ADVERTISEMENT

ವಾಡಿ: ಮಳೆಗೆ ನೆಲಕಚ್ಚಿದ ಭತ್ತ: ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 15:42 IST
Last Updated 3 ನವೆಂಬರ್ 2024, 15:42 IST
ವಾಡಿ ಸಮೀಪದ ಯಾಗಾಪುರ ಗ್ರಾಮದಲ್ಲಿ ಭತ್ತದ ಬೆಳೆ ನೆಲಕಚ್ಚಿರುವುದು
ವಾಡಿ ಸಮೀಪದ ಯಾಗಾಪುರ ಗ್ರಾಮದಲ್ಲಿ ಭತ್ತದ ಬೆಳೆ ನೆಲಕಚ್ಚಿರುವುದು   

ವಾಡಿ: ಶುಕ್ರವಾರ ಹಾಗೂ ಶನಿವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಭತ್ತ ಬೆಳೆದ ರೈತರು ತತ್ತರಿಸಿ ಹೋಗಿದ್ದಾರೆ.

ಜಿಲ್ಲೆಯ ಗಡಿಗ್ರಾಮ ಯಾಗಾಪುರ ಹಾಗೂ ಸುತ್ತಲಿನ ಹಲವು ಕಡೆ ಅಪಾರ ಪ್ರಮಾಣದ ಭತ್ತ ನೆಲ ಕಚ್ಚಿದೆ. ಯಾಗಾಪುರ, ಬೆಳಗೇರ, ಶಿವನಗರ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಭತ್ತ ಮಳೆಯ ಹೊಡೆತಕ್ಕೆ ಸಿಲುಕಿ ಹಾಳಾಗಿದ್ದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಯಾಗಾಪುರದ ದ್ಯಾವಪ್ಪ ಪೋಸ್ತಾ ಅವರ 10 ಎಕರೆ, ನಿಂಗಪ್ಪ ಕೊಟ್ರಿಕಿ 5 ಎಕರೆ, ರವಿ ರಾಠೋಡ 3 ಎಕರೆ ಹಾಗೂ ಬೆಳಗೇರಾ ಗ್ರಾಮದ ರೈತ ಬಸವರಾಜ ಅವರಿಗೆ ಸೇರಿದ 4 ಎಕರೆ ಸಹಿತ ಒಟ್ಟು 30ಕ್ಕೂ ಅಧಿಕ ಎಕರೆ ಭತ್ತ ನೆಲಕ್ಕೆ ಬಿದ್ದು ಹಾಳಾಗಿದೆ.

ADVERTISEMENT

‘15 ದಿನಗಳಲ್ಲಿ ಭತ್ತ ಕೈಸೇರಿ ತಕ್ಕಮಟ್ಟಿಗೆ ಲಾಭ ಸಿಗುತ್ತಿತ್ತು. ಆದರೆ ಪ್ರತಿ ಎಕರೆಗೆ ಸುಮಾರು ₹12 ಸಾವಿರದಿಂದ ₹15 ಸಾವಿರದವರೆಗೂ ವೆಚ್ಚವಾಗಿದೆ. ನಷ್ಟಕ್ಕೆ ಒಳಗಾಗಿದ್ದೇವೆ. ಸರ್ಕಾರ ನೆರವಿಗೆ ಬರಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.

‘ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸಿ ನಷ್ಟಕ್ಕೀಡಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಚಿತ್ತಾಪುರ ತಾಲ್ಲೂಕು ಘಟಕದ ಅಧ್ಯಕ್ಷ ರಾಜಕುಮಾರ ಯರಗೋಳ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.