ADVERTISEMENT

ಗಣರಾಜ್ಯೋತ್ಸವ: ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಹಕಾರ ಕೋರಿದ ಜಿಲ್ಲಾಧಿಕಾರಿ

ಜಿಲ್ಲಾಡಳಿತದಿಂದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 14:44 IST
Last Updated 26 ಜನವರಿ 2020, 14:44 IST
ಕಲಬುರ್ಗಿಯ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶರತ್ ಬಿ, ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ, ಎಸ್ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್, ಜಿ.ಪಂ. ಸಿಇಒ ಡಾ.ರಾಜಾ ಪಿ. ಭಾಗವಹಿಸಿದ್ದರು
ಕಲಬುರ್ಗಿಯ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶರತ್ ಬಿ, ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ, ಎಸ್ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್, ಜಿ.ಪಂ. ಸಿಇಒ ಡಾ.ರಾಜಾ ಪಿ. ಭಾಗವಹಿಸಿದ್ದರು   

ಕಲಬುರ್ಗಿ: ಫೆಬ್ರವರಿ 5ರಿಂದ 7ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗಿದಾರರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಮನವಿ ಮಾಡಿದರು.

71ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಭಾನುವಾರ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆ ಸಾಕ್ಷಿಯಾಗಲಿದೆ. ನುಡಿ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರ, ವಿಜೃಂಭಣೆಯಿಂದ ಹಾಗೂ ಅಷ್ಟೇ ಅರ್ಥಪೂರ್ಣವಾಗಿ ಸದಾಕಾಲಕ್ಕೂ ಸ್ಮರಣೀಯವಾಗುವಂತೆ ಅಚ್ಚುಕಟ್ಟಾಗಿ ರೂಪಿಸಲಾಗುತ್ತಿದೆ ಎಂದು ಹೇಳಿದರು.

‘ಕಳೆದ ನವೆಂಬರ್‌ 22ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಲಬುರ್ಗಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು. ವಾಣಿಜ್ಯ ಸಂಚಾರ ಆರಂಭಗೊಂಡ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆ, ವಾಣಿಜ್ಯೋದ್ಯಮ, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಹೂಡಿಕೆ, ಉದ್ಯೋಗ ಸೃಷ್ಟಿಗೆ ವಿಫುಲ ಅವಕಾಶಗಳು ಲಭಿಸಿವೆ ಎಂದರು.

ADVERTISEMENT

ಪ್ರಧಾನಮಂತ್ರಿ ಕೃಷಿ ಸಮ್ಮಾನ ನಿಧಿ ಯೋಜನೆಯಡಿ ಭೂ ಸಾಗುವಳಿ ಮಾಡುವ ಜಿಲ್ಲೆಯ 2,42,320 ರೈತರಿಗೆ ₹ 146.44 ಕೋಟಿ ಹಣವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. ರೈತ ಸಿರಿ ಯೋಜನೆಯಡಿ ಜಿಲ್ಲೆಯ 300 ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸಲಾಗಿದ್ದು, ಈಗಾಗಲೇ ₹ 23.50 ಲಕ್ಷ ಪ್ರೋತ್ಸಾಹಧನವನ್ನು ರೈತರ ಖಾತೆಗೆ ಪಾವತಿಸಲಾಗಿದೆ. 8317 ರೈತರಿಗೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಪೂರೈಸಲು ₹ 7.14 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ನಂತರ ವಿವಿಧ ತುಕಡಿಗಳ ಪಥಸಂಚಲನವನ್ನು ವೀಕ್ಷಿಸಿದರು.

ಸ್ವಾತಂತ್ರ್ಯ ಹೋರಾಟಗಾರರಾದ ವೆಂಕಟರಾವ್‌ ಶಿಂಧೆ, ಸೈಯದ್‌ ಖುರ್ಷಿದ್‌ ಅಲಿ, ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಜಿಲ್ಲಾಧಿಕಾರಿ ಅವರ ತಾಂತ್ರಿಕ ಸಹಾಯಕ ಶಂಕರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಅಬ್ದುಲ್‌ ಅಜೀಂ, ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಿಲೀಪ್‌ ಸಿಂಗ್, ಪಾಲಿಕೆ ಸಹಾಯಕ ಎಂಜಿನಿಯರ್‌ ಭೀಮಾಶಂಕರ್‌, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಸಹಾಯಕಿ ಅರ್ಚನಾ ಮಾಡ್ಯಾಳಕರ್‌, ತಹಶೀಲ್ದಾರ್‌ ಕಾರ್ಯಾಲಯದ ಶಿರಸ್ತೇದಾರ್ ನಾಗರತ್ನ, ಕೊಂಚಾವರಂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತುಕ್ಕಪ್ಪ ಉರಡಿ, ಜಿ.ಪಂ. ದ್ವಿತೀಯ ದರ್ಜೆ ಸಹಾಯಕ ರಾಜೇಶ, ಸಣ್ಣೂರ ಗ್ರಾ.ಪಂ. ಗ್ರಾಮ ಲೆಕ್ಕಾಧಿಕಾರಿ ನವಾಜ್‌ ಮಹ್ಮದ್‌ ಕೆ.ಎಂ, ಅರಣ್ಯ ರಕ್ಷಕ ಬಸವಂತಪ್ಪ ಧನೋಜಿ ಹಾಗೂ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ರೈತರು, ಮಾಧ್ಯಮ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಸೇಂಟ್‌ ಜಾನ್ ಇಂಗ್ಲಿಷ್‌ ಮಾಧ್ಯಮ ಶಾಲೆ, ಫರ್ಹಾನ್‌ ಇಂಗ್ಲಿಷ್‌ ಮಾಧ್ಯಮ ಶಾಲೆ, ಶರಣಬಸವೇಶ್ವರ ವಸತಿ ಶಾಲೆ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಸಂಸದ ಡಾ.ಉಮೇಶ ಜಾಧವ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಉಪಾಧ್ಯಕ್ಷೆ ಸಿದ್ದು ಸಿರಸಗಿ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಕನೀಜ್‌ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರ, ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್, ಈಶಾನ್ಯ ವಲಯ ಐಜಿಪಿ ಮನೀಷ್‌ ಖರ್ಬೀಕರ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ, ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಿಕ್ಯಾಳ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ, ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.