ADVERTISEMENT

ಕರಣ್‌ ಸಿಂಗ್‌ಗೆ ಚಾಪೆಲ್‌ ಸವಾಲು

ಪುರುಷರ ಐಟಿಎಫ್‌ ಟೆನಿಸ್‌ ಟೂರ್ನಿ: ಸುಲ್ತಾನೋವ್‌, ಬಾಬ್‌ರೋವ್‌ ಎಂಟರಘಟ್ಟಕ್ಕೆ

ಮಲ್ಲಪ್ಪ ಪಾರೇಗಾಂವ
Published 21 ನವೆಂಬರ್ 2024, 23:43 IST
Last Updated 21 ನವೆಂಬರ್ 2024, 23:43 IST
ಭಾರತದ ಕರಣ್‌ ಸಿಂಗ್‌ ಆಟದ ವೈಖರಿ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಭಾರತದ ಕರಣ್‌ ಸಿಂಗ್‌ ಆಟದ ವೈಖರಿ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: ನಾಲ್ಕನೇ ಶ್ರೇಯಾಂಕದ ಆಟಗಾರ, ಭಾರತದ ಕರಣ್‌ ಸಿಂಗ್‌, ಐಟಿಎಫ್‌ ಪುರುಷರ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದು, ಗುರುವಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಇಲ್ಲಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಕರಣ್‌ ಸಿಂಗ್‌ 6–4, 6–3ರಿಂದ ಸ್ವದೇಶದ ನಿತಿನ್‌ ಕುಮಾರ್‌ ಸಿನ್ಹಾ ಅವರನ್ನು ಪರಾಭವಗೊಳಿಸಿದರು. ಎಂಟರ ಘಟ್ಟದಲ್ಲಿ ಅವರಿಗೆ ಆರನೇ ಶ್ರೇಯಾಂಕದ ನಿಕ್‌ ಚಾಪೆಲ್‌ (ಅಮೆರಿಕ) ಸವಾಲು ಎದುರಾಗಿದೆ. 16ರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಚಾಪೆಲ್‌ 6–3, 6–2ರಿಂದ ಇಂಡೊನೇಷ್ಯಾದ ಅಂಥೋನಿ ಸುಸಾಂತೊ ವಿರುದ್ಧ ಗೆಲುವು ಸಾಧಿಸಿದರು.

ಅಗ್ರ ಶ್ರೇಯಾಂಕದ ಖುಮೋಯುನ್‌ ಸುಲ್ತಾನೋವ್‌ 6–4, 6–0ರಿಂದ ಭಾರತದ ಧೀರಜ್‌ ಕೆ. ಶ್ರೀನಿವಾಸ್‌ ವಿರುದ್ಧ ಗೆಲುವು ಸಾಧಿಸಿದರು. ಧೀರಜ್‌, ಮೊದಲ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದರು. ಆದರೆ, ಎರಡನೇ ಸೆಟ್‌ನಲ್ಲಿ ಒಂದೂ ಗೇಮ್‌ ಗಳಿಸಲು ಸಾಧ್ಯವಾಗಲಿಲ್ಲ. ಸುಲ್ತಾನೋವ್‌ ಕ್ವಾರ್ಟ್‌ರ್‌ಫೈನಲ್‌ನಲ್ಲಿ ಎಂಟನೇ ಶ್ರೇಯಾಂಕದ ಮ್ಯಾಕ್ಸಿಂಗ್‌ ಝುಕೋವ್‌ (ರಷ್ಯಾ) ಸವಾಲು ಎದುರಿಸಲಿದ್ದಾರೆ.

ADVERTISEMENT

ಪ್ರಜ್ವಲ್‌ ನಿರ್ಗಮನ:

ಕರ್ನಾಟಕದ ಎಸ್‌.ಡಿ. ಪ್ರಜ್ವಲ್‌ ದೇವ್‌ ಇನ್ನೊಂದು ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ರಷ್ಯಾದ ಬಾಗ್ದಾನ್‌ ಬಾಬ್‌ರೋವ್‌ ಎದುರು 2–6, 3–6ರಿಂದ ಸೋಲೊಪ್ಪಿಕೊಂಡು ಟೂರ್ನಿಯಿಂದ ಹೊರಬಿದ್ದರು.

ಭಾರತದ ದೇವ್‌ ಜೇವಿಯಾ 5–7, 6–2, 6–2 ರಿಂದ ಇಂಡೋನೇಷ್ಯಾದ ಎಂ.ಆರ್‌. ಫಿತ್ರಿಯಾದಿ ವಿರುದ್ಧ ಗೆಲುವು ಸಾಧಿಸಿ ಎಂಟರ ಘಟ್ಟ ಪ್ರವೇಶಿಸಿದರು. ಅಲ್ಲಿ ಅವರು ಸಿದ್ಧಾರ್ಥ್‌ ರಾವತ್‌ ಅವರನ್ನು ಎದುರಿಸಲಿದ್ದಾರೆ. ಸಿದ್ಧಾರ್ಥ್‌ ಹಿಂದಿನ ಪಂದ್ಯದಲ್ಲಿ ಅಮೆರಿಕದ ಆದಿತ್ಯ ಗಣೇಶನ್‌ ಅವರನ್ನು 6–3, 7–6ರಿಂದ ಮಣಿಸಿದ್ದರು.

ಡಬಲ್ಸ್‌: ಸಿದ್ಧಾಂತ್‌–ವಿಷ್ಣು ಸೆಮಿಗೆ

ಭಾರತದ ಸಿದ್ಧಾಂತ್‌ ಬಾಂಥಿಯಾ–ವಿಷ್ಣುವರ್ಧನ್‌ ಜೋಡಿ ಹಾಗೂ ರಿಷಭ್‌ ಅಗರವಾಲ್‌–ಕಬೀರ್‌ ಹನ್ಸ್‌ ಜೋಡಿ ಡಬಲ್ಸ್‌ ವಿಭಾಗದ ಸೆಮಿಫೈನಲ್ ಪ್ರವೇಶಿಸಿದವು.

ಎಂಟರ ಘಟ್ಟದಲ್ಲಿ ಸಿದ್ಧಾಂತ್‌ –ವಿಷ್ಣುವರ್ಧನ್‌ ಜೋಡಿ 4–6, 6–2, 10–7ರಿಂದ ಇಂಡೋನೇಷ್ಯಾದ ಎಂ.ಆರ್. ಫಿತ್ರಿಯಾದಿ–ರಿಷಿ ರೆಡ್ಡಿ ಜೋಡಿಯನ್ನು ಮಣಿಸಿತು. ಅಲ್ಲಿ ಈ ಜೋಡಿಯು ಅಗ್ರಶ್ರೇಯಾಂಕದ ರಷ್ಯಾದ ಅಗಾಫನೋವ್‌–ಬಾಬ್‌ರೋವ್‌ ಸವಾಲನ್ನು ಎದುರಿಸಲಿದೆ.

ರಷ್ಯಾದ ಜೋಡಿಯು ಕ್ವಾರ್ಟರ್‌ನಲ್ಲಿ 1–6, 7–6, 10–7ರಿಂದ ಆದಿತ್ಯ ಗಣೇಶನ್‌–ಆರ್ಯನ್‌ ಷಾ ಜೋಡಿಯನ್ನು ಪರಾಭವಗೊಳಿಸಿತ್ತು.

ಇನ್ನೊಂದು ಪಂದ್ಯದಲ್ಲಿ ಭಾರತದ ರಿಷಭ್‌ ಅಗರವಾಲ್‌–ಕಬೀರ್‌ ಹನ್ಸ್‌ ಜೋಡಿ 7–5, 6–3ರಿಂದ ಪರೀಕ್ಷಿತ್‌ ಸೋಮಾನಿ–ಮನೀಶ್‌ ಸುರೇಶ್‌ಕುಮಾರ್‌ ಜೋಡಿಯನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿತು. ಸೆಮಿಯಲ್ಲಿ ಈ ಜೋಡಿಯು ನಿಕ್‌ ಚಾಪೆಲ್‌–ನಿತಿನ್‌ ಕುಮಾರ್‌ ಸಿನ್ಹಾ ಜೋಡಿಯನ್ನು ಎದುರಿಸಲಿದೆ. ಚಾಪೆಲ್‌–ನಿತಿನ್‌ ಕ್ವಾರ್ಟರ್‌ನಲ್ಲಿ ಯಶ್‌ ಚೌರಾಸಿಯಾ–ಕರಣ್‌ ಸಿಂಗ್‌ ಜೋಡಿಯನ್ನು 6–2, 7–5ರಿಂದ ಪರಾಭವಗೊಳಿಸಿದರು.

ಡಬಲ್ಸ್ ವಿಭಾಗದಲ್ಲಿ ಭಾರತದ ಸಿದ್ಧಾಂತ್‌ ಬಂಥಿಯಾ–ವಿಷ್ಣು ವ‌ರ್ಧನ್‌ ಆಟದ ಪರಿ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.