ಕಲಬುರಗಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗಿವೆ. ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ, ವಿಧಾನಸೌಧದಲ್ಲಿ ದೇಶದ್ರೋಹದ ಹೇಳಿಕೆಗಳ ಬಗ್ಗೆ ತಕ್ಷಣದ ಕ್ರಮಕ್ಕೆ ಸರ್ಕಾರ ಮುಂದಾಗುತ್ತಿಲ್ಲ ಎಂದರು.
'ಮಂಗಳೂರು ಹಾಗೂ ಉಡುಪಿಯಲ್ಲಿ ಹಿಂದೂ ಕಾರ್ಯಕರ್ತರನ್ನು ಗಡೀಪಾರು ಮಾಡಲಾಗುತ್ತದೆ. ಹಿಂದೂ ಕಾರ್ಯಕರ್ತರ ಹತ್ಯೆಗಳೂ ನಡೆಯುತ್ತಿವೆ' ಎಂದು ಟೀಕಿಸಿದರು.
ಎಫ್ ಎಸ್ ಎಲ್ ವರದಿ ತಪ್ಪಿದ್ದರೆ ಕೇಸ್ ಹಾಕಿ: ಸರ್ಕಾರದ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ ಎಸ್ ಎಲ್) ವರದಿ ಇನ್ನೂ ಬಂದಿಲ್ಲ. ಖಾಸಗಿ ಸಂಸ್ಥೆ ನೀಡಿದ ವರದಿಯಲ್ಲಿ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜ ಎಂದು ಹೇಳಿದೆ. ವರದಿಯ ಬಗ್ಗೆ ಆಕ್ಷೇಪಗಳಿದ್ದರೆ ಸಂಸ್ಥೆಯ ವಿರುದ್ಧ ಕೇಸ್ ಹಾಕಲಿ ಎಂದು ಸವಾಲು ಹಾಕಿದರು.
ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಟಿಕೆಟ್ ಹಂಚಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಎಚ್.ಡಿ. ದೇವೇಗೌಡ ಅವರಿಗೆ ಅನಾರೋಗ್ಯ ಇದ್ದುದರಿಂದ ದೆಹಲಿಗೆ ಹೋಗಲು ಸಾಧ್ಯವಾಗಿಲ್ಲ. ಮಾರ್ಚ್ 6ರಂದು ದೇವೇಗೌಡರು ದೆಹಲಿಗೆ ತೆರಳಲಿದ್ದು, ಅಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಮಂಡ್ಯ ಕ್ಷೇತ್ರದಿಂದ ಸುಮಲತಾ ಸ್ಪರ್ಧೆಯ ಕುರಿತು ಪ್ರತಿಕ್ರಿಯಿಸಿದ ಅಶೋಕ, ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸಲು ನಮ್ಮ ತಕರಾರಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡುತ್ರದೋ ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಉಪ ನಾಯಕ ಸುನೀಲ್ ವಲ್ಯಾಪುರೆ, ಶಾಸಕ ಬಸವರಾಜ ಮತ್ತಿಮಡು, ಕೆಕೆಆರ್ ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.