು ಮಂತ್ರಿ ಸ್ಥಾನ ಸಿಗದೇ ಇದ್ದಾಗ ಮೌನಕ್ಕೆ ಶರಣಾದ ಶಾಸಕರೊಬ್ಬರ ಕತೆ ಇದು.

‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಅಧ್ಯಕ್ಷನಾಗಿ ನಾನು ಅಧಿಕಾರ ವಹಿಸಿಕೊಂಡಿದ್ದು 2020ರ ಆಗಸ್ಟ್‌ 3ರಂದು. ನಿಯಮದಂತೆ ಮಂಡಳಿಯ ಅಧ್ಯಕ್ಷರ ಅವಧಿ ಒಂದು ವರ್ಷ. ಈಗ ನನ್ನ ಅವಧಿ ಪೂರ್ಣಗೊಳ್ಳಲಿದ್ದು, ಇದೀಗ ಬೇರೆಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಹಾಲಿ ಮುಖ್ಯಮಂತ್ರಿ ಅವರು ಆದೇಶಿಸಬಹುದು...’ ಎಂದು ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಇದೇ ಜುಲೈ 29ರಂದು ಪತ್ರಿಕಾ ಪ್ರಕಟಣೆ ನೀಡಿದ್ದರು.

‘ಬೊಮ್ಮಾಯಿ ಅವರ ಸಂಪುಟದಲ್ಲಿ ಕಲಬುರ್ಗಿ ಜಿಲ್ಲೆಯ ಕೋಟಾದಿಂದ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಸಚಿವ ಸ್ಥಾನ ಖಚಿತವಾಗಿತ್ತು. ದತ್ತಾತ್ರೇಯ ಅವರೂ ತಮಗೆ ಸಚಿವ ಸ್ಥಾನ ಸಿಕ್ಕೇಬಿಟ್ಟಿತು ಎಂಬ ಉಮೇದಿನಲ್ಲಿ ಹೀಗೆ ಮಂಡಳಿಯ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಕೊಡಬಹುದು ಎಂಬ ‘ತ್ಯಾಗ’ದ ಮಾತುಗಳನ್ನೂ ಆಡಿದ್ದರು’ ಎನ್ನುವುದು ಅವರ ಪಕ್ಷದವರು ಹೇಳುವ ಮಾತು.

ADVERTISEMENT

ಸಂಪುಟದಲ್ಲಿ ದತ್ತಾತ್ರೇಯ ಅವರಿಗೆ ಸಚಿವ ಸ್ಥಾನ ಸಿಗಲೇ ಇಲ್ಲ.ಅಷ್ಟೇ ಏಕೆ, ಆಳಂದ ಶಾಸಕ ಸುಭಾಷ ಗುತ್ತೇದಾರ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ,ವಿಧಾನ ಪರಿಷತ್‌ ಸದಸ್ಯ ಸುನೀಲ್‌ ವಲ್ಲ್ಯಾಪುರ ಅವರು ಮಂತ್ರಿಯಾಗಲು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಚಿಂಚೋಳಿಯ ಡಾ.ಅವಿನಾಶ ಜಾಧವ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್‌ ನಮೋಶಿ ಅವರನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸ್ಥಾನಕ್ಕೆ ಪರಿಗಣಿಸಲಿಲ್ಲ.

‘ಹಿರಿತನ, ಹಿಂದುಳಿದ ಸಮುದಾಯದ ಪ್ರತಿನಿಧಿ ಆಧಾರದಲ್ಲಿ ಸಚಿವ ಸ್ಥಾನ ಕೋರಿದ್ದೆ. ಬೀದರ್‌ ಜಿಲ್ಲೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ನಮಗೆ (ಕಲಬುರ್ಗಿ ಜಿಲ್ಲೆಗೆ) ಸಿಕ್ಕಿಲ್ಲ. ಇದು ಅಚ್ಚರಿ ಮೂಡಿಸಿದೆ’ ಎಂದು ಆಳಂದ ಶಾಸಕ ಸುಭಾಷ ಗುತ್ತೇದಾರ ಪ್ರತಿಕ್ರಿಯಿಸಿದರೆ, ‘ಸಚಿವ ಸ್ಥಾನ ಸಿಗದ್ದಕ್ಕೆ ಬೇಸರ ಇಲ್ಲ. ನಾಲ್ಕು ಸ್ಥಾನ ಖಾಲಿ ಇವೆ. ಅವಕಾಶ ಸಿಗಬಹುದು’ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೆ, ದತ್ತಾತ್ರೇಯ ಪಾಟೀಲ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

ದತ್ತಾತ್ರೇಯ ಅವರ ತಂದೆ ದಿ.ಚಂದ್ರಶೇಖರ ಪಾಟೀಲ ಅವರು ಎರಡು ಅವಧಿಗೆ ಬಿಜೆಪಿಯಿಂದ ಶಾಸಕರಾಗಿದ್ದರು. ಆಗಲೂ ಅವರು ಸಚಿವ ಸ್ಥಾನದಿಂದ ವಂಚಿತರಾಗಿದ್ದರು.ಅವರ ಅಕಾಲಿಕ ನಿಧನದ ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ದತ್ತಾತ್ರೇಯ ಪಾಟೀಲ ಅವರು ತಮ್ಮ ತಾಯಿ ಅರುಣಾದೇವಿ ಚಂದ್ರಶೇಖರ ಪಾಟೀಲ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಿದ್ದರು. ಆ ಚುನಾವಣೆಯಲ್ಲಿ ಅರುಣಾದೇವಿ ಗೆದ್ದಿದ್ದರೂ ಕೂಡ. ನಂತರ ಬಿಜೆಪಿಗೆ ಮರಳಿದ ದತ್ತಾತ್ರೇಯ ಈಗ ಎರಡನೇ ಅವಧಿಗೆ ಶಾಸಕ. ಈ ಕುಟುಂಬದವರು ನಿರಂತರವಾಗಿ ಐದು ಬಾರಿ ಗೆದ್ದಿದ್ದಾರೆ. ಹೀಗಾಗಿ ಸಚಿವ ಸ್ಥಾನ ದತ್ತಾತ್ರೇಯ ಅವರಿಗೇ ಸಿಗಬೇಕು ಎಂಬುದು ಅವರ ಬೆಂಬಲಿಗರ ಪ್ರತಿಪಾದನೆ.

ತ್ಯಾಗದ ಮಾತು ಮತ್ತು ಬಯಕೆ ಏನೇ ಇರಲಿ.ಕಲಬುರ್ಗಿ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಐವರು ಶಾಸಕರು ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಆ ಪಕ್ಷದ ಮೂವರುವಿಧಾನ ಪರಿಷತ್‌ ಸದಸ್ಯರೂ ಇದ್ದಾರೆ. ಆದರೂ ಈ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಪ್ರಕೃತಿ ತಂದೊಡ್ಡುವ ಬರದ ಜೊತೆಗೆ ಈಗ ಸಚಿವ ಸ್ಥಾನದ ‘ಕೃತಕ ಬರ’ವೂ ಮುಂದುವರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.